ದೆಹಲಿಯ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಲ್ಲದೆ, ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ರೂಪುಗೊಳ್ಳಲು ಕಾರಣವಾಗಿದ್ದ ಕಳೆದ ವರ್ಷ ಡಿಸೆಂಬರ್‌ 16ರಂದು ದಿಲ್ಲಿಯಲ್ಲಿ ನಡೆದ 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಬೀಭತ್ಸ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್‌ ತ್ವರಿತ ನ್ಯಾಯಾಲಯವು ಗಲ್ಲು ಶಿಕ್ಷೆ ನೀಡಿ ತೀರ್ಪಿತ್ತಿದೆ.

ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿ ನ್ಯಾಯಾಧೀಶ ಯೋಗೇಶ್‌ ಖನ್ನಾ ಅವರು ತೀರ್ಪು ನೀಡಿದರು.

ಅವರು ಬುಧವಾರ ಸರ್ಕಾರಿ ಹಾಗೂ ಅಪರಾಧಿ ಪರ ವಕೀಲರ ವಾದಗಳನ್ನು ಆಲಿಸಿ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು.

ಎಲ್ಲ ನಾಲ್ವರೂ ಆಪಾದಿತರನ್ನು ತ್ವರಿತ ನ್ಯಾಯಾಲಯ ಮಂಗಳವಾರ ದೋಷಿಗಳು ಎಂದು ತೀರ್ಪು ನೀಡಿದ್ದು, ದೋಷಿಗಳಿಗೆ ಕನಿಷ್ಠ ಜೀವಾವಧಿ ಅಥವಾ ಗರಿಷ್ಠ ಗಲ್ಲು ಶಿಕ್ಷೆ ಆಗುವುದು ನಿಶ್ಚಿತವಾಗಿತ್ತು, ದುಷ್ಟ ಕಾಮುಕರ ಕರಾಳ ಕೃತ್ಯಕ್ಕೆ ಬಲಿಯಾದ ಆ 23 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆಗೆ ಇದೀಗ ನ್ಯಾಯ ದೊರಕಿದಂತಾಗಿದೆ.

ಆಪಾದಿತರಾದ ಮುಕೇಶ್‌ (26), ವಿನಯ ಶರ್ಮಾ (20), ಪವನ್‌ ಗುಪ್ತಾ (19) ಮತ್ತು ಅಕ್ಷಯ ಸಿಂಗ್‌ ಠಾಕೂರ್‌ (28) ತಪ್ಪಿತಸ್ಥರಾಗಿದ್ದು, ಇವರು ಕೊಲೆ, ಅತ್ಯಾಚಾರ, ಅಸಹಜ ಅಪರಾಧ, ಡಕಾಯಿತಿ, ಸಾಕ್ಷ್ಯನಾಶ, ಸಂಚು ಮತ್ತು ಕೊಲೆಗಾಗಿ ಅಪಹರಣ ಪ್ರಕರಣದಲ್ಲಿ ಇವರು ದೋಷಿಗಳು ಎಂದು ಸೆಷನ್ಸ್‌ ನ್ಯಾಯಾಧೀಶ ಯೋಗೇಶ್‌ ಖನ್ನಾ 237 ಪುಟಗಳ ತೀರ್ಪು ನೀಡಿದ್ದರು. ಆದರೆ, ಡಕಾಯಿತಿ ಸಂದರ್ಭದಲ್ಲಿ ಕೊಲೆ ಎಂಬ ಆರೋಪದಿಂದ ಇವರನ್ನು ಮುಕ್ತಗೊಳಿಸಿದ್ದರು.

ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಇನ್ನೊಬ್ಬ ಆಪಾದಿತ ರಾಮ್‌ ಸಿಂಗ್‌ (34) ಈಗ ಜೀವಂತವಿಲ್ಲದಿದ್ದರೂ ಆತ ಕೂಡ ಕೊಲೆ, ಸಾಮೂಹಿಕ ಅತ್ಯಾಚಾರ ಮತ್ತು ಇತರ ಅಪರಾಧಕ್ಕಾಗಿ ತಪ್ಪಿತಸ್ಥ ಎಂದೂ ಖನ್ನಾ ಹೇಳಿದ್ದರು. ಈ ದೋಷಿಗಳಲ್ಲದೆ 6ನೇ ಆರೋಪಿ ಬಾಲಾಪರಾಧಿಯಾಗಿದ್ದು, ಆತನಿಗೆ ಇತ್ತೀಚೆಗೆ ಬಾಲಾಪರಾಧ ನ್ಯಾಯ ಮಂಡಳಿ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆತ ಈಗ ಬಾಲಾಪರಾಧ ಮಂದಿರದಲ್ಲಿದ್ದಾನೆ.

ದೋಷಿಗಳ ವಿರುದ್ಧ ಸಕಲ ಸಾಕ್ಷ್ಯ: ಆದೇಶ ಪ್ರಕಟಿಸಿದ ನ್ಯಾಯಾಧೀಶರು, 'ಅತ್ಯಾಚಾರ ಸಂತ್ರಸ್ತೆಗೆ ವೈದ್ಯೋಪಚಾರ ವಿಳಂಬ ಆದ ಕಾರಣ ಆಕೆ ಸಾವನ್ನಪ್ಪಿದ್ದಾಳೆ' ಎಂಬ ಸರ್ಕಾರಿ ವಕೀಲರ ಅಭಿಪ್ರಾಯ ನಿರಾಕರಿಸಿದರು. 'ಆಕೆಯನ್ನು ಕೊಲ್ಲಲೆಂದೇ ಅತ್ಯಾಚಾರಿಗಳು ಕೃತ್ಯ ಎಸಗಿದ್ದಾರೆ. ಆಕೆಯ ಗುಪ್ತಾಂಗದಲ್ಲಿ ಸರಳು ಹಾಕಿ ಹೊರತೆಗೆದಿದ್ದು ಅತ್ಯಂತ ಬೀಭತ್ಸ. ಅಮಾನುಷ' ಎಂದು ಅಭಿಪ್ರಾಯ ಪಟ್ಟಿದ್ದರು.

'ಎಲ್ಲ ಆಪಾದಿತರು ಅರ್ಜಿದಾರನನ್ನು (ಅತ್ಯಾಚಾರ ಸಂತ್ರಸ್ತೆಯ ಗೆಳೆಯ) ಕೊಲ್ಲುವ ಯತ್ನ ಮಾಡಿದ್ದಕ್ಕೆ ಮತ್ತು ಯುವತಿಯ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಆಕೆಯನ್ನು ಕೊಂದ ಕಾರಣಕ್ಕೆ ತಪ್ಪಿತಸ್ಥರಾಗಿದ್ದಾರೆ' ಎಂದು ಪ್ರಕಟಿಸಿದರು. ಅಲ್ಲದೆ, ಘಟನೆ ನಡೆದ ನಂತರ ಅವರು ಸಾಕ್ಷ್ಯಗಳನ್ನೂ ನಾಶ ಮಾಡಲು ಯತ್ನಿಸಿದ್ದಾರೆ. ಆದ್ದರಿಂದ ಐಪಿಸಿ ಸೆಕ್ಷನ್‌ 201ರ ಪ್ರಕಾರ ಹಾಗೂ ಅಕ್ರಮವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಸೆಕ್ಷನ್‌ 366ರ ಪ್ರಕಾರ ದೋಷಿಗಳು' ಎಂದು ಖನ್ನಾ ಹೇಳಿದ್ದರು.

ಅತ್ಯಾಚಾರ ಸಂತ್ರಸ್ತೆ ಸಾಯುವ ಮುನ್ನ ನೀಡಿದ ಹೇಳಿಕೆ, ವಿಧಿವಿಜ್ಞಾನ ಸಾಕ್ಷ್ಯ, ಬೆರಳಚ್ಚು, ದಂತದ ನಮೂನೆಗಳು, ಡಿಎನ್‌ಎ ನಮೂನೆಗಳು, ವಿದ್ಯುನ್ಮಾನ ಸಾಕ್ಷ್ಯಗಳು ಮತ್ತು ಇತರ ವೈದ್ಯಕೀಯ ವರದಿಗಳು ಈ ದುರುಳರು ಈ ಹೀನ ಕೃತ್ಯ ಎಸಗಿದ್ದಾರೆಂಬುದನ್ನು ಸಾಬೀತುಪಡಿಸಿದೆ. ಇದೇ ವೇಳೆ ಎಲ್ಲ ದೋಷಿಗಳೂ ಬಸ್ಸಿನಲ್ಲಿ ಆ ಸಂದರ್ಭದಲ್ಲಿ ಇದ್ದ ಬಗ್ಗೆ ಅವರ ಮೊಬೈಲ್‌ ನೆಟ್‌ವರ್ಕ್‌ ಪುರಾವೆ ಒದಗಿಸಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದರು.

ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಹಕರಿಸಿದ ದಿಲ್ಲಿ ಪೊಲೀಸರು, ಪ್ರಾಸಿಕ್ಯೂಶನ್‌ ಮತ್ತು ಕಕ್ಷಿದಾರರ ಪರ ನ್ಯಾಯವಾದಿಗಳಿಗೂ ನ್ಯಾ. ಮೆಹ್ತಾ ಕೃತಜ್ಞತೆ ಸಲ್ಲಿಸಿದರು

ಅಪರಾಧಿಗಳ ವಿವರ

ಪವನ್‌ ಗುಪ್ತಾ (19)

ಹಣ್ಣು ಮಾರಿಕೊಂಡಿದ್ದ. ವೈದ್ಯ ವಿದ್ಯಾರ್ಥಿನಿಯ ಮೇಲೆ ಡಿ.16ರ ರಾತ್ರಿ ಬಸ್ಸಿನಲ್ಲಿ ಅತ್ಯಾಚಾರ ಮಾಡಿದ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ.

ವಿನಯ್‌ ಶರ್ಮಾ (20)

ಜಿಮ್‌ನಲ್ಲಿ ಸಹಾಯಕ ತರಬೇತುದಾರ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ. ಇತರರು ಹೊಡೆಯುತ್ತಿರುವ ವೇಳೆ ಆಕೆಯ ಸ್ನೇಹಿತನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ.

ಮುಕೇಶ್‌ (26)

ಆತ್ಮಹತ್ಯೆ ಮಾಡಿಕೊಂಡ ರಾಮ್‌ ಸಿಂಗ್‌ನ ಸೋದರ. ಬಸ್‌ ಚಾಲಕನೀತ. ವೈದ್ಯ ವಿದ್ಯಾರ್ಥಿನಿಯನ್ನು ಥಳಿಸಿ ಅತ್ಯಾಚಾರ ಮಾಡಿ, ಆಕೆಯ ಸ್ನೇಹಿತನನ್ನು ಹೊಡೆದ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ. ಆದರೆ ಈತನ ವಕೀಲರ ಪ್ರಕಾರ ಈತ ಬಸ್‌ ಚಲಾಯಿಸುತ್ತಿದ್ದ. ಯಾವುದೇ ಕೃತ್ಯ ಎಸಗಿಲ್ಲ.

ಅಕ್ಷಯ ಠಾಕೂರ್‌ (28)

ಕೆಲಸ ಹುಡುಕಿಕೊಂಡು ಬಿಹಾರದಿಂದ ದಿಲ್ಲಿಗೆ ಬಂದು ಈ ದುರುಳರ ಗ್ಯಾಂಗ್‌ ಸೇರಿಕೊಂಡಿದ್ದ. ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದ.
    
 ಅಪರೂಪದಲ್ಲಿ ಅಪರೂಪವಾಗಿರುವ ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು, ಅಪರಾಧಿ ಪರ ವಕೀಲರು ಮಾತ್ರ ಅಪರಾಧಿಗಳಿಗೆ ಕನಿಕರ ತೋರಿ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದರು.

ಒಟ್ಟಿನಲ್ಲಿ ಪ್ರಕರಣದ ತೀರ್ಪಿಗಾಗಿ ಇಡೀ ದೇಶವೇ ಎದುರು ನೋಡುತ್ತಿದ್ದ ದಿಲ್ಲಿ ರಾಕ್ಷಸರಿಗೆ ಶುಕ್ರವಾರ ತಕ್ಕ ಶಿಕ್ಷೆಯಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com