ಖ್ಯಾತ ಗಾಯಕ ಮನ್ನಾ ಡೇ ನಿಧನ

ಬೆಂಗಳೂರು: ಹೃದಯತುಂಬಿ ಹಾಡಿ ಕೋಟ್ಯಂತರ ಜನರ ಹೃದಯಬಡಿತ ಸರಾಗಗೊಳಿಸಿದ ಗಾನಕೋಗಿಲೆ ಮನ್ನಾ ಡೇ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾವು 3:50ಕ್ಕೆ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಮನ್ನಾ ಡೇ ನಿಧನರಾಗಿದ್ದಾರೆ.
     ಹೃದಯಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದ 94 ವರ್ಷದ ಮನ್ನಾ ಡೇ 5 ತಿಂಗಳ ಹಿಂದೆ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದರು. ಮಮನ್ನಾ ಡೇ ಇಬ್ಬರು ಹೆಣ್ಮಕ್ಕಳನ್ನ ಅಗಲಿದ್ದಾರೆ. ಅವರ ಸಾವಿನ ವೇಳೆ ಜೊತೆಯಲ್ಲಿ ಅವರ ಮಗಳು ಶುಮಿತಾ ದೇಬ್ ಹಾಗೂ ಅಳಿಯ ಜ್ಞಾನರಂಜನ್ ದೇಬ್ ಇದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರ.
ಮನ್ನಾ ಡೇ ಅವರ ಪಾರ್ಥೀವ ಶರೀರವನ್ನ ಸಾರ್ವಜನಿಕ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10-12ರವರೆಗೆ ಇಡಲಾಗಿತ್ತು. ಇಂದು ಸಂಜೆಯ ವೇಳೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ಅದ್ಭುತ ಗಾಯಕನ ಕಥೆ
ಮನ್ನಾ ಡೇ ಹುಟ್ಟಿದ್ದು 1919 ಮೇ 1ರಂದು ಕೋಲ್ಕತಾದಲ್ಲಿ. ಅವರ ಮೂಲ ಹೆಸರು ಪ್ರಬೋಧ್ ಚಂದ್ರ ಡೇ... ಉಸ್ತಾದ್ ಅಮನ್ ಆಲಿ ಖಾನ್ ಮತ್ತು ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರಿಂದ ಶಾಸ್ತ್ರೀಯವಾಗಿ ಗಾಯನ ಕಲೆಯನ್ನ ಕರಗತ ಮಾಡಿಕೊಂಡ ಮನ್ನಾ ದೇ 1942ರಲ್ಲಿ ತಮನ್ನಾ ಚಿತ್ರದ ಮೂಲಕ ಗಾಯನ ಆರಂಭಿಸಿದರು. ತಮ್ಮ ಮೊದಲ ಹಾಡಿನ ಮೂಲಕವೇ ದಿಢೀರ್ ಖ್ಯಾತರಾಗಿಬಿಟ್ಟರು. ಅವರ ಅಪ್ಪಟ ಶಾಸ್ತ್ರೀಯ ಶೈಲಿ ಹಾಗೂ ಅದ್ಭುತ ಕಂಠಸಿರಿಯಿಂದ ಜನರಿಗೆ ಗಾಯನದ ಮೋಡಿ ಮಾಡಿದರು.
   ಮನ್ನಾ ಡೇ 4 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದರೆ. ಅವರ ಕಾರ್ಯಕ್ಷೇತ್ರ ಹೆಚ್ಚು ವ್ಯಾಪಕವಿದ್ದುದು ಹಿಂದಿ ಭಾಷೆಯಲ್ಲೇ... ತಮ್ಮ ಮಾತೃ ಭಾಷೆ ಬಂಗಾಳಿಯಲ್ಲೂ ಸಾಕಷ್ಟು ಹಾಡುಗಳನ್ನ ಹಾಡಿದ್ದಾರೆ... ಕನ್ನಡದಲ್ಲೂ ಏಳು ಹಾಡುಗಳನ್ನ ಹಾಡಿದ್ದಾರೆ.

ಖಾಸಗಿ ಬದುಕು.
ಮನ್ನಾಡೇ 1953ರಲ್ಲಿ ಕೇರಳದ ಸುಲೋಚನಾ ಕುಮಾರನ್ ಎಂಬುವವರನ್ನ ವಿವಾಹವಾಗಿದ್ದರು... ಮನ್ನಾಡೇ ಮುಂಬೈನಲ್ಲೇ ಬಹುತೇಕ ಬದುಕು ಸವೆಸಿದ್ದರೂ ಬೆಂಗಳೂರಿನ ಕಲ್ಯಾಣನಗರದಲ್ಲಿ ತಮ್ಮ ವೃದ್ಧಾಪ್ಯವನ್ನ ಕಳೆದದ್ದು ವಿಶೇಷ.. 2012ರ ಜನವರಿ 18ರಂದು ಪತ್ನಿ ಕ್ಯಾನ್ಸರ್'ನಿಂದ ಬೆಂಗಳೂರಿನಲ್ಲೇ ಇಹಲೋಕ ತ್ಯಜಿಸಿದ್ದರು.

ಪ್ರಶಸ್ತಿಗಳ ಮಹಾಪೂರ.
ಮನ್ನಾಡೇ ಅವರಿಗೆ ಹಲವು ಪ್ರಶಸ್ತಿ ಫಲಕಗಳು ಹುಡುಕಿಕೊಂಡು ಬಂದಿವೆ... ಪದ್ಮಶ್ರೀ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿವೆ.

ಕೃಪೆ: ಸುವರ್ಣ ನ್ಯೂಸ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com