ಕಾಲುಬಾಯಿ ಜ್ವರದ ಶಂಕೆ; ಶಿರೂರಿನಲ್ಲಿ ಮುನ್ನೆಚ್ಚರಿಕೆ ಕ್ರಮ

ಶಿರೂರು: ಗ್ರಾಮದ ವಿವಿಧ ಕಡೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಕ್ಷಣ ಕಂಡುಬಂದಿದ್ದು, ಹೈನುಗಾರರನ್ನು ಆತಂಕಕ್ಕೀಡು ಮಾಡಿದೆ.

ನಾಲ್ಕು ದನಗಳಿಗೆ ಕಾಲುಬಾಯಿ ಜ್ವರ

ಇಲ್ಲಿನ ಗೋಳಿಗುಂಡಿ ಅಮೃತಧಾರ ಗೋಶಾಲೆಯಲ್ಲಿ 4 ದನಗಳು ಕಳೆದ 1 ತಿಂಗಳಿಂದ ಜ್ವರದಿಂದ ಬಳಲುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೋಶಾಲೆ ಮುಖ್ಯಸ್ಥ ಸುರೇಶ ಅವಭೃತ, ಗೋಶಾಲೆಯಲ್ಲಿ ವಿವಿಧ ತಳಿಯ 73 ದನಗಳಿದ್ದು, ನಾಲ್ಕು ದನಗಳಿಗೆ ಜ್ವರ ಕಾಣಿಸಿಕೊಂಡಿದೆ. 1 ದನದ ಪರಿಸ್ಥಿತಿ ಗಂಭೀರವಾಗಿದೆ. ಪಶು ವೈದ್ಯರು ಅದಕ್ಕೆ ಪ್ರತ್ಯೇಕ ಚಿಕಿತ್ಸೆ ನೀಡುತ್ತಿದ್ದಾರೆ ಎಂದಿದ್ದಾರೆ.

ಐದು ಕರುಗಳ ಸಾವು

ಶಿರೂರಿನ ನೀರ್ಗದ್ದೆ ಶಿವರಾಮ ಶೆಟ್ಟಿ ಅವರ ಮನೆಯ 5 ಕರುಗಳು ಜ್ವರದಿಂದ ಸಾವನ್ನಪ್ಪಿವೆ. 3 ಹಸುಗಳು ಜೀವನ್ಮರಣ ಹೋರಾಟ ನಡೆಸುತ್ತಿವೆ. ಶಿರೂರು ವ್ಯಾಪ್ತಿಯ ಕರಾವಳಿ, ನೀರYದ್ದೆ, ಯಡ್ತರೆ ಮುಂತಾದ ಗ್ರಾಮೀಣ ಭಾಗಗಳಲ್ಲಿ ಜಾನುವಾರುಗಳ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತಿವೆ.

ಸೂಕ್ತ ಮುನ್ನೆಚ್ಚರಿಕೆ ಕ್ರಮ

ಈ ಬಗ್ಗೆ ಪ್ರತಿಕ್ರಿಯಿಸಿದ ಬೈಂದೂರು ಪಶು ವೈದ್ಯಾಧಿಕಾರಿ ಶಂಕರ ಶೆಟ್ಟಿ, ಬೈಂದೂರು ವ್ಯಾಪ್ತಿಯ ಶಿರೂರಿನಲ್ಲಿ ಕೆಲವು ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಪ್ರಾಥಮಿಕ ಲಕ್ಷಣ ಕಂಡುಬಂದಿದೆ. ಆದರೆ ಇದುವರೆಗೆ ಯಾವುದೇ ಜಾನುವಾರು ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿದ ವರದಿಯಾಗಿಲ್ಲ. ಬೈಂದೂರು ಪಶು ವೈದ್ಯಕೀಯ ಕೇಂದ್ರದ ವ್ಯಾಪ್ತಿಯಲ್ಲಿ 15 ಗ್ರಾಮಗಳಿದ್ದು, 26 ಸಾವಿರ ಜಾನುವಾರುಗಳಿವೆ. ಈಗಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಪ್ರತ್ಯೇಕ ಕ್ಯಾಂಪ್‌ ನಡೆಸಿ ವ್ಯಾಕ್ಸಿನ್‌ ನಡೆಸಲಾಗುತ್ತಿದೆ ಎಂದಿದ್ದಾರೆ.

ಹೇನ್‌ಬೇರು ಘಟನೆ ನೆನಪು

ಕುಂದಾಪುರ ತಾಲೂಕಿನ ಶಿರೂರಿನ ಗ್ರಾಮದಲ್ಲಿ ಕಾಲುಬಾಯಿ ಜ್ವರದ ಲಕ್ಷಣಗಳು ಕಂಡುಬಂದಿರುವುದು ಹೇನ್‌ಬೇರು ಘಟನೆ ನೆನಪನ್ನು ಮರುಕಳಿಸುವಂತೆ ಮಾಡಿದೆ. ಒಂದು ವರ್ಷದ ಹಿಂದೆ ಪಡುವರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೇನ್‌ಬೇರು ಎಂಬಲ್ಲಿ ತ್ಯಾಜ್ಯ ತಿಂದು 70ಕ್ಕೂ ಅಧಿಕ ಜಾನುವಾರು ಸಾವನ್ನಪ್ಪಿರುವುದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು ಈ ನೆನಪು ಮಾಸುವ ಮುನ್ನ ಶಿರೂರಿನಲ್ಲಿ ಕಾಲುಬಾಯಿ ಜ್ವರದ ಲಕ್ಷಣಗಳು ಕಂಡುಬಂದಿರುವುದು ಆತಂಕಕಾರಿಯಾಗಿದೆ. ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com