ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆ ಸೆ. 11: ಭಾರತ ಜಾಗೋ ದೌಡ್‌

ಮಂಗಳೂರು: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಸೆ. 11ರಂದು ಭಾರತ ಜಾಗೋ ದೌಡ್‌ ಕಾರ್ಯಕ್ರಮ ನಗರದಲ್ಲಿ ಜರಗಲಿದೆ ಎಂದು ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿಯ ಮಂಗಳೂರು ವಿಭಾಗ ಸಂಚಾಲಕ ರವೀಂದ್ರ ಪಿ. ತಿಳಿಸಿದ್ದಾರೆ.

ದೇಶಾದ್ಯಂತ 2013ನೇ ಜ. 12ರಿಂದ 2014ನೇ ಜ. 12ರ ತನಕ ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆ ಕಾರ್ಯಕ್ರಮ ಜರಗುತ್ತಿದೆ. ಸ್ವಾಮಿ ವಿವೇಕಾನಂದರು ಶಿಕಾಗೋ ಭಾಷಣ ಮಾಡಿರುವ ಸೆ. 11ರಂದು ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಯುವಜನರ ಹಾಗೂ ಸಾರ್ವಜನಿಕರ ಬೃಹತ್‌ 'ಭಾರತ ಜಾಗೋ ದೌಡ್‌' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

'ಭಾರತ ಏಳಲಿ- ವಿಶ್ವವನ್ನೆಚ್ಚರಿಸಲಿ' ಎಂಬ ಸಂದೇಶದೊಂದಿಗೆ ದಿಗ್ವಿಜಯ ದಿನವನ್ನಾಗಿ ದೌಡ್‌ ಕಾರ್ಯಕ್ರಮ ನಡೆಸಲು ತಯಾರಿ ನಡೆಸಲಾಗಿದೆ. ಬೆಳಗ್ಗೆ 9.30ಕ್ಕೆ ನಗರದ ಜ್ಯೋತಿ ವೃತ್ತದಿಂದ ಕೇಂದ್ರ ಮೈದಾನದ ವರೆಗೆ ದೌಡ್‌ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ ಕಾರ್ಯಕರ್ತ ಪಾಟ್ನಾದ ದತ್ತಾತ್ರೆಯ ಹೊಸಬಾಳೆ ಮಾತನಾಡಲಿದ್ದಾರೆ. ಸುಮಾರು 20,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ವಿವರಿಸಿದರು.

ಪುತ್ತೂರು, ಉಡುಪಿ, ಮಡಿಕೇರಿಯಲ್ಲೂ ಕಾರ್ಯಕ್ರಮ ನಡೆಯಲಿದೆ. ನವೆಂಬರ್‌ನಲ್ಲಿ ಗ್ರಾಮ ಸಂಪರ್ಕ ಕಾರ್ಯಕ್ರಮ ನಡೆಸಿ ಪ್ರತಿ ಗ್ರಾಮಗಳಲ್ಲಿನ ಮನೆಗಳಿಗೆ ತೆರಳಿ ವಿವೇಕಾನಂದರ ವಿಚಾರಧಾರೆಗಳನ್ನು ತಿಳಿಸಲಾಗುವುದು. 2014ರ ಜ. 12ರಂದು ಜನ್ಮ ವರ್ಷಾಚರಣೆಯ ಸಮಾರೋಪ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಾಂತ ಯುವ ವಿಭಾಗದ ಸಹ ಸಂಚಾಲಕ್‌ ಎಂ.ಕೆ. ಸುವೃತ್‌ಕುಮಾರ್‌, ಜಿಲ್ಲಾ ಸಂಚಾಲಕ ಹರ್ಷವರ್ಧನ ಯು. ಕೆ., ಸಮಿತಿ ಸಂಚಾಲಕ ರಮೇಶ್‌ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com