ಬಿಎಸ್‌ವೈ ಎನ್‌ಡಿಎ ಸೇರ್ಪಡೆ ಗೊಂದಲಕ್ಕೆ ಶೀಘ್ರ ತೆರೆ: ಸಂಸದ ರಾಘವೇಂದ್ರ

ಬೈಂದೂರು: ಯಡಿಯೂರಪ್ಪ ಪಕ್ಷ ತೊರೆದಿರುವುದರಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು ಅವರನ್ನು ಪಕ್ಷಕ್ಕೆ ಮರಳಿ ಕರೆ ತರಬೇಕೆನ್ನುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಎನ್‌ಡಿಎ ಅಂಗಪಕ್ಷವಾಗಲು ಬಯಸಿದ್ದಾರೆ. ಈ ಬಗ್ಗೆ ಎರಡು ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಗೊಂದಲವಿದ್ದು ಮುಂದಿನ 15 ದಿನದೊಳಗೆ ಗೊಂದಲಗಳಿಗೆ ತೆರೆಬೀಳಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. 

ಬೈಂದೂರಿನ ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ಸುಮಾರು 16 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ಬಳಕ ಮಾತನಾಡಿದರು. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವುದು ಜನತೆಯ ಬಯಕೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಮೋದಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ಪತ್ರ ಬರೆದು ಬೆಂಬಲ ಸೂಚಿಸಿದ್ದಾರೆ ಎಂದರು. 

ರೈಲ್ವೆ ನಿಲ್ದಾಣ ಕಾಮಗಾರಿಗೆ ಮೆಚ್ಚುಗೆ: ಇಲ್ಲಿನ ರೈಲು ನಿಲ್ದಾಣ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೊಂದು ಅತಿ ದೊಡ್ಡ ರೈಲು ನಿಲ್ದಾಣವಾಗಿ ಹೊರಹೊಮ್ಮಲಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ತೆರಳುವ ಭಕ್ತರ ಹಿತದೃಷ್ಟಿಯಿಂದ ಇಲ್ಲಿ ಮಂಗಳೂರು-ಮಡಗಾಂವ್ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡುವ ಬಗ್ಗೆ ಈಗಾಗಲೇ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ವಂದಿಸಿದ್ದಾರೆ ಎಂದರು. 

ರಾ.ಹೆ. ಶೀಘ್ರ ದುರಸ್ತಿ: ಕುಂದಾಪುರದಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೇ ದಿನದಲ್ಲಿ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಕಾರ್ಯ ನಡೆಯಲಿದೆ. ಹೆದ್ದಾರಿ ದುರಸ್ತಿ ಬಗ್ಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಚರ್ಚಿಸಲಾಗುವುದು. ಬೈಂದೂರು ಒಳ ರಸ್ತೆಯನ್ನು ತಮ್ಮ ಅನುದಾನದಿಂದ ದುರಸ್ತಿಗೊಳಿಸಲಾಗುವುದು ಎಂದರು. 

ಕಳೆದ ಸರಕಾರದ ಅವಧಿಯಲ್ಲಿ ಬೈಂದೂರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಅದು ತಾಂತ್ರಿಕ ಕಾರಣಗಳಿಂದ ನನೆಗುದ್ದಿಗೆ ಬಿದ್ದಿದ್ದು ಅದನ್ನು ಶೀಘ್ರ ಪೂರ್ಣಗೊಳಿಸಲು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. ಕೆಜೆಪಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಶೆಟ್ಟಿ, ಮೂಕಾಂಬಿಕಾ ರೈಲ್ವೆ ಯಾತ್ರಿಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ಸದಾಶಿವ ಪಡುವರಿ, ಜಯಾನಂದ ಪಟವಾಲ್, ಮೋಹನಚಂದ್ರ, ಮಂಜು ದೇವಾಡಿಗ, ಸಂತೋಷ ಭಂಡಾರಿ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com