ಕುಂದಾಪುರ ಶೈಕ್ಷಣಿಕ ವಲಯ: ಶಿಕ್ಷಕರ ದಿನಾಚರಣೆ


ಕುಂದಾಪುರ: ಶಿಕ್ಷಕರು ಸೇವೆಯ ಪ್ರತಿರೂಪ. ವೃತ್ತಿಗೆ ನ್ಯಾಯ ಒದಗಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಏಕಾಗ್ರಚಿತ್ತತೆಯಿಂದ ಪಾಠ ಮಾಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿ ಮಗುವಿನ ಮನಸ್ಸು ತಲುಪುತ್ತದೆ.ಶಿಕ್ಷಕರು ಮೌಲ್ಯಗಳನ್ನು ಪ್ರತಿಪಾದಿಸುವ ಜೊತೆಗೆ ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು’ ಎಂದು ತ್ರಾಸಿ ಕ್ಷೇತ್ರದ ಜಿ.ಪಂ.ಸದಸ್ಯ ಅನಂತ ಮೊವಾಡಿ ಹೇಳಿದರು.
ಉಡುಪಿ ಜಿ.ಪಂ.ಸಾ.ಶಿ.ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಶಿಕ್ಷಕರ ದಿನಾಚರಣೆ ಸಮಿತಿ ಕುಂದಾಪುರ ಇವರ ವತಿಯಿಂದÀ ಬಂಟರ ಯಾನೆ ನಾಡವರ ಸಂಕೀರ್ಣದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಕಡಿಮೆ ವೇತನದಲ್ಲಿ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಶಿಕ್ಷಕರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದರೆ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶಿಕ್ಷಕರು ತಪ್ಪು ಮಾಡಿದರೆ ಅದು ಸಮಾಜವನ್ನು ಅವನತಿಯತ್ತ ಕೊಂಡೋಯ್ಯುತ್ತದೆ. ಶಿಕ್ಷಕ ಹುದ್ದೆಯ ಮೇಲೆ ಸಮಾಜ ಹಾಗೂ ವ್ಯವಸ್ಥೆಯ ಮಹತ್ವ ಜವಾಬ್ದಾರಿಯಿದೆ. ಗೌರವಾರ್ಹವೂ, ಅಪೂರ್ವವೂ ಆದ ಈ ವೃತ್ತಿಬಾಂಧವರ ಸಂಕಷ್ಟದ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಬೇಕು. ಕಾಲಕಾಲಕ್ಕೆ ಶಿಕ್ಷಕರ ಜೀವನಶೈಲಿಯ ಅಧ್ಯಯನ ಮಾಡಿ, ಸಮಸ್ಯೆಗಳಿದ್ದರೆ ಪರಿಹರಿಸಬೇಕು. ಸರ್ವ ಶಿಕ್ಷಾ ಅಭಿಯಾನದಂತಹ ಕಾರ್ಯಕ್ರಮಗಳು ಬಂದ ನಂತರ ಶಿಕ್ಷಕರ ಹೊಣೆಗಾರಿಕೆಯೂ ಹೆಚ್ಚಿದೆ. ಅದಕ್ಕೆ ತಕ್ಕಂತೆ ಸಹಕಾರವನ್ನು ಇಲಾಖೆ ನೀಡಬೇಕು’ ಎಂದರು.
ತಾ.ಪಂ.ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಉಮೇಶ ಪುತ್ರನ್ ಪ್ರಧಾನ ಉಪನ್ಯಾಸ ನೀಡಿದರು. ತಾ.ಪಂ.ಸದಸ್ಯರಾದ ದೀಪಕ್ ಕುಮಾರ್ ಶೆಟ್ಟಿ, ಪಾರ್ವತಿ ಕುಲಾಲ್ ಶಂಕರನಾರಾಯಣ, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ, ಕ.ರಾ.ಸ.ನೌ.ಸಂಘದ ಕುಂದಾಪುರ ತಾಲೂಕು ಶಾಖೆಯ ಅಧ್ಯಕ್ಷ ಕೆ.ದಿನಕರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ ಕುಂದಾಪುರ ವಲಯದ ಅಧ್ಯಕ್ಷ ಸುರೇಶ ನಾಯಕ್, ಪ್ರೌಢಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ವಲಯದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯದ ಅಧ್ಯಕ್ಷ ಸದಾರಾಮ ಶೆಟ್ಟಿ, ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಬಾಲಚಂದ್ರ ಶೆಟ್ಟಿ, ಕುಂದಾಪುರ ವಲಯದ ಅಧ್ಯಕ್ಷ ಕೆ.ಎಸ್.ಮಂಜುನಾಥ, ದೈ.ಶಿ.ಸಂಘದ ಕುಂದಾಪುರ ವಲಯದ ಅಧ್ಯಕ್ಷ ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2012-13ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಹಾಲಾಡಿ ಸ.ಪ್ರೌಢಸಾಲೆಯ ಮುಖ್ಯಶಿಕ್ಷಕಿ ರೋಶನ್ ಬಿಬಿ, ಸಂತೋಷ್ ಕುಮಾರ್ ಶೆಟ್ಟಿ ವಕ್ವಾಡಿ ಇವರನ್ನು ಸನ್ಮಾನಿಸಲಾಯಿತು. ಈ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಸ್ವಾಗತಿಸಿದರು. ಸಿ.ಆರ್.ಪಿ ವೇಣುಗೋಪಾಲ ಹೆಗ್ಡೆ ಮತ್ತು ಹರ್ಕೆಬಾಳು ಶಾಲೆಯ ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಬಿ.ಆರ್.ಪಿ ಉದಯ ಗಾಂವ್ಕರ್ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com