ಹಿರಿಯ ರಾಜಕಾರಣಿ ಎ.ಜಿ. ಕೊಡ್ಗಿ ರಾಜಕೀಯ ನಿವೃತ್ತಿ

ಕುಂದಾಪುರ: ಕಳೆದ 56 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದು, ಎರಡು ಬಾರಿ ಬೈಂದೂರು ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೆಸ್‌ ಹಾಗೂ ಬಳಿಕ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಹಿರಿಯ ರಾಜಕಾರಣಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರು ಮಂಗಳವಾರ 85ನೇ ಹುಟ್ಟುಹಬ್ಬ ಆಚರಣೆ ಸಂದರ್ಭ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
      ಇಲ್ಲಿನ ಹೋಟೆಲ್ ಶರೋನ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿ ಇನ್ನೇನಿದ್ದರೂ ವಿಶ್ರಾಂತ ಜೀವನ ಎಂದರು. 
     ಸಧ್ಯ ನಾನಿರುವ ಪಕ್ಷಕ್ಕೆ ನನ್ನ ಅಗತ್ಯವಿದ್ದಂತೆ ಕಾಣುವುದಿಲ್ಲ. ಅದು ಸ್ವಾಭಾವಿಕವೂ ಹೌದು. ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕಾಗಿರುವುದು ಅವಶ್ಯ ಎಂದು ಭಾವಿಸುತ್ತೇನೆ. ಸುದೀರ್ಘ ರಾಜಕೀಯ ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯನಾಗಿ ರಾಜಕೀಯಕ್ಕೆ ಕಾಲಿಟ್ಟು ನಂತರ ನಾನಾ ಕ್ಷೇತ್ರಗಳಲ್ಲಿ, ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಂಡುಕೊಂಡೆ. ಅವಕಾಶ ಮಾಡಿ ಕೊಟ್ಟ ಕಾಂಗ್ರೆಸ್ ಪಕ್ಷದ ಮುಖಂಡರಿಗೂ ಆಭಾರಿಯಾಗಿದ್ದೇನೆ. 2006ರಲ್ಲಿ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, 2009ರಲ್ಲಿ ಮೂರನೇ ಹಣಕಾಸು ಆಯೋಗ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಮಾಡಿಕೊಟ್ಟ ಮುಖಂಡರಿಗೆ ಕೃತಜ್ಞನಾಗಿದ್ದೇನೆ ಎಂದರು. 
   ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ರಾಜ್ಯದ ವಿದ್ಯಮಾನ, ವೈಯಕ್ತಿಕ ಟೀಕೆ, ಆಪಾದನೆ, ಸೈದ್ಧಾಂತಿಕ ನೆಲೆ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿವೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರವೃತ್ತಿ ಹೆಚ್ಚುತ್ತಿದೆ. ಅದಕ್ಕಾಗಿ ಈ ನಿವೃತ್ತಿ ಎಂದು ಸ್ಪಷ್ಟಪಡಿಸಿದರು. 
     ಸುದೀರ್ಘ ರಾಜಕಾರಣದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು. 

ಸಂವಿಧಾನ ಕಡೆಗಣನೆ: ಮೂರನೇ ಹಣಕಾಸು ಆಯೋಗ ಅಧ್ಯಕ್ಷನಾಗಿ ಇಡೀ ರಾಜ್ಯ ತಿರುಗಿದ್ದೇನೆ. ಎರಡನೇ ಆಯೋಗದ ವರದಿ ಬಳಿಕ ಮೂರನೇ ವರದಿ, ಅದರ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಆದರೆ ಎರಡು ಮತ್ತು ಮೂರನೇ ಆಯೋಗ ವರದಿ ಈವರೆಗೆ ಸ್ವೀಕೃತಿ ಆಗಿಲ್ಲ. ರಾಜ್ಯಪಾಲರ ಮೂಲಕ ಕ್ಯಾಬಿನೆಟ್‌ಗೆ ಬಂದು ಚರ್ಚೆಗೆ ಬರಬೇಕಾದ ಸಂಗತಿ ಮೂಲೆಗುಂಪಾಗುತ್ತಿದೆ. 5 ವರ್ಷಕ್ಕೊಮ್ಮೆ ಹಣಕಾಸು ಆಯೋಗದ ಸಾಧಕ-ಬಾಧಕ ಚರ್ಚೆಯಾಗಬೇಕಾಗಿರುವುದು ಸಂವಿಧಾನಬದ್ಧ ಹಕ್ಕು. ಆದರೆ ಸಂವಿಧಾನದ ಕಡೆಗಣನೆಯಾಗಿದೆ. 

ಯಾವ ಒತ್ತಡಕ್ಕೂ ಮಣಿಯೋದಿಲ್ಲ: ನಿವೃತ್ತಿ ಘೋಷಣೆ ಸಾಕಷ್ಟು ಚಿಂತನೆಯ ಮೂಲಕವೇ ಹೊರ ಬಿದ್ದ ನಿರ್ಧಾರ. ಮುಂದೆ ಯಾವ ಒತ್ತಡಕ್ಕೂ ಮಣಿಯಲಾರೆ. ನಿವೃತ್ತಿಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯ ನಾಯಕರು ಮಾರ್ಗದರ್ಶನ ಬಯಸಿದರೆ ಒಲ್ಲೆ ಎನ್ನಲಾರೆ. ಅದೇನಿದ್ದರೂ ವೈಯಕ್ತಿಕ ಮಾರ್ಗದರ್ಶನ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯ ಮೂರನೇ ಹಣಕಾಸು ಆಯೋಗ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ ಸಂದರ್ಭ ಸ್ಮರಣೀಯ ಎಂದು ತಿಳಿಸಿದರು. 

ಅಪರೂಪದ ಮುತ್ಸದ್ದಿ 

ಎರಡು ಹಂತದ, 56 ವರ್ಷದ ಸುದೀರ್ಘ ರಾಜಕಾರಣದಲ್ಲಿ , 85 ವರ್ಷದ ಹಿರಿಯ ಮುತ್ಸದ್ದಿ ಎ.ಜಿ. ಕೊಡ್ಗಿ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಲಿ ಪಕ್ಷ ನಿಷ್ಠೆ, ಬದ್ಧತೆ ತೋರ್ಪಡಿಸಿಕೊಂಡವರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭವೇ ಕೊಡ್ಗಿ ರಾಜಕೀಯ ನಿವೃತ್ತಿಯ ಸುಳಿವು ಗೋಚರಿಸಿತ್ತು. 

ತಾಲೂಕಿನ ಕೃಷಿಕ ಕುಟುಂಬದಲ್ಲಿ 1929ರ ಅ.1ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಸ್ವಾತಂತ್ರ್ಯ ಹೋರಾಟದ ಛಾಯೆಯಲ್ಲಿ ಬೆಳೆದವರು. ತಂದೆ ಕೃಷ್ಣರಾಯ ಕೊಡ್ಗಿ ಸ್ವಾತಂತ್ರ್ಯ ಹೋರಾಟಗಾರರು. ಕಾನೂನು ಪದವಿ ಪಡೆದ ಕೊಡ್ಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಿಸಿದರು. ಬಳಿಕ ಕೃಷಿಯಲ್ಲಿಯೇ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡವರು. ಸಹಕಾರಿ, ಕೃಷಿ, ರಾಜಕಾರಣದಲ್ಲಿ ಗುರುತಿಸಿಕೊಂಡ ಕೊಡ್ಗಿ ಒಂದೊಂದೇ ಮೆಟ್ಟಿಲೇರಿದರು. 

ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಎಂಟು ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972-83ರ ತನಕ ಬೈಂದೂರು ಶಾಸಕ, 2006-08ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಛಾತಿ ಮೂಡಿಸಿರುವ ಕೊಡ್ಗಿ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಎಪಿಎಂಪಿ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕ್ಯಾಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1982-1990ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ. 

ಚಾಣಾಕ್ಷ: ಕರಾವಳಿ ಜಿಲ್ಲೆಯ ರಾಜಕೀಯ ಚದುರಂಗದಾಟದಲ್ಲಿ ಕೊಡ್ಗಿ ಎತ್ತಿದ ಕೈ. ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪರಿ ಅದ್ವಿತೀಯ. ಕಾಂಗ್ರೆಸ್ ಪಕ್ಷದಲ್ಲಿರುವಾಗ ಜಿಲ್ಲಾ ಕಾಂಗ್ರೆಸ್ ಸದಸ್ಯ, ರಾಜ್ಯ ಕಾಂಗ್ರೆಸ್ ಸದಸ್ಯರಾಗಿ ದುಡಿದವರು. ಕಾಂಗ್ರೆಸ್‌ನಲ್ಲಿದ್ದಾಗ ತಮ್ಮ ನಿಲುವುಗಳಿಗೆ ಧಕ್ಕೆಯುಂಟಾದಾಗ 1993ರಲ್ಲಿ ಬಿಜೆಪಿಗೆ ಬಂದ ಕೊಡ್ಗಿ ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 

ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಸುನಿಲ್ ಕುಮಾರ್ ಸಹಿತ ಯುವ ನಾಯಕರು ಕೊಡ್ಗಿಯವರ ಪಾಳಯದಿಂದ ಹೊರಹೊಮ್ಮಿದ ಅಸ್ತ್ರಗಳು. ಬಿಜೆಪಿಯಲ್ಲಿ ತನ್ನ ನಿಲುವಿಗೆ ಧಕ್ಕೆಯುಂಟಾಗುತ್ತದೆ ಎಂದು ಅನ್ನಿಸಿದಾಗ ಕಳೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಮುನಿಸಿಕೊಂಡರು. ಇದೀಗ ರಾಜಕೀಯದಿಂದಲೇ ನಿವೃತ್ತಿ ಹೊಂದಿದ್ದಾರೆ.

ವರದಿ ಕೃಪೆ: ವಿಕ ಸುದ್ದಿಲೋಕ | Oct 1, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com