ಕುಂದಾಪುರ: ಸಮಸ್ಯೆಗಳನ್ನು ಎದುರಿಸಲಾಗದೆ ಜೀವ ಕಳೆದುಕೊಳ್ಳವ ನಿರ್ಣಯ ತೆಗೆದುಕೊಳ್ಳುವ ಬದಲು ಎಂತಹ ಪರಿಸ್ಥಿತಿಯನ್ನಾದರೂ ಎದುರಿಸಬಲ್ಲೇ ಎಂಬ ಆತ್ಮವಿಶ್ವಾಸವನ್ನು ಹೊಂದಬೇಕು ಎಂದು ಕುಂದಾಪುರದ ಡಿವೈಎಸ್ಪಿ ಯಶೋಧಾ ಎಸ್. ಒಂಟಗೋಡಿ ಹೇಳಿದರು.
ಅವರು ನಗರದ ಶ್ರೀ ಮಾತಾ ಆಸ್ಪತ್ರೆ ಹಾಗೂ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬ್ರಹ್ಮಾವರ-ಬಾರಕೂರು ಜಂಟಿಯಾಗಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಯಂತಹ ನಿರ್ಣಯ ಕೈಗೊಳ್ಳುವುದು ವಿಷಾದನೀಯ. ಇಂತಹ ಮಾನಸಿಕ ಖಿನ್ನತೆಗಳಿಂದ ಹೊರಬರಲು ಯೋಗ & ಧ್ಯಾನಗಳು ಸಹಕಾರಿಯಾಗಿದ್ದು ಅದರ ಜೊತೆಗೆ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಾನಸಿಕ ತಜ್ಞೆ ಡಾ. ಕೆ.ಎಸ್. ಲತಾ ಮಾತನಾಡಿ ದೇಶದಲ್ಲಿ ವರ್ಷಕ್ಕೆ ಸುಮಾರು 1 ಲಕ್ಷದಷ್ಟು ಜನರು ಆತ್ಮಹತ್ಯೆ ಯತ್ನವನ್ನು ಮಾಡುತ್ತಿದ್ದು ಅದರಲ್ಲೂ 16-24 ವರ್ಷದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆತ್ಮಹತ್ಯೆಗೆ ಸರಿಯಾದ ಕಾರಣವನ್ನು ತಿಳಿದು ಅದನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಮನರೋಗ ತಜ್ಞ ಡಾ ಪ್ರಕಾಶ ತೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ನಿರ್ದೇಶಕ ಡಾ ಸತೀಶ್ ಪೂಜಾರಿ, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಲಯನ್ಸ್ ಅಧ್ಯಕ್ಷ ದಯಾನಂದ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀ ಮತ್ತು ಕೋಮಲ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment