ಬಿಪಿಎಲ್‌ ಕಾರ್ಡುದಾರರಿಗೆ ಮತ್ತೊಂದು ಕೊಡುಗೆ

ಆರಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆ.ಜಿ. ಅಕ್ಕಿ ವಿತರಣೆ
ಬೆಂಗಳೂರು: ಬಿಪಿಎಲ್ ಕುಟುಂಬದಲ್ಲಿ ಆರಕ್ಕಿಂತ ಹೆಚ್ಚು ಸದಸ್ಯರಿದ್ದರೆ ನವೆಂಬರ್ ತಿಂಗಳಿನಿಂದ ಆ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ ಐದು ಕೆ.ಜಿ.ಯಂತೆ ಪಡಿತರ ಅಕ್ಕಿ ಸಿಗಲಿದೆ.
ಅಂದರೆ, ಕುಟುಂಬದಲ್ಲಿ ಏಳು ಮಂದಿ ಇದ್ದರೆ 35 ಕೆ.ಜಿ, 8 ಮಂದಿ ಇದ್ದರೆ 40 ಕೆ.ಜಿ. ಅಕ್ಕಿ ಪ್ರತಿ ಕೆ.ಜಿ.ಗೆ ಒಂದು ರುಪಾಯಿಯಂತೆ ಲಭ್ಯವಾಗಲಿದೆ. ಒಂದು ಮನೆಯಲ್ಲಿ 6 ಜನಕ್ಕಿಂತ ಹೆಚ್ಚಿರುವ 8 ಲಕ್ಷ ಕುಟುಂಬಗಳಿಗೆ ಇದರಿಂದ ಪ್ರಯೋಜನವಾಗಲಿದೆ.
ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಿಪಿಎಲ್ ಕುಟುಂಬಕ್ಕೆ 30 ಕೆ.ಜಿ.ವರೆಗೆ ಅಕ್ಕಿ ವಿತರಿಸಲಾಗುತ್ತಿದೆ. ಕುಟುಂಬ ಸದಸ್ಯರ ಸಂಖ್ಯೆ ಎಷ್ಟೇ ಇದ್ದರೂ ಈ ಮಿತಿ ಹೆಚ್ಚಾಗುವುದಿಲ್ಲ.  ಆಹಾರ ಭದ್ರತೆ ಕಾಯ್ದೆ ಜಾರಿಯಾದ ಮೇಲೆ ಗರಿಷ್ಠ 30 ಕೆ.ಜಿ. ಮಿತಿ ರದ್ದಾಗುತ್ತದೆ. ಬದಲಾಗಿ 7 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ನಿಯಮ ಜಾರಿಯಾಗುತ್ತದೆ.     
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಆಹಾರ ಭದ್ರತೆ ಕಾಯ್ದೆಯನ್ನು ರಾಜ್ಯದಲ್ಲಿ ನವೆಂಬರ್‌ನಿಂದ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ನ. 1ರ ಕನ್ನಡ ರಾಜ್ಯೋತ್ಸವ ಅಥವಾ ನ. 19ರ ಇಂದಿರಾ ಗಾಂಧಿ ಜನ್ಮದಿನದಿಂದ ಈ ಯೋಜನೆ ಜಾರಿಯಾಗಲಿದೆ.
ಸಣ್ಣ ಮಾರ್ಪಾಟು: ಆಹಾರ ಭದ್ರತೆ ಕಾಯ್ದೆಯನ್ನು ಯಥಾವತ್ ಜಾರಿಗೆ ತಂದರೆ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಇದ್ದರೆ ಕೇವಲ ಐದು ಕೆ.ಜಿ. ಅಕ್ಕಿ, ಇಬ್ಬರಿದ್ದರೆ 10 ಕೆ.ಜಿ, ಮೂವರಿದ್ದರೆ 15 ಕೆ.ಜಿ. ಅಕ್ಕಿ ಮಾತ್ರ ಸಿಗುತ್ತದೆ. ಅಂದರೆ, ಒಬ್ಬ ವ್ಯಕ್ತಿಗೆ ತಲಾ 5 ಕೆ.ಜಿ. ಅಕ್ಕಿ ವಿತರಿಸಲು ಅವಕಾಶವಿದೆ. ಹೀಗಾಗಿ ಕಾಯ್ದೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿ ಅನ್ನಭಾಗ್ಯ ಯೋಜನೆಯಡಿ ಈಗ ಇರುವಂತೆ ಬಿಪಿಎಲ್ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಇದ್ದರೆ 10 ಕೆ.ಜಿ, ಇಬ್ಬರಿದ್ದರೆ 20 ಕೆ.ಜಿ. ಮತ್ತು ಮೂರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಇದ್ದರೆ 30 ಕೆ.ಜಿ. ಅಕ್ಕಿ ಮುಂದುವರಿಸಲಾಗುತ್ತದೆ. ಆದರೆ, ಕುಟುಂಬ ಸದಸ್ಯರ ಸಂಖ್ಯೆ 6ಕ್ಕಿಂತ ಹೆಚ್ಚಾಗಿದ್ದರೆ ಆಗ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ.ಯಂತೆ ಅಕ್ಕಿ ವಿತರಿಸಲಾಗುತ್ತದೆ.
ರಾಗಿ, ಜೋಳ ಖರೀದಿಗೆ ಟೆಂಡರ್:  ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಜತೆ ಜೋಳ ಮತ್ತು ರಾಗಿ ವಿತರಿಸಲು ಈಗಾಗಲೇ ನಿರ್ಧರಿಸಿರುವ ಸರ್ಕಾರ, ಈ ನಿಟ್ಟಿನಲ್ಲಿ ಅಗತ್ಯ ಜೋಳ ಮತ್ತು ರಾಗಿ ಸಂಗ್ರಹಿಸಲು ಎನ್‌ಸಿಡಿಇಎಕ್ಸ್ ಮೂಲಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ತಿಂಗಳ ಅಂತ್ಯದೊಳಗೆ ಟೆಂಡರ್ ಅಂತಿಮಗೊಳ್ಳಲಿದ್ದು, ಎಷ್ಟು ರಾಗಿ ಮತ್ತು ಜೋಳ ಲಭ್ಯವಾಗುತ್ತದೆ ಎಂಬುದನ್ನು ಆಧರಿಸಿ ಪ್ರತಿ ಕಾರ್ಡ್‌ಗೆ ಎಷ್ಟು ಪ್ರಮಾಣದಲ್ಲಿ ಈ ಧಾನ್ಯ ವಿತರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.
ಬೇಡಿಕೆ ಇರುವೆಡೆ ಪ್ರತಿ ಬಿಪಿಎಲ್ ಕಾರ್ಡ್‌ಗೆ 3ರಿಂದ 8 ಕೆ.ಜಿಯಷ್ಟು ರಾಗಿ ಮತ್ತು ಜೋಳ ವಿತರಿಸುವುದಾದರೆ ಸುಮಾರು 30 ಸಾವಿರ ಟನ್ ಜೋಳ ಮತ್ತು 20 ಸಾವಿರ ಟನ್ ರಾಗಿ ಬೇಕು ಎಂದು ಆಂದಾಜಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಪ್ರಮಾಣದಲ್ಲಿ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಇವುಗಳ ಲಭ್ಯತೆ ನಂತರವೇ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಇತರೆ ಉತ್ಪನ್ನಗಳೂ ಲಭ್ಯ
ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾತ್ರವಲ್ಲ, ತರಕಾರಿ, ಬೇಳೆಕಾಳು ಸೇರಿದಂತೆ ಇತರೆ ನಿತ್ಯೋಪಯೋಗಿ ವಸ್ತುಗಳೂ ಲಭ್ಯವಾಗಲಿವೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ಉತ್ಪನ್ನಗಳ ಮಾರಟಕ್ಕೂ ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾತ್ರ ವಿತರಿಸಲು ಮಾತ್ರ ಅವಕಾಶವಿತ್ತು. ಇದಕ್ಕೆ ಸರ್ಕಾರ ನೀಡುವ ಕಮಿಷನ್ ಕಡಿಮೆಯಾಗಿದ್ದರಿಂದ ಅಂಗಡಿ ಮಾಲೀಕರು ಪಡಿತರ ವಿತರಣೆಯಲ್ಲಿ ಏರುಪೇರು ಮಾಡಿ ಲಾಭ ಗಳಿಸಲು ಮುಂದಾಗುತ್ತಿದ್ದರು.
ಇದನ್ನು ತಪ್ಪಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ತರಕಾರಿ, ಬೇಳೆಕಾಳು ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಅದರಿಂದ ವ್ಯಾಪಾರಿಗಳಿಗೆ ಹೆಚ್ಚು ಕಮಿಷನ್ ಬರುತ್ತದೆ. ಹೀಗಾಗಿ ಪಡಿತರ ವಿತರಣೆಯಲ್ಲಿ ಅವರು ಏರುಪೇರು ಮಾಡುವುದಕ್ಕೆ ಹೋಗುವುದಿಲ್ಲ ಎಂಬುದು ಸರ್ಕಾರದ ಅಭಿಪ್ರಾಯ.
ಆದರೆ, ಇತರೆ ವಸ್ತುಗಳನ್ನು ಮಾರಾಟ ಮಾಡುವ ಭರದಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು. ಲೋಪ ಉಂಟಾದರೆ ಮಾನ್ಯತೆ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.
ಅನ್ನಭಾಗ್ಯಕ್ಕೆ ಸಿಗುತ್ತೆ ಗೋದಿ
ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಿನಿಂದಲೇ ಅಕ್ಕಿಯ ಜತೆಗೆ ಗೋಧಿಯನ್ನೂ ವಿತರಿಸಲಾಗುತ್ತದೆ. ಇದಕ್ಕಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಪ್ರತ್ಯೇಕ ಮಾನದಂಡ ನಿಗದಿಪಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 10 ಕೆ.ಜಿ. ಅಕ್ಕಿ ಪಡೆಯುವ ಅರ್ಹತೆ ಇರುವ ಕಾರ್ಡ್‌ಗೆ 8 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ, 20 ಕೆ.ಜಿ. ಅಕ್ಕಿ ಬದಲಾಗಿ 17 ಕೆ.ಜಿ. ಅಕ್ಕಿ, 3 ಕೆ.ಜಿ. ಗೋಧಿ, 30 ಕೆ.ಜಿ. ಅಕ್ಕಿ ಬದಲಾಗಿ 25 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ವಿತರಿಸಲಾಗುತ್ತದೆ. ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ 10 ಕೆ.ಜಿ. ಅಕ್ಕಿ ಬದಲಾಗಿ 9 ಕೆ.ಜಿ. ಅಕ್ಕಿ, 1 ಕೆ.ಜಿ. ಗೋಧಿ, 20 ಕೆ.ಜಿ. ಅಕ್ಕಿ ಬದಲಾಗಿ 18 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ, 30 ಕೆ.ಜಿ. ಅಕ್ಕಿ ಬದಲಾಗಿ 27 ಕೆ.ಜಿ. ಅಕ್ಕಿ 3 ಕೆ.ಜಿ. ಗೋಧಿ ವಿತರಿಸಲಾಗುತ್ತದೆ.
*ಅರ್ಹರಿಗೆ ಸೂಕ್ತ ಆಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಸರ್ಕಾರ ಪಡಿತರ ವಿತರಣೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಅದೇ ರೀತಿ ನ್ಯಾಯಬೆಲೆ ಅಂಗಡಿಯವರೂ ಸಮಾಧಾನಗೊಂಡರೆ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತ ವಿತರಿಸುತ್ತಾರೆ. ಹೀಗಾಗಿ ಅವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
- ದಿನೇಶ್ ಗುಂಡೂರಾವ್,
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ
ಪ್ರದೀಪ್ ಕುಮಾರ್ ಎಂ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com