ಮೂಢ ನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ

ಉಡುಪಿ: ನರೇಂದ್ರ ದಾಬೋಲ್ಕರ್ ನೆನಪಲ್ಲಿ ಉಡುಪಿಯಲ್ಲಿ ಮೂಢನಂಬಿಕೆಗಳ ವಿರುದ್ಧ ಪ್ರಾತ್ಯಕ್ಷಿಕೆ, ವಿಶ್ಲೇಷಣೆ, ಸಂವಾದದ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಭಾನುವಾರ ನಡೆಯಿತು. ಉಡುಪಿ ಜಾತಿ ಮುಕ್ತ ಸಂಬಂಧ ವೇದಿಕೆ ಟಿ.ಎ. ಪೈ ಹಿಂದಿ ಭವನದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿಚಾರವಾದಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನರೇಂದ್ರ ನಾಯಕ್ ಅವರು ಮೂಢನಂಬಿಕೆ ಮತ್ತು ಬಾಬಾಗಳ ಪವಾಡಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 

ಶೂನ್ಯದಲ್ಲಿ ಕೈಯಾಡಿಸಿ ಬೂದಿ ಸೃಷ್ಟಿಸಿ, ಚಿನ್ನದ ಸರ, ನೂರು ರೂ. ವೌಲ್ಯದ ನೋಟು ಸೃಷ್ಟಿಸಿ ಅಚ್ಚರಿ ಮೂಡಿಸಿದರಲ್ಲದೆ ಅದರ ಹಿಂದಿರುವ ಸತ್ಯವನ್ನು ವಿವರಿಸಿದರು. ಪವಾಡಕ್ಕೆ ಧರ್ಮವಿಲ್ಲ. ಪವಾಡ ಶೋಷಣೆಯ ವಿಧಾನ. ಹಿಂದೂಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಜಾಸ್ತಿ ಪವಾಡಗಳು ಕಾಣಿಸುತ್ತವೆ. ಪುಟಪರ್ತಿ ಬಾಬಾ, ಅಸ್ಲಂ ಬಾಬಾ, ಬೆನ್‌ಹಿನ್ ಹೀಗೆ ನಾನಾ ಧರ್ಮಗಳಲ್ಲಿ ನಾನಾ ಥರದ ಬಾಬಾಗಳು ಇದ್ದಾರೆ ಎಂದು ವಿವರಿಸಿದರು. 

ವಿಚಾರವಾದಿ ಡಾ. ಜಿ. ಭಾಸ್ಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಾತಿ ಮುಕ್ತ ಸಂಬಂಧ ವೇದಿಕೆ ಸಂಚಾಲಕ ಹಯವದನ ಮೂಡುಸಗ್ರಿ ಕಾರ್ಯಕ್ರಮ ನಿರ್ವಹಿಸಿದರು. ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಯುವರಾಜ್ ಪುತ್ತೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. 

ನರೇಂದ್ರರ ಪಂಚ್: ಲೌಕಿಕ ಜೀವನ ತ್ಯಜಿಸಿ ದೇವರಿಗೆ ಹತ್ತಿರವಾಗಿ ಎಂದು ಯಾರಾದರೂ ಹೇಳುತ್ತಿದ್ದಾರೆ ಅಂದ್ರೆ ಅದರ ಅರ್ಥ ನಿಮ್ಮ ಸಂಪತ್ತೆಲ್ಲ ಅವರಿಗೆ ಕೊಡಿ ಎಂದಷ್ಟೆ. ಎಲ್ಲ ತ್ಯಜಿಸಿದವರ ವಾಹನ ಹವಾನಿಯಂತ್ರಿತ. ಅವರು ನಡೆಯಲು ರೆಡ್‌ಕಾರ್ಪೆಟ್ ಇರುತ್ತದೆ. 

ಮ್ಯೂಸಿಕ್ ಥೆರಪಿ, ಕ್ರಿಸ್ಟಲ್ ಥೆರಪಿ, ರೇಖಿ, ಪ್ರಾಣಿಕ್ ಹೀಲ್, ಆಯುಸ್, ಅಕ್ಯುಪ್ರಶರ್ ಎಲ್ಲವೂ ನಾನ್‌ಸೆನ್ಸ್. ಆಧಾರ ಇಲ್ಲದವುಗಳು ಇವು. 

ಪಾಶ್ಚಾತ್ಯ ವಿಜ್ಞಾನಕ್ಕೆ ನಿರಂತರ ಬೈಯುತ್ತಾ ಇರುತ್ತಾರೆ. ಅದೇ ಪಾಶ್ಚಾತ್ಯರು ಕಂಡುಹಿಡಿದ ಮೊಬೈಲ್, ಕಾರು ನಿತ್ಯ ಬಳಕೆಗೆ ಬೇಕು. ಬೇರೆಯವರಿಗೆ ಔಷಧ ಕೊಡುವ ನಕಲಿಗಳಿಗೆ ಹುಷಾರಿಲ್ಲದಾದಾಗ ಅವರು ಮಾತ್ರ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕೇಳಿದರೆ 'ಅವರ ಔಷಧ ಅವರಿಗೆ ಆಗುವುದಿಲ್ಲ 'ಎಂಬ ಸಿದ್ಧ ಉತ್ತರ ತಯಾರಿರುತ್ತದೆ. ವಿಚಾರವಾದ ಅಂದ್ರೆ ಪವಾಡ ರಹಸ್ಯ ಬಯಲು ಅಲ್ಲ. ಅದು ಮಾನವತಾವಾದ. ಬದುಕು ತಲುಪುವಂಥದ್ದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com