ನಿವೇಶನ ರಹಿತರ ಆಹೋರಾತ್ರಿ ಧರಣಿ ಮುಷ್ಕರ

ಕುಂದಾಪುರ: ಅಧಿಕಾರಿಗಳ ಬೇಜವಾಬ್ದರಿತನವೇ ಕೃಷಿಕೂಲಿ ಕಾರ್ಮಿಕರು ಇಂದು ಬೀದಿಗೆ ಬಂದು ಹೋರಾಟ ನಡೆಸಲು ಕಾರಣವಾಗಿದೆ. ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಹೇಳಿದರು.
       ಅವರು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ನೇತ್ರತ್ವದಲ್ಲಿ ರಾಜ್ಯ ಸಮಿತಿಯ ಕರೆಯ ಮೇರೆಗೆ ಕುಂದಾಪುರ ತಾಲೂಕು ಕಚೇರಿ ಎದುರು ಸೋಮವಾರದಿಂದ ನಡೆಯುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
       ಕುಂದಾಪುರದಲ್ಲಿ ಕಳೆದ ಎರಡು ವರ್ಷಗಳಿಂದ ನಿವೇಶನ ರಹಿತರು ಈ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಸರಕಾರ ಹಾಗೂ ಅಧಿಕಾರಿಗಳು ಸ್ಪಂದಿಸದೇ ಇರುವುದು. ವಿಪರ್ಯಾಸಕರ. ಆದರೆ ಇಂದು ನಡೆಸುತ್ತಿರುವ ಹೋರಾಟ ರಾಜ್ಯದ ಕಣ್ಣು ತೆರಸಲಿದೆ ಎಂದರು.
         ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಭಾಗವಹಿಸಿ ಮನವಿ ಸ್ವೀಕರಿಸಿದರು. 
      ಸೋಮವಾರ ರಾತ್ರಿ ಧರಣಿ ನಿರತರನ್ನು ಭೇಟಿ ಮಾಡಿದ ಅವರು, ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಲು ಸಾಧ್ಯವಾಗಿಲ್ಲ. ಸರಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದವರನ್ನು ಎಬ್ಬಿಸುವ ಪ್ರಯತ್ನವು ನಡೆದಿಲ್ಲ. 94ಸಿ ಯಡಿ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು ಹೋರಾಟದ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು. 
   ಕುಂದಾಪುರ ತಾಲೂಕು ತಹಶೀಲ್ದಾರ್‌ ಕಚೇರಿ ಎದುರು ಕುಂದಾಪುರ ತಾಲೂಕಿನಾದ್ಯಂತ 20 ಗ್ರಾಮ ಪಂಚಾಯತ್‌ಗಳಿಂದ ಬಡ ನಿವೇಶನ ರಹಿತ ಅರ್ಜಿದಾರರು ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಹೋರಾಟದಲ್ಲಿ ಭಾಗವಹಿಸಿದರು.
       ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದೋಗು ಸುವರ್ಣ, ಸಿಪಿಎಂ.ಕಾರ್ಯದರ್ಶಿ ಕೆ.ಶಂಕರ್‌, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ರಾಜೀವ ಪಡುಕೋಣೆ, ಕಾರ್ಯದರ್ಶಿ ವೆಂಕಟೇಶ ಕೋಣಿ, ತಾಲೂಕು ಉಪಾಧ್ಯಕ್ಷ ದಾಸ ಭಂಡಾರಿ, ತಾ.ಪಂ.ಸದಸ್ಯೆ ಶಶಿಕಲಾ, ಸಿಐಟಿಯು ಕಾರ್ಯದರ್ಶಿ ಎಚ್‌.ನರಸಿಂಹ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಸುರೇಶ ಕಲ್ಲಾಗರ , ಕುಂದಾಪುರ ತಾಲೂಕಿನಾದ್ಯಂತ 20 ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com