ಉಡುಪಿಯ ಸಿಆರ್‌ಝಡ್‌ ಅರ್ಜಿ ಸ್ವೀಕಾರ ನಿರಾಕರಣೆ: ಸಂಸದರ ಆಕ್ಷೇಪ

ಕುಂದಾಪುರ : ಉಡುಪಿಯಲ್ಲಿ ಇರುವ ಸಿಆರ್‌ಝಡ್‌ ಕಚೇರಿ ಮುಂಭಾಗದಲ್ಲಿ 'ಇಲ್ಲಿ ಯಾವುದೇ ಅರ್ಜಿ ಸ್ವೀಕರಿಸಲಾಗುವುದಿಲ್ಲ' ಎಂದು ಫಲಕ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಉಡುಪಿಯಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಿಲ್ಲಿಸದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕುಂದಾಪುರಕ್ಕೆ ಪುರಸಭೆ ಚುನಾವಣೆಗೆ ಆಗಮಿಸಿದ್ದ ಸಂಸದರಿಗೆ ಪಕ್ಷದ ಹಿರಿಯ ಮುಖಂಡರು ಸಿಆರ್‌ಝಡ್‌ ಇಲಾಖೆಯಿಂದ ಸಾರ್ವಜನಿಕರಿಗೆ ಅಗುತ್ತಿರುವ ಅನನುಕೂಲತೆ ಬಗ್ಗೆ ಗಮನ ಸೆಳೆದರು. ಕೂಡಲೇ ಬೆಂಗಳೂರಿನಲ್ಲಿರುವ ಇಲಾಖೆಯ ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿ ಪಡೆದುಕೊಳ್ಳುವ ಪ್ರಕ್ರಿಯೆ ನಿಲ್ಲಿಸದಂತೆ ಹಾಗೂ ಇಲಾಖೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆದ್ಯತೆ ನೀಡುವಂತೆ ಸೂಚಿಸಿದರು.

ಇದೆ ಸಂದರ್ಭ ಮಾಧ್ಯಮ ಪ್ರತಿನಿಧಿಗ‌ಳೊಂದಿಗೆ ಮಾತನಾಡಿದ ಜಯಪ್ರಕಾಶ ಹೆಗ್ಡೆ, ಕುಂದಾಪುರ ರೈಲ್ವೇ ನಿಲ್ದಾಣ ಜಿಲ್ಲೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದು ಎನ್ನುವುದನ್ನು ಕೇಂದ್ರ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಸಿಎಸ್‌ಸಿ ಎಕ್ಸ್‌ಪ್ರೆಸ್‌ (ಮಂಗಳೂರು - ಮುಂಬಯಿ), ಮಂಗಳಾ ಎಕ್ಸ್‌ಪ್ರೆಸ್‌ (ಕೇರಳದ ಕೊಚ್ಚಿ - ದೆಹಲಿ ನಿಜಾಮುದ್ದೀನ್‌) ಹಾಗೂ ಬೇಸಿಗೆ ರಜಾ ಕಾಲದ ವಿಶೇಷ ರೈಲುಗಳು ಸೇರಿದಂತೆ ಪ್ರಮುಖ ಕೆಲವು ರೈಲುಗಳ ನಿಲುಗಡೆಗೆ ಇಲಾಖೆ ಈಗಾಗಲೆ ಕ್ರಮ ಕೈಗೊಂಡಿದೆ. ಇನ್ನೂ ಕೆಲವು ಪ್ರಮುಖ ರೈಲುಗಳ ನಿಲುಗಡೆಗೆ ಹಾಗೂ ಸಾರ್ವಜನಿಕರಿಗೆ ಅನೂಕೂಲವಾಗುವ ಇನ್ನಷ್ಟು ಬೇಡಿಕೆಗಳನ್ನು ಸಚಿವಾಲಯದ ಮುಂದಿರಿಸಿದ್ದು, ಆದಷ್ಟು ಶೀಘ್ರದಲ್ಲಿ ಬೇಡಿಕೆ ಈಡೇರುವ ಭರವಸೆ ಇದೆ ಎಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com