ಬೈಂದೂರಿನಲ್ಲಿ ಜಯ ಕರ್ನಾಟಕ ರಥಯಾತ್ರೆ

ಬೈಂದೂರು: ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ರಥಯಾತ್ರೆ ಸೋಮವಾರ ಬೈಂದೂರು ಪ್ರವೇಶಿಸಿದೆ. 

ಈ ರಥದೊಂದಿಗೆ ಸಂಘಟನೆಯ ಸದಸ್ಯರ ಬೃಹತ್ ವಾಹನ ಜಾಥಾ ನಡೆಯಿತು. ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯದಲ್ಲಿ ಜಯ ಕರ್ನಾಟಕ ಬಲಿಷ್ಠ ಸಂಘಟನೆಯಾಗಿ ಬೆಳೆದು ನಿಂತಿದೆ. ಇಂದು ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದೇಶದಲ್ಲಿ ಶಿಕ್ಷಣ ಮೂಲ ಹಕ್ಕಾಗಿದ್ದರೂ ನಮ್ಮ ಶಿಕ್ಷಣ ಪದ್ಧತಿ ಅಸಮಾನತೆ ಹಾಗೂ ತಾರತಮ್ಯದ ಮಹಾಕೂಪವಾಗಿ ಪರಿವರ್ತಿತವಾಗಿದೆ. ಇಲ್ಲಿ ಬಡ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರ ಮಕ್ಕಳು ಆಂಗ್ಲ ಭಾಷಾ ಮಾಧ್ಯಮದ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇದನ್ನು ಹೋಗಲಾಡಿಸಬೇಕು, ಎಲ್ಲ ಮಕ್ಕಳು ಸಮಾನ ಶಾಲೆಗಳಲ್ಲಿ ಮಾತೃ ಭಾಷೆಯಲ್ಲಿ ಸಮಾನ ಗುಣ ಮಟ್ಟದ ಶಿಕ್ಷಣ ಪಡೆಯುವಂತಾದಾಗ ಮಾತ್ರ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಾಕಾರಗೊಳ್ಳಲು ಸಾಧ್ಯ ಎಂದರು. 

ಇಂದು ಶಿಕ್ಷಣ ಮಾರಾಟದ ವಸ್ತುವಾಗಿದ್ದು, ಹಣವುಳ್ಳವರಿಗೆ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಹಾಗೂ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ವೇಗವಾಗಿ ಖಾಸಗೀಕರಣಗೊಳ್ಳುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅವರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದರು. 

ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಏಕರೂಪ ಶಿಕ್ಷಣ ನೀತಿಗೆ ಜಾರಿಗೊಳಿಸುವಂತೆ ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನೆಲೆಯಲ್ಲಿ ಈ ಜಾಥಾ ಹಮ್ಮಿಕೊಂಡಿದ್ದು, ಇದು ಈಗಾಗಲೇ ರಾಜ್ಯದ 8 ಜಿಲ್ಲೆಗಳಿಗೆ ಭೇಟಿ ನೀಡಿ, ಜನರಲ್ಲಿ ಅರಿವು ಮೂಡಿಸಿದೆ. ಸರಕಾರ ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ ರೂಪಿಸಿ ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್, ಸಂಚಾಲಕ ಅಜಿತ್ ಪ್ರಸಾದ್, ಉಡುಪಿ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಸನತ್ ಬಳೆಗಾರ್, ಸುಬ್ರಹ್ಮಣ್ಯ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಶೇಖರ ಪೂಜಾರಿ ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com