ಧಾರ್ಮಿಕತೆಯಿಂದ ಸಾಮಾಜಿಕ ಶಾಂತಿ: ಕೋಟ ಶ್ರೀನಿವಾಸ ಪೂಜಾರಿ

ಹೆಮ್ಮಾಡಿ:  ಶಾರದೋತ್ಸವ, ಗಣೇಶೋತ್ಸವ, ಸಾಮೂಹಿಕ ಭಜನೆ ಮುಂತಾದ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉದಾತ್ತ ಚಿಂತನೆ ಹಾಗೂ ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ಧಾರ್ಮಿಕತೆಯಲ್ಲಿ ವಿಶ್ವಾಸ, ದೇವಾನುದೇವತೆಗಳಲ್ಲಿ ನಂಬಿಕೆಯನ್ನಿಡುವುದರಿಂದ ಒಡೆದ ಮನಸ್ಸುಗಳನ್ನು ಒಂದುಗೂಡಿಸಬಹುದು. ಧಾರ್ಮಿಕ ಮನೋಭಾವದಿಂದ ಸಾಮಾಜಿಕ ಶಾಂತಿಯ ಸ್ಥಾಪನೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
   ಹೆಮ್ಮಾಡಿಯ ಸಾರ್ವಜನಿಕ ಶ್ರೀ ದಸರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜರಗಿದ 19ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಅಂಗವಾಗಿ ಸ್ಥಳೀಯ ಹೆರಾಲ್ಡ್ ರೆಬೆಲ್ಲೋ ಸಭಾಂಗಣದಲ್ಲಿ ಅಕ್ಟೋಬರ್ 13ರಂದು ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಆವರು ಮಾತನಾಡಿದರು. 
   ಶುಭಾಶಂಸನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅವರು, ಧಾರ್ಮಿಕ ಮನೋಭಾವದ ಅತಿರೇಕದಿಂದ ಜನರಲ್ಲಿ ಅಂಧಶ್ರದ್ಧೆ ಹೆಚ್ಚುತ್ತಿದೆ. ಧರ್ಮ, ದೇವರ ಕುರಿತ ನಂಬಿಕೆಯಲ್ಲಿನ ನೈಜ ಭಕ್ತಿಗಿಂತ ಭಯಕ್ಕೆ ಸ್ಥಾನ ಸಿಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಧಾರ್ಮಿಕ ಶ್ರದ್ಧೆಯು ಜನರಲ್ಲಿ ಜ್ಞಾನದ ಕಣ್ಣನ್ನು ತೆರೆಸುವಂತಹ ಎಚ್ಚರಿಕೆಯನ್ನು ಬೆಳೆಸುವ ಅಗತ್ಯವಿದೆ ಎಂದರು. 
   ಮುಖ್ಯ ಅತಿಥಿ ಉಡುಪಿಯ ಉದ್ಯಮಿ ಎನ್. ಕೆ. ಸ್ವಾಮಿ ಅವರು ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್‍ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ರಾಜು ಪೂಜಾರಿ, ಜನಾರ್ದನ ಪೂಜಾರಿ ಸಂತೋಷನಗರ, ಸಮಿತಿಯ ಅಧ್ಯಕ್ಷ ದಿವಾಕರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
   ರವಿ ಕೆ. ಹೆಮ್ಮಾಡಿ ಸ್ವಾಗತಿಸಿದರು. ಶ್ರೀಕಾಂತ್ ದೇವಾಡಿಗ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಸತ್ಯಕಿರಣ್ ವಂದಿಸಿದರು.   
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com