ವ್ಯವಸ್ಥೆಯನ್ನು ಸರಿಪಡಿಸುವ ಹೊಣೆ ರೈತರ ಮೇಲಿದೆ: ಕೆ. ಪ್ರತಾಪಶ್ಚಂದ್ರ ಶೆಟ್ಟಿ

ಬೈಂದೂರು: ಇಂದು ಸರಕಾರದ ತಪ್ಪು ನೀತಿಗಳಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಇಲಾಖೆಯಿಂದ ಸರಿಯಾದ ಮಾಹಿತಿ ದೊರಕುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಸಂಪೂರ್ಣ ಹಾನಿಯಾಗುತ್ತಿದೆ. ಅಸಮರ್ಪಕ ನೀರಾವರಿ ಯೋಜನೆಗಳಿಂದಾಗಿ ರೈತರು ಕಂಗೆಟ್ಟಿದ್ದಾರೆ. ಸರಕಾರದ ಯೋಜನೆಗಳು ಕೃಷಿಕರಿಗೆ ತಲುಪಬೇಕು. ಇದಕ್ಕಾಗಿ ಜಿಲ್ಲೆಯ ರೈತರು ಸಂಘಟಿತರಾಗುವ ಮೂಲಕ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿ, ಸರಕಾರದ ವ್ಯವಸ್ಥೆಯನ್ನು ಸರಿಮಾಡುವ ಹೊಣೆ ರೈತರ ಮೇಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಶ್ಚಂದ್ರ ಶೆಟ್ಟಿ ಹೇಳಿದರು. 
      ನಾಗೂರಿನ ಶ್ರೀ ಲಲಿತಾಕೃಷ್ಣ ಕಲಾ ಮಂದಿರದಲ್ಲಿ ಜರುಗಿದ ಉಡುಪಿ ಜಿಲ್ಲಾ ರೈತ ಸಂಘದ ಖಂಬದಕೋಣೆ ವಲಯದ ರೈತರ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
       ಜಿಲ್ಲಾ ರೈತ ಸಂಘ ಪಕ್ಷಾತೀತ ಸಂಘಟನೆಯಾಗಿದೆ. ಇಂದು ಕೃಷಿಕರಿಗೆ ಆಗುತ್ತಿರುವ ಅನ್ಯಾಯಕ್ಕೆ ಆಡಳಿತ ನಡೆಸಿದ ಎಲ್ಲ ಪಕ್ಷದ ಸರಕಾರಗಳು ಹೊಣೆ ಎಂದು ಆರೋಪಿಸಿದ ಅವರು, ಇದನ್ನು ಕನಿಷ್ಠ ಬದಲಾವಣೆ ಮಾಡಲು ತಮ್ಮ ಜವಾಬ್ದಾರಿಯ ಕುರಿತು ಕೃಷಿಕರು ಚಿಂತನೆ ನಡೆಸಬೇಕಾಗಿದೆ. ಯಾವುದೇ ಸರಕಾರ ರೈತ ವಿರೋಧಿ ಅಲ್ಲ, ಆದರೆ ರೈತ ಪರ ಕೆಲಸ ಮಾಡುವಾಗ, ಸ್ವಲ್ಪ ಮಟ್ಟಿಗೆ ದಿಕ್ಕನ್ನು ಬದಲಾಯಿಸಿಕೊಳ್ಳವ ಅಗತ್ಯತೆಯಿದೆ. ಆಗ ಮಾತ್ರ ಅದು ಯಶ ಕಾಣಲು ಸಾಧ್ಯವಾಗುತ್ತದೆ ಎಂದರು. 
       ತಾಪಂ ಸದಸ್ಯರಾದ ರಾಜು ಪೂಜಾರಿ, ಕೆದೂರು ಸದಾನಂದ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ, ಭಾರತೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ವೆಂಕಟೇಶ ಹೊಸ್ಕೋಟೆ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಹೇರೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಗೋಪಾಲ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. 
        ಈ ಸಂದರ್ಭ ರೈತರೊಂದಿಗೆ ಸಂವಾದ ನಡೆಯಿತು. ಸಂವಾದದಲ್ಲಿ ಬಿ.ಎಸ್. ಸುರೇಶ ಶೆಟ್ಟಿ, ಸತೀಶ ಶೆಟ್ಟಿ, ಪ್ರಭಾಕರ ಶೆಟ್ಟಿ, ಮಂಜುನಾಥ ಹೆಬ್ಬಾರ್, ಲಕ್ಷ್ಮೀ ದೇವಾಡಿಗ, ಜಯರಾಮ ಹೆಬ್ಬಾರ್, ರಾಜು ದೇವಾಡಿಗ, ಜಯಪ್ರಕಾಶ ಪಾಲ್ಗೊಂಡು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ವಿ.ಎಚ್. ನಾಯಕ್ ಕಾರ್ಯಕ್ರಮ ನಿರೂಪಿಸಿ, ನರಸಿಂಹ ದೇವಾಡಿಗ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com