ಹದಿನೈದು ವರ್ಷದಲ್ಲಿ ಮೂರುವರೆ ದಿನ ಮಾತ್ರ ರಜೆ! ಮಾದರಿ ಶಿಕ್ಷಕನಿಗೆ ಮನ್ನಣೆ ನೀಡದ ಶಿಕ್ಷಣ ಇಲಾಖೆ...

ಬೈಂದೂರು: ವಯಕ್ತಿಕತೆಯನ್ನು ಮೀರಿ ಸಮಾಜಮಮಖೀಯಾದಾಗ ಮಾತ್ರ ಕೆಲವು ಕಾರ್ಯಗಳು, ನಿಷ್ಕಲ್ಮಶ ಸೇವೆಗಳು ಗುರುತಿಸಿಕೊಳ್ಳುತ್ತದೆ. ಸರಕಾರಿ ಕೆಲಸವನ್ನು ದೇವರ ಕೆಲಸವೆಂದು ನಂಬಿ ಸೇವೆ ಸಲ್ಲಿಸುವ ಅನೇಕರುಗಳ ನಡುವೆ ಕಳೆದ ಹದಿನೈದು ವರ್ಷ ಶಿಕ್ಷಕ ಸೇವೆಯಲ್ಲಿ ಕೇವಲ ಮೂರುವರೇ ದಿನ ಮಾತ್ರ ರಜೆ ಮಾಡಿದ ಆದರ್ಶ ಶಿಕ್ಷಕನೊಬ್ಬನನ್ನು ಶಿಕ್ಷಕರ ದಿನಾಚರಣೆಯಂದು ಇಲಾಖೆ ಮರೆತಿರುವ ನಿದರ್ಶನ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಉಪ್ಪುಂದದಲ್ಲಿ ನಡೆದಿದೆ.
     ಇಲ್ಲಿನ ಮಡಿಕಲ್‌ ಹಿ.ಪ್ರಾ ಶಾಲೆಯ ಶಿಕ್ಷಕ ಗುರುರಾಜ್‌.ಪಿ.ಕಳೆದ 15 ವರ್ಷಗಳಲ್ಲಿ ಕೇವಲ ಮೂರುವರೆ ದಿನ ಮಾತ್ರ ರಜೆ ಮಾಡಿರುವುದು ಆಶ್ಚರ್ಯವಾದರೂ ಸತ್ಯವಾಗಿದೆ. ಪಡುವರಿ ನಿವಾಸಿಯಾಗಿರುವ ಇವರ ತಂದೆಯು ಕೂಡ ಶಿಕ್ಷಕರಾಗಿದ್ದರು. 1998ರಲ್ಲಿ ಕೊಡೇರಿಯ ಪ್ರಾಥಮಿಕ ಶಾಲೆಗೆ ನಿಯುಕ್ತಿಗೊಂಡು ನಾವುಂದ, ಮಸ್ಕಿ, ಮಡಿಕಲ್‌ ಮುಂತಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರಚಾರ ಬಯಸಲಿಲ್ಲ ಇಲಾಖೆ ಗಮನ ಹರಿಸಲಿಲ್ಲ: ಪ್ರತಿ ಶಿಕ್ಷಕರಿಗೂ ವರ್ಷದಲ್ಲಿ ಹದಿನೇಳು ವಯಕ್ತಿಕ ರಜೆಗಳಿರುತ್ತದೆ. ಅಣ್ಣನ ಮಕ್ಕಳ ಮದುವೆಗೆ ಮೂರು ದಿನ, ಪಕ್ಕದ ಮನೆಯರಿಗೆ ಉಪಕಾರ ಮಾಡುವ ಉದ್ದೇಶದಿಂದ ಅರ್ಧ ದಿನ ರಜೆ ಹಾಕಿದ್ದರು. ಇದನ್ನು ಹೊರತು ಪಡಿಸಿದರೆ ಉಳಿದೆಲ್ಲ ದಿನಗಳನ್ನು ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆದರ್ಶ ವ್ಯಕ್ತಿತ್ವದ ಬಗ್ಗೆ ಉದಯವಾಣಿ ಬೆಳಕು ಚೆಲ್ಲಿತ್ತು. ಇದರಿಂದಾಗಿ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳು ಕಳೆದ ವರ್ಷ ಶಿಕ್ಷಕರ ದಿನಾಚರಣೆಯಂದು ಶಾಲೆಯಲ್ಲಿಯೇ ಸಮ್ಮಾನ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಯಿಸಿದ ಶಿಕ್ಷಕರಾದ ಗುರುರಾಜ್‌ ಪ್ರಶಸ್ತಿಗಳು ಹಾಗೂ ಗುರುತಿಸುವಿಕೆಗಾಗಿ ಸೇವೆ ಮಾಡುತ್ತಿಲ್ಲ. ಬದಲಾಗಿ ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎನ್ನುವ ಸಂತೃಪ್ತಿಯಿದೆ ಏನ್ನುತ್ತಾರೆ.

2010ರ ಜನಗಣತಿಯಲ್ಲಿ ಉತ್ತಮ ಸೇವೆಗಾಗಿ ಕಂಚಿನ ಪದಕ ಪಡೆದಿದ್ದಾರೆ.ಈ ಬಾರಿಯ ಅತ್ಯುತ್ತಮ ಶಿಕ್ಷಕರ ಪಟ್ಟಿಯಲ್ಲಿ ಸೇರಿಸಲು ಮನವಿ ನೀಡಿದರು ಸಹ ಕೊನೆಯ ಹಂತದಲ್ಲಿ ಕೈತಪ್ಪಿದೆ.ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿರುವ ಇಂತಹ ಮಾದರಿ ಶಿಕ್ಷಕರನ್ನು ಇಲಾಖೆ ಶಿಕ್ಷಕರ ದಿನಾಚರಣೆ ಸಂಧರ್ಭದಲ್ಲಿ ಕನಿಷ್ಟ ಪಕ್ಷ ಗುರುತಿಸುವ ಕಾರ್ಯ ಮಾಡದಿರುವುದು ಬೇಸರದ ಸಂಗತಿ ಎನ್ನುವುದು ಸ್ಥಳೀಯ ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.

ವರದಿ: ಅರುಣ ಕುಮಾರ್‌ ಶಿರೂರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com