ಮಾನವೀಯತೆ ಮೆರೆದ ನಟಿ ರಮ್ಯಾ!

ಬೆಂಗಳೂರು: ಅಪಘಾತಕ್ಕೀಡಾಗಿ ನರಳುತ್ತಾ ರಸ್ತೆಯಲ್ಲಿ ಬಿದ್ದಿದ್ದ ವಕೀಲರ ನೆರವಿಗೆ ಸ್ಥಳದಲ್ಲಿದ್ದ ಯಾರೂ ಧಾವಿಸದಿದ್ದಾಗ ಅದೇ ವೇಳೆ ಅಲ್ಲಿಗೆ ಬಂದಿದ್ದ ಮಂಡ್ಯ ಲೋಕಸಭಾ ಸದಸ್ಯೆ, ಚಿತ್ರ ನಟಿ ರಮ್ಯಾ ತಕ್ಷಣವೇ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ ಇತರರಿಗೆ ಮಾದರಿಯಾಗಿದ್ದಾರೆ.

68 ವರ್ಷದ ಚಂದ್ರಣ್ಣ ಎಂಬ ವಕೀಲರಿಗೆ ಇತ್ತೀಚೆಗೆ ಕಾರೊಂದು ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಬಿದ್ದವರ ಪರಿಸ್ಥಿತಿ ಏನಾಗಿದೆ ಎಂಬುದರ ಗೋಜಿಗೂ ಹೋಗದೆ ತನ್ನ ಪಾಡಿಗೆ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂದರ್ಭದಲ್ಲಿ ಸುತ್ತಲೂ ಸೇರಿದ 50-60 ಜನ ಸುಮ್ಮನೆ ವೀಕ್ಷಿಸುತ್ತ ನಿಂತಿದ್ದ ವೇಳೆ ಅದೇ ಸ್ಥಳಕ್ಕೆ ಸಂಸದೆ ರಮ್ಯಾ ತಮ್ಮ ಸ್ನೇಹಿತೆಯೊಂದಿಗೆ ಕಾರಿನಲ್ಲಿ ಬಂದಿದ್ದಾರೆ.

ವಕೀಲ ಚಂದ್ರಣ್ಣನವರ ಪರಿಸ್ಥಿತಿ ಗಮನಿಸಿದ ರಮ್ಯಾ ಮತ್ತವರ ಸ್ನೇಹಿತೆ ತಕ್ಷಣವೇ ಸ್ಥಳದಲ್ಲಿದ್ದವರ ನೆರವಿನಿಂದ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹತ್ತಿರದಲ್ಲೇ ಇದ್ದ ಮಲ್ಲಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ತೀವ್ರ ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದ ಚಂದ್ರಣ್ಣನವರಿಗೆ ತಾವೇ ಸ್ವತಃ ತಳ್ಳು ಗಾಡಿ ತಂದು ರಮ್ಯಾ ಕೂರಿಸಿದ್ದಾರೆ.

ಸದ್ಯ ಚೇತರಿಸಿಕೊಳ್ಳುತ್ತಿರುವ ಚಂದ್ರಣ್ಣನವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನೂ ಸ್ವತಃ ರಮ್ಯಾ ಅವರೇ ಭರಿಸಿದ್ದಾರೆನ್ನಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com