ತಾಳಮದ್ದಳೆಯನ್ನು ಉಳಿಸಿ ಬೆಳೆಸಿ: ಮಲ್ಪೆ ವಾಸುದೇವ ಸಾಮಗ

ಸಿದ್ದಾಪುರ: ಕಾಲಮಿತಿಯ ಯಕ್ಷಗಾನದ ಕುರಿತು ಚರ್ಚೆ ನಡೆಸುತ್ತಿರುವ ನಾವು ತಾಳಮದ್ದಳೆಯನ್ನು ಉಳಿಸಿ ಬೆಳಸುವುದು ಅಗತ್ಯವಾಗಿದೆ. ಟಿವಿ ಮತ್ತು ಸಿನೆಮಾ ಭರಾಟೆಯಲ್ಲಿ ಕಳೆದುಹೋಗುತ್ತಿರುವ ವೌಲ್ಯಗಳನ್ನು ಯಕ್ಷಗಾನ ತಾಳಮದ್ದಳೆಯಲ್ಲಿ ಸುಲಭವಾಗಿ ನಾವು ಪಡೆಯಬಹುದಾಗಿದೆ. ಜೀವನ ವೌಲ್ಯಗಳಿಲ್ಲದೆ ಬದುಕು ದುಸ್ತರವಾಗಿ ತೊಂದರೆ ಎದುರಿಸುತ್ತಿ ರುವ ಯುವ ಸಮುದಾಯ ತಾಳಮದ್ದಳೆ ಕಾರ್ಯಕ್ರಮದ ಬಗ್ಗೆ ಒಲವು ಬೆಳಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರ್ಥಧಾರಿ ಮತ್ತು ಸಂಯಮಂ ತಾಳಮದ್ದಳೆ ತಂಡದ ಸಂಚಾಲಕ ಮಲ್ಪೆ ವಾಸುದೇವ ಸಾಮಗ ಹೇಳಿದರು.   
   ಅವರು ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಉದ್ಘಾಟಿಸಿ ಮಾತನಾಡಿದರು. ಖ್ಯಾತ ಅರ್ಥಧಾರಿಗಳ ಸಹಭಾಗಿತ್ವದಲ್ಲಿ ವಾಲಿ ಮೋಕ್ಷ ಎಂಬ ಪ್ರಸಂಗ ಮನೋಜ್ಞವಾಗಿ ಪದರ್ಶನಗೊಂಡಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಸದಾಶಿವ ಶೆಟ್ಟಿ ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಗ್ರೀವನಾಗಿ ಮಲ್ಪೆ ವಾಸುದೇವ ಸಾಮಗ, ಶ್ರೀರಾಮನಾಗಿ ಪ್ರೊ. ಎಂ.ಎ. ಹಗಡೆ, ವಾಲಿಯಾಗಿ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್, ತಾರೆಯಾಗಿ ನಿಟ್ಟೂರು ಅನಂತ ಹೆಗಡೆ, ಮತ್ತು ಹಿಮ್ಮೇಳದಲ್ಲಿ ಭಾಗವತರಾಗಿ ದೇವರಾಜದಾಸ ಮರವಂತೆ, ಮದ್ದಳೆಯಲ್ಲಿ ಯಲ್ಲಾಪುರ ಶ್ರೀ ರಾಘವೇಂದ್ರ ಹೆಗಡೆ, ಚೆಂಡೆಯಲ್ಲಿ ದೇವಿದಾಸ ಜಲವಳ್ಳಿ ಸಹಹಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. 
      ಕಾಲೇಜಿನ ಪ್ರಿನ್ಸಿಪಾಲ್ ನಾಗರಾಜ ವೈದ್ಯ ಎಂ. ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಸಂಘದ ಸಂಚಾಲಕ ವೆಂಕಟರಾಮ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಶೇಖರ್ ಬೈಲೂರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com