ಮಕ್ಕಳಲ್ಲಿ ವೈಚಾರಿಕ ಮನೋಭಾವ ಮೂಡಿಸಿ: ಹುಲಿಕಲ್ ನಟರಾಜ್

ಉಡುಪಿ: ಹಿಂಸೆಯನ್ನು ಪ್ರತಿರೋಧಿಸುವ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಸಮಾಜದಲ್ಲಿ ಕೊಲೆ, ಪಾತಕಗಳು ಕಡಿಮೆಯಾಗಿಲ್ಲ. ಆದ್ದರಿಂದ ಶೈಕ್ಷಣಿಕ ಹಂತದಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ವೈಚಾರಿಕ- ವೈಜ್ಞಾನಿಕ ಮನೋಭಾವಗಳನ್ನು ಮೂಡಿಸಬೇಕು. ಇದರಿಂದ ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಕಡಿಮೆ ಮಾಡಬಹುದು ಎಂದು ವಿಚಾರವಾದಿ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ವಿಚಾರವಾದಿ ವೇದಿಕೆ ಮತ್ತು ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಸ್ಮರಣಾರ್ಥ ಹಮ್ಮಿಕೊಂಡ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಅವರು ವಿವಿಧ ಪ್ರದರ್ಶನಗಳ ಮೂಲಕ ಪವಾಡಗಳ ರಹಸ್ಯವನ್ನು ಬಯಲು ಮಾಡಿ ಮಾತನಾಡಿದರು.
ಭಯೋತ್ಪಾದಕರ ಮೇಲೆ ಮಾಟ ಮಾಡಲಿ: ವಾಮಚಾರದ ಮೇಲೆ ನಂಬಿಕೆ ಇರುವ ಮಂತ್ರವಾದಿಗಳು ಮಾಟ, ಮಂತ್ರಗಳ ಪ್ರಯೋಗವನ್ನು ಅಮಾಯಕರ ಮೇಲೆ ಮಾಡುವ ಬದಲು ನಮ್ಮ ದೇಶದ ಒಳಕ್ಕೆ ನುಸುಳಿ ಬರುವ ಭಯೋತ್ಪಾದಕರ ಮೇಲೆ ಮಾಡಲಿ ಎಂದು ತಿಳಿಸಿದ ನಟರಾಜ್, ನಕಲಿ ಪವಾಡ ಪುರುಷರು ದುರ್ಬಲ ಮನಸ್ಸಿನ ಮಹಿಳೆಯರು ಮತ್ತು ಮಕ್ಕಳ ಮೇಲೆ ಪವಾಡದ ಹೆಸರಲ್ಲಿ ಮೋಸ ಮಾಡುತ್ತ ಆಟ ಆಡಬಾರದು ಎಂದು ಮನವಿ ಮಾಡಿದರು.
ಲಿಂಬೆ ಹುಳಿಯನ್ನು ನೀರಿನಲ್ಲಿ ಮುಳುಗಿಸಿ ಮಾಯ ಮಾಡುವುದು, ಮುಳ್ಳಿನ ಮೇಲೆ ಕುಳಿತುಕೊಳ್ಳುವುದು, ಖಾಲಿ ಕೊಡದಿಂದ ನೀರು ಬರುವಂತೆ ಮಾಡುವುದು ಇತ್ಯಾದಿ ತಂತ್ರಗಾರಿಕೆಯನ್ನು ಅವರು ಬಯಲು ಮಾಡಿದರು.
ಕಾರ್ಯಕ್ರಮವನ್ನು ಬಡಗುಬೆಟ್ಟು ಸಹಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಬಿ. ಇಂದ್ರಾಳಿ ಜಯಕರ ಶೆಟ್ಟಿ ಉದ್ಘಾಟಿಸಿದರು. ವಿಚಾರವಾದಿ ವೇದಿಕೆ ಅಧ್ಯಕ್ಷ ಗೋಪಾಲ ಬಿ. ಶೆಟ್ಟಿ ಇದ್ದರು.
ಈ ಸಂದರ್ಭ ನೂತನ ನಗರಸಭಾಧ್ಯಕ್ಷ ಯುವರಾಜ್ ಪುತ್ತೂರು ಹಾಗೂ ಹುಲಿಕಲ್ ನಟರಾಜ್ ಅವರನ್ನು ಸನ್ಮಾನಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com