ಕನ್ನಡತನ ಉಳಿಸುವ ಕಾಯಕದಲ್ಲಿ ಸರಕಾರ ನೆರವಾಗಬೇಕಿದೆ : ಡಾ. ಆಳ್ವ

ಕುಂದಾಪುರ: ಕಳೆದ 19 ವರ್ಷದಿಂದ ಆಳ್ವಾಸ್ ನುಡಿಸಿರಿ ಮೂಲಕ ಕನ್ನಡತನ ಉಳಿಸುವ ಕಾರ್ಯ ಮಾಡುತ್ತಿದ್ದರೂ ಸರಕಾರಿ ಪ್ರೋತ್ಸಾಹ ಮಾತ್ರ ಕ್ಷೀಣವಾಗಿದೆ. ಸರಕಾರ ಒಂದು ರೂ. ಅನುದಾನ ನೀಡಿಲ್ಲ ಎಂದು ಮೂಡುಬಿದಿರೆ ಆಳ್ವಾಸ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಬೇಸರ ವ್ಯಕ್ತಪಡಿಸಿದ್ದಾರೆ.
         ಇಲ್ಲಿನ ಹೋಟೆಲ್ ಪಾರಿಜಾತದಲ್ಲಿ ಜರುಗಿದ ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ 2013 ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದಿನಕ್ಕೆ 1 ಲಕ್ಷದಂತೆ ಒಟ್ಟು ಈ ಕಾರ್ಯಕ್ರಮದ ಅವಧಿಯಲ್ಲಿ 10 ಲಕ್ಷ ಜನ ಸೇರುವ ನೀರಿಕ್ಷೆ ಹೊಂದಿದ್ದೇವೆ. 600 ಪುಸ್ತಕಗಳ ಪ್ರದರ್ಶನಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ವಿರಾಸತ್‌ನಲ್ಲಿ ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಫಲಪುಷ್ಪ ಪ್ರದರ್ಶನಗಳು ನಡೆಯುತ್ತದೆ. ಡಿ.19ರಂದು ಮೂರು ಸಾವಿರ ಜಾನಪದ ಕಲಾವಿದರ ನೇತೃತ್ವದಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ 2013 ಉದ್ಘಾಟನೆಗೊಳ್ಳಲಿದೆ. ಈ ಹಿಂದೆ ಭಾಗವಹಿಸಿದ 9 ಅಧ್ಯಕ್ಷರ ಸಮ್ಮುಖದಲ್ಲಿ 100ಕ್ಕೂ ಹೆಚ್ಚು ಹೊಸ ಸಂದೇಶವನ್ನು ಹೊರ ತರುವ ಈ ಪ್ರಯತ್ನಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದು ನುಡಿದರು. 
     ಆಳ್ವಾಸ್ ವಿಶ್ವ ನುಡಿಸಿರಿ ಕಾರ್ಯಕ್ಕೆ ಅಂದಾಜು 20 ಕೋಟಿ ರೂ.ಗೂ ಮಿಕ್ಕಿ ಅನುದಾನ ಬೇಕಾಗುತ್ತದೆ. 19 ವರ್ಷದಿಂದ ನಡೆಯುತ್ತಿರುವ ನುಡಿಸಿರಿ ನಿರಂತರ ನಡೆಯಬೇಕು ಎಂಬುದು ನಮ್ಮ ಆಶಯ. ಆದರೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಈ ಅನುಪಮ ಕಾರ್ಯಕ್ಕೆ ಸರಕಾರ ಬೇಡವಾಗಿರುವುದು ವೇದನೆಯ ಸಂಗತಿ ಎಂದು ಅಭಿಪ್ರಾಯಪಟ್ಟರು. 
     ಡಿಸೆಂಬರ್‌ನಲ್ಲಿ ನಡೆಯುವ ಆಳ್ವಾಸ್ ವಿಶ್ವ ನುಡಿಸಿರಿ ಕಾರ್ಯಕ್ರಮಕ್ಕೆ ಮೂರು ಸಮಾನಾಂತರ ವೇದಿಕೆ ರಚಿಸಲಾಗಿದ್ದು, ಈ ವೇದಿಕೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕೃಷಿ ಮೇಳ ಆಯೋಜಿಸ ಲಾಗಿದ್ದು, ಅದರಲ್ಲಿ ಸುಮಾರು ದಿನಕ್ಕೆ 40 ಸಾವಿರ ರೈತರ ಚಿಂತನ- ಮಂಥನ ಕಾರ್ಯಕ್ರಮ ಜರುಗಲಿದೆ. 
    ಕಲೆಯ ಉಳಿವಿಗಾಗಿ ಸುಮಾರು 4500 ಕಲೆಗಳ ಜಾನಪದ ಮತ್ತು ವಿಶೇಷವಾಗಿ ಯಕ್ಷಗಾನ, ನಾಟಕ, ವಚನ ಸಾಹಿತ್ಯ ಸೇರಿದಂತೆ ಕಲೆಯ ಬೆಳವಣಿಗೆ ಮತ್ತು ಉಳಿಸುವಿಕೆಗಾಗಿ ಚಿಂತನ ಮಂಥನ ಕಾರ್ಯಕ್ರಮ ಗಳು ಇದೇ ವೇದಿಕೆಯಲ್ಲಿ ನಡೆಯಲಿದೆ. ಈಗಾಗಲೇ 60 ಕಡೆಗಳಲ್ಲಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನೀಡಿದ್ದು ಆಭೂತಪೂರ್ವ ಹೆಗ್ಗಳಿಕೆ ಪಾತ್ರವಾಗಿದೆ. ದಾವಣಗೆರೆ, ಅರಸೀಕೆರೆ, ಹಾವೇರಿ, ಬೇಳೂರು-ಹಳೇಬಿಡು, ರಾಣೆಬೆನ್ನೂರು ಸೇರಿದಂತೆ ರಾಜ್ಯದ ಅನೇಕ ಮೂಲೆಮೂಲೆಗಳಲ್ಲಿ ಈ ಕಾರ್ಯಕ್ರಮ ನೀಡಿದ್ದೇವೆ. ಈ ಕಾರ್ಯಕ್ರಮದ ಅನುದಾನಕ್ಕಾಗಿ ಈ ಬಾರಿ ನೇರವಾಗಿ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೇವೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು. 
     ಆಳ್ವಾಸ್ ನುಡಿಸಿರಿ ತಾಲೂಕು ಘಟಕದ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿ ಪ್ರಾರ್ಥಿಸಿದರು. ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಸ್ವಾಗತಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com