ಕೋಟಿ - ಚೆನ್ನಯ್ಯರ ಜನ್ಮ - ಸಮಾಧಿ ಸ್ಥಳ ಅಭಿವೃದ್ಧಿ: ಸೊರಕೆ

ಕುಂದಾಪುರ: ಬಿಲ್ಲವ ಸಮಾಜದ ಕುಲದೇವತೆಗಳಾದ ಕೋಟಿ ಚೆನ್ನಯ್ಯರ ಜನ್ಮ ಸ್ಥಳವನ್ನು ಅಭಿವೃದ್ಧಿಪಡಿಸಿ ಅವರ ಸಮಾಧಿ ಸ್ಥಳದಲ್ಲಿರುವ ಕುರುಹುಗಳನ್ನು ಸಂರಕ್ಷಿಸಿ ಈ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರಕಾರ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.
      ಅವರು ಕುಂದಾಪುರದ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಬಿಲ್ಲವ ಸಮಾಜದ ಸಚಿವರು, ಶಾಸಕರನ್ನು ಅಭಿನಂದಿಸುವ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಇನ್ನಷ್ಟು ಶಕ್ತಿ ನೀಡುತ್ತದೆ

ಬ್ರಹ್ಮಶ್ರೀ ನಾರಾಯಣಗುರು ಸ್ಮರಣೆ ಹಾಗೂ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರಕಾರ 2 ಕೋಟಿ ರೂ. ವೆಚ್ಚದಲ್ಲಿ ನಾರಾಯಣ ಗುರು ಅಧ್ಯಯನ ಪೀಠ ರಚಿಸಲು ಹಾಗೂ ನಾರಾಯಣಗುರು ಸಂದೇಶ, ವಿಚಾರಧಾರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಶ್ರೀ ನಾರಾಯಣಗುರು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಇನ್ನಷ್ಟು ಶಕ್ತಿಕೊಡುತ್ತದೆ. ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘದಿಂದ ಪ್ರತಿ ವರ್ಷ ನಡೆಯುವ ಈ ಉತ್ತಮ ಕಾರ್ಯ ನಿರಂತರ ನಡೆಯಲಿ ಎಂದರು.

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ವಿನಯ ಕುಮಾರ್‌ ಸೊರಕೆ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗೌರವಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ ಅವರು ಅಭಿನಂದಿಸಿದರು.

ಸಂಘಟನೆಯಿಂದ ಬಲ

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಗೌರವಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಘಟನೆಯಿಂದ ಮಾತ್ರ ಸಂಘಕ್ಕೆ ಬಲ ಬರುತ್ತದೆ. ಆದ್ದರಿಂದ ಸಂಘಟನೆ ಶಕ್ತಿ ಬಲಗೊಳಿಸ‌ಬೇಕಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೆಳಕು ಚೆಲ್ಲಲು ಈ ವಿದ್ಯಾರ್ಥಿ ವೇತನ ಸಹಕಾರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಯಶೋದಾ ಎನ್‌. ಪೂಜಾರಿ, ಉಪಾಧ್ಯಕ್ಷರಾದ ಮಾಣಿಗೋಪಾಲ, ಶ್ರೀನಿವಾಸ ಉಬೆjàರಿ, ಕಲ್ಪನಾ ಭಾಸ್ಕರ್‌, ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಬಿಲ್ಲವ ಹಳಅಳಿವೆ, ಯುವಕ ಮಂಡಳದ ಅಧ್ಯಕ್ಷ ರಾಘು ವಿಠಲವಾಡಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಬಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಿಲ್ಲವ ಮಹಿಳಾ ಘಟಕದ ವತಿಯಿಂದ ಹೊಲಿಗೆಯಂತ್ರ ವಿತರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಗಣೇಶ್‌ ಪೂಜಾರಿ ವಿಠಲವಾಡಿ ಸ್ವಾಗತಿಸಿದರು. ಭಾಸ್ಕರ್‌ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು. ಸುಧಾ ರತ್ನಾಕರ ಹೊಲಿಗೆ ಯಂತ್ರ ಫಲಾನುಭವಿಗಳ ಪಟ್ಟಿ ವಾಚಿಸಿದರು. ಮಾಣಿಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕಾಳಪ್ಪ ಪೂಜಾರಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com