ಕೇಂದ್ರದ ಬಳಿ ಭಗತ್ ಸಿಂಗ್ ಹುತಾತ್ಮ ಎಂಬ ದಾಖಲೆಗಳೇ ಇಲ್ಲವಂತೆ!

     ಭಗತ್ ಸಿಂಗ್ ಹೆಸರು ಕೇಳಿದರೆ ಸಾಕು ಮೈಯಲ್ಲಿ ಮಿಂಚಿನ ಸಂಚಾರವಾಗುತ್ತೆ. ಅತೀ ಕಿರಿಯ ವಯಸ್ಸಿನಲ್ಲೇ ದೇಶಕ್ಕಾಗಿ ಹೋರಾಡಿ ಹುತಾತ್ಮನಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್. . ಬ್ರಿಟಿಷರು ಗಲ್ಲಿಗೇರಿಸುವಾಗ ನಿಮ್ಮ ಕೊನೆ ಆಸೆ ಏನೆಂದು ಕೇಳಿದರೆ,ಭಗತ್ ಸಿಂಗ್ ರಿಂದ ಬಂದ ಉತ್ತರ. ನೀವು ದೇಶ ಬಿಟ್ಟು ತೊಲಗಬೇಕೆಂಬುದು. ಅಂತಹ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್.  ಸುಖದೇವ್,ರಾಜಗುರು ಸಹ ಭಗತ್ ಸಿಂಗ್ ಜೊತೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರು
. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಈ ಮೂವರನ್ನೂ ಬ್ರಿಟಿಷ್ ಸರ್ಕಾರ, ಮಾರ್ಚ್ 23, 1931ರಂದು ಗಲ್ಲಿಗೇರಿಸಿತ್ತು.
          ಭಗತ್ ಸಿಂಗ್ ದೇಶದ ಯುವಕರಿಗೆ ಇವತ್ತಿಗೂ ಸ್ಫೂರ್ತಿಯ ಚಿಲುಮೆ. ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ.. ಭಗತ್ ಸಿಂಗ್ ಬಗ್ಗೆ ಹಲವು ಪುಸ್ತಕ, ಸಿನಿಮಾಗಳು ಬಂದಿವೆ. ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳಲ್ಲೂ ಭಗತ್ ಸಿಂಗ್ ಜೀವನ ಚರಿತ್ರೆ ಮುದ್ರಣಗೊಂಡಿದೆ. ವಿಪರ್ಯಾಸ ನೋಡಿ,ದೇಶಕ್ಕಾಗಿ ಜೀವತೆತ್ತ ಈ ಹೋರಾಟಗಾರರು ಹುತಾತ್ಮರೆಂದು ಘೋಷಿಸಲು ಕೇಂದ್ರಸರ್ಕಾರದ ಬಳಿ ಯಾವುದೇ ದಾಖಲೆಗಳೇ ಇಲ್ಲವಂತೆ.ಇಂಥದ್ದೊಂದು ದಿಗ್ಭ್ರಮೆ ಹುಟ್ಟಿಸುವ ಉತ್ತರ ಕೊಟ್ಟಿದೆ ಕೇಂದ್ರ ಗೃಹ ಇಲಾಖೆ.ಭಗತ್ ಸಿಂಗ್ ಅವರ ಅಣ್ಣನ ಮೊಮ್ಮಗ ಯಾದವೇಂದ್ರ ಸಿಂಗ್, ಈ ಬಗ್ಗೆ  ಆರ್ ಟಿಐ ಮೂಲಕ ಸರ್ಕಾರಕ್ಕೆ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಗೃಹ  ಇಲಾಖೆ ಈ ಉತ್ತರ ಕೊಟ್ಟಿದೆ.

ಭಗತ್ ಸಿಂಗ್ ಅಣ್ಣನ ಮಗನ ಪ್ರಶ್ನೆ: ಬ್ರಿಟಿಷರು ನೇಣಿಗೇರಿಸಿದ ಭಗತ್ ಸಿಂಗ್, ಸುಖದೇವ್ ಮತ್ತು ರಾಯ್ ಗುರು ಅವರನ್ನು ಹುತಾತ್ಮರೆಂದು ಘೋಷಣೆ ಮಾಡಲಾಗಿದೆಯಾ? ಹುತಾತ್ಮರೆಂದು ಘೋಷಣೆ ಮಾಡಿಲ್ಲವೆಂದಾದರೆ ಈ ಕುರಿತಾಗಿ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ 

ಕೇಂದ್ರ ಗೃಹ ಇಲಾಖೆ ನಾಚಿಕೆಗೇಡಿನ ಉತ್ತರ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುತಾತ್ಮರೆಂದು ಘೋಷಿಸಲು ನಮ್ಮ ಬಳಿ ಯಾವುದೇ ದಾಖಲೆ ಲಭ್ಯ ಇಲ್ಲ. ಭಗತ್ ಸಿಂಗ್ ಅವರನ್ನು ಹುತಾತ್ಮರೆಂದು ಅಧಿಕೃತವಾಗಿ ಘೋಷಿಸಲು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ  ಎನ್ನುವ ಕುರಿತಾಗಿಯೂ ನಮಗೆ ಗೊತ್ತಿಲ್ಲವೆಂದು ಉತ್ತರ ಕೊಟ್ಟಿದೆ ಕೇಂದ್ರ ಗೃಹ ಇಲಾಖೆ.
ಪ್ರಧಾನಿ ಮನಮೋಹನ್ ಸಿಂಗ್ ಸಮರ್ಥನೆ: ಭಗತ್ ಸಿಂಗ್, ಸುಖದೇವ್,ರಾಜಗುರು ಹುತಾತ್ಮರೆಂದು ಘೋಷಿಸಲು ತಮ್ಮ ಬಳಿ ದಾಖಲೆಗಳಿಲ್ಲ ಎಂಬ ಕೇಂದ್ರ ಗೃಹ ಇಲಾಖೆಯ ನಾಚಿಕೆಗೇಡಿನ ಹೇಳಿಕೆಯನ್ನ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಸಮರ್ಥನೆ ಮಾಡಿಕೊಂಡಿದ್ದಾರೆ. ಗೃಹ ಇಲಾಖೆ ಆರ್ ಟಿಐ ಅರ್ಜಿಗೆ ಕೊಟ್ಟ ಉತ್ತರ ಸರಿಯಾಗಿದೆ. ಭಗತ್ ಸಿಂಗ್ ಹುತಾತ್ಮರೆಂದು ಘೋಷಿಸಿರುವ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಭಗತ್ ಸಿಂಗ್ ಬಲಿದಾನವನ್ನ ಯಾವೊಬ್ಬ ದೇಶವಾಸಿಯೂ ಪ್ರಶ್ನಿಸಬಾರದು, ಈ ಕುರಿತು ಎದ್ದಿರುವ ವಿವಾದದಿಂದ ದೇಶಕ್ಕೇ ನೋವುಂಟಾಗುತ್ತದೆ. ಭಗತ್ ಸಿಂಗ್ ಅವರಂಥಹ ಧೀರ ಹೋರಾಟಗಾರರಿಗೆ ದಾಖಲೆ ಬೇಕಿಲ್ಲ, ಅವರ ತ್ಯಾಗ ಶ್ರೇಷ್ಠವಾದದ್ದು, ದಾಖಲೆಗಳಲ್ಲಿ ಇರಲಿ, ಬಿಡಲಿ ರಾಷ್ಟ್ರಕ್ಕಾಗಿ ಹೋರಾಡಿದ ಭಗತ್ ಸಿಂಗ್ ನಿಜಕ್ಕೂ ಹುತಾತ್ಮರು.
ಮಾತಿನಲ್ಲಿ ಹೇಳೋರಿಗೆ ಕೃತಿಯಲ್ಲಿ ತೋರಿಸೋಕೆ ಏನು ಕಷ್ಟ?: ದೇಶಕ್ಕಾಗಿ ಹೋರಾಡಿದ ಭಗತ್ ಸಿಂಗ್ ಹುತಾತ್ಮರೆಂದು ಮಾತಿನಲ್ಲಿ ಹೇಳುತ್ತಿರುವ ಪ್ರಧಾನಿಯವರಿಗೆ ದಾಖಲೆಗಳಲ್ಲಿ ಸೇರಿಸುವುದಕ್ಕೆ ಅದೇನು ಕಷ್ಟವೋ ಗೊತ್ತಾಗುತ್ತಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟ ನಮ್ಮ ಹೆಮ್ಮೆಯ ವೀರಯೋಧರಿಗೆ ಇಂಥದ್ದೊಂದು ಗೌರವ ನೀಡೋಕೂ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಭಗತ್ ಸಿಂಗ್ ಕುರಿತ ಚರ್ಚೆ, ಗೃಹ ಇಲಾಖೆ ಹೇಳಿಕೆ ಬಗ್ಗೆ ಸಮರ್ಥನೆ ನೀಡುವುದರ ಬದಲು ಅಧಿಕೃತ ದಾಖಲೆಯಲ್ಲಿ ಭಗತ್ ಸಿಂಗ್  ಅವರನ್ನು ಹುತಾತ್ಮರೆಂದು ಘೋಷಿಸಿಯೇ ಬಿಡಬಹುದಿತ್ತು. ಕೊನೆಯ ಪಕ್ಷ ಭವಿಷ್ಯದಲ್ಲಾದರೂ ಭಗತ್ ಸಿಂಗ್ ಅವರನ್ನ ಅಧಿಕೃತವಾಗಿ ಹುತಾತ್ಮರೆಂದು ಘೋಷಿಸುತ್ತೇವೆಂದು ಮಾತಿಗೂ ಹೇಳದಿರುವುದು ದುರಾದೃಷ್ಟವೇ ಸರಿ.
 ಚಳವಳಿ ನಡೆಸಲು ನಿರ್ಧಾರ: ಕೇಂದ್ರ ಸರ್ಕಾರದ ಈ ಬೇಜವಾಬ್ದಾರಿ ಹೇಳಿಕೆಯಿಂದ ಬೇಸತ್ತಿರುವ ಭಗತ್ ಸಿಂಗ್ ಅವರ ಅಣ್ಣನ ಮೊಮ್ಮಗ ಯಾದವೇಂದ್ರ ಸಿಂಗ್, ಈ ಕುರಿತು ಹೋರಾಟ ರೂಪಿಸಲು ನಿರ್ಧರಿಸಿದ್ದಾರೆ. ನಮಗೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಹೋರಾಟಗಾರರ ಬಲಿದಾನ ಎಷ್ಟು ಮುಖ್ಯ ಎಂಬುದನ್ನ ದಾಖಲೆಗಳಲ್ಲಿ ತೋರಿಸುವ  ಅವಕಾಶ ಸರ್ಕಾರಕ್ಕೆ ಸಿಕ್ಕಿದೆ. ಮುಂದಿನ ಪೀಳಿಗೆಗೆ ಹೋರಾಟಗಾರರ ಪ್ರಾಣ ತ್ಯಾಗದ ಮಹತ್ವ ತಿಳಿಸಲು ದಾಖಲೆಗಳಲ್ಲಿ ಸೇರಿಸುವುದು ಅಗತ್ಯವಾಗಿದೆ. ಭಗತ್ ಸಿಂಗ್ ಹುತಾತ್ಮರೆಂಬ ಬಗ್ಗೆ ದಾಖಲೆ ಇಲ್ಲದ್ದರಿಂದ ಸ್ವತಃ ನನ್ನ ಮಕ್ಕಳಿಗೇ ಅವರ ತ್ಯಾಗದ ಬಗ್ಗೆ ಅರಿವಿಲ್ಲ, ದಾಖಲೆಗಳ ಮೂಲಕವಷ್ಟೇ ಅವರ ಅರಿವಿಗೆ ತರಲು ಸಾಧ್ಯವೆಂದು ಯಾದವೇಂದ್ರ ಸಿಂಗ್ ಹೇಳಿದ್ದಾರೆ.  


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com