ಕೇರಳದಲ್ಲಿ ಆರಂಭಗೊಂಡ ವಿದ್ಯಾರ್ಥಿ ಪೊಲೀಸ್‌ ಪಡೆ

ಕಾಸರಗೋಡು :ಸ್ಟುಡೆಂಟ್‌ ಪೊಲೀಸ್‌ ಕೆಡೆಟ್‌(ಎಸ್‌ಪಿಸಿ) ಕೇರಳ ರಾಜ್ಯದಾದ್ಯಂತ 2010 ರಲ್ಲಿ ಜಾರಿಗೆ ಬಂದ ಈ ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ, ಸಾಮರ್ಥ್ಯಶಾಲಿ ಹಾಗೂ ದೇಶವನ್ನು ಮುನ್ನಡೆಸುವ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸುವುದು. ಕೇರಳ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಮುಖ್ಯವಾಗಿ ಹೈಸ್ಕೂಲ್‌ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಲಾಗಿದೆ. ಕೇರಳ ಸರಕಾರದ ಗೃಹ ಇಲಾಖೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸರಕಾರಿ ಆಡಳಿತ ಮಂಡಳಿಯ ಸಹಭಾಗಿತ್ವದೊಂದಿಗೆ 2010 ಆಗಸ್ಟ್‌ 2 ರಂದು ಅಂದಿನ ಮುಖ್ಯಮಂತ್ರಿಗಳಾದ ವಿ.ಎಸ್‌.ಅಚ್ಯುತಾನಂದನ್‌ ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದರು.

'ವಿದ್ಯಾರ್ಥಿ ಪೊಲೀಸ್‌ ಪಡೆ' ಹೆಸರೇ ಸೂಚಿಸುವಂತೆ ಶಾಲೆಯನ್ನು ಕೇಂದ್ರೀಕರಿಸಿದ ಈ ಚಟುವಟಿಕೆಯ ನೇತೃತ್ವ ವಹಿಸಿ ಪ್ರಾರಂಭಿಸಿದ್ದು ಕೇರಳ ಸರಕಾರದ ಗೃಹ ಇಲಾಖೆ. ಪ್ರಜಾಪ್ರಭುತ್ವ ಸಮಾಜದ ಉತ್ತಮ ನಾಯಕರನ್ನಾಗಿಸುವ ಪ್ರಯತ್ನ ಪ್ರೌಢ ಶಾಲಾ ಹಂತದಿಂದಲೇ ಪ್ರಾರಂಭವಾಗಬೇಕಾದುದು ಪ್ರಸ್ತುತ ನಮ್ಮ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಅತೀ ಅವಶ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಅದಕ್ಕೆ ಅಗತ್ಯವಿರುವ ಕಾನೂನಿನ ಕುರಿತ ಗೌರವ, ಶಿಸ್ತು, ರಾಜಕೀಯ ಪ್ರಜ್ಞೆ, ಸಾಮಾಜಿಕ ಪಿಡುಗುಗಳ ವಿರುದ್ಧ ಪ್ರತಿಭಟಿಸುವ, ತಡೆಯುವ, ಹೋರಾಡುವ ಮನೋಧರ್ಮ ಮುಂತಾದ ಸಕಾರಾತ್ಮಕ ಗುಣಗಳನ್ನು ಬೆಳೆಸುವುದಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ವಿದ್ಯಾರ್ಥಿ ಪೊಲೀಸ್‌ ದಳಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದ್ದು, ಅದರೊಂದಿಗೆ ಪರಿಸರ ಪ್ರಜ್ಞೆ, ಶುಚಿತ್ವದ ಕುರಿತ ಅರಿವು, ಅಶಕ್ತರಿಗೆ ನೆರವು ಹೀಗೆ ಮಾನವೀಯ ಮೌಲ್ಯಗಳ ಕುರಿತ ಅರಿವನ್ನು ಚಟುವಟಿಕೆಗಳ ಮೂಲಕ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸುತ್ತದೆ.

2010 ರಲ್ಲಿ 127 ಶಾಲೆಗಳಲ್ಲಿ ಪ್ರಾರಂಭಗೊಂಡ ಎಸ್‌ಪಿಸಿ ಯೋಜನೆಯು ಪ್ರಸಕ್ತ ವರ್ಷದಲ್ಲಿ 234 ಶಾಲೆಗಳಿಗೆ ವಿಸ್ತರಣೆಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆ ಕುಂಜತ್ತೂರು, ಸರಕಾರಿ ಪ್ರೌಢ ಶಾಲೆ ಕಾಸರಗೋಡು, ಸರಕಾರಿ ಹೈಯರ್‌ ಸೆಕೆಂಡರಿ ಹೊಸದುರ್ಗ ಹಾಗೂ ಸರಕಾರಿ ಹೈಯರ್‌ ಸೆಕೆಂಡರಿ ಉದಿನೂರು ಎಂಬೀ ನಾಲ್ಕು ಶಾಲೆಗಳಲ್ಲಿ ಆರಂಭಗೊಂಡಿದ್ದು, ಪ್ರಸ್ತುತ ಜಿಲ್ಲೆಯ ಹನ್ನೆರಡು ಶಾಲೆಗಳಿಗೆ ವಿಸ್ತರಣೆಗೊಂಡಿದೆ. 44 ವಿದ್ಯಾರ್ಥಿಗಳ ಒಂದು ಬ್ಯಾಚ್‌ನಂತೆ ತರಬೇತಿ ನೀಡಲಾಗುತ್ತಿದ್ದು, ಅದರಲ್ಲಿ ಇಪ್ಪತ್ತೆರಡು ಮಂದಿ ಹುಡುಗರು ಹಾಗೂ 22 ಮಂದಿ ಹುಡುಗಿಯರಿರುತ್ತಾರೆ. ಎಂಟನೇ ತರಗತಿಯ ವಿದ್ಯಾರ್ಥಿಗಳನ್ನು ಜೂನಿಯರ್‌ ಕೆಡೆಟ್‌ಗಳೆಂದೂ, ಒಂಭತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಸೀನಿಯರ್‌ ಕೆಡೆಟ್‌ಗಳೆಂದೂ ಗುರುತಿಸಲಾಗುವುದು. ಈ ವಿದ್ಯಾರ್ಥಿಗಳಿಗೆ ಸಮವಸ್ತÅ, ಉತ್ತಮ ಆಹಾರ ಹಾಗೂ ಬಯಲು ಪ್ರವಾಸಕ್ಕಿರುವ ವೆಚ್ಚವೆಲ್ಲವನ್ನು ಸರಕಾರವೇ ಭರಿಸುತ್ತಿದ್ದು, ಇದೆಲ್ಲದರೊಂದಿಗೆ ಈ ದಳದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯ ಪಬ್ಲಿಕ್‌ ಪರೀಕ್ಷೆಯಲ್ಲಿ ಗ್ರೇಸ್‌ ಅಂಕಗಳನ್ನು ಕೂಡಾ ನೀಡಲಾಗುತ್ತಿದೆ.

ಒಟ್ಟಂದದಲ್ಲಿ ಸ್ಟುಡೆಂಟ್‌ ಪೊಲೀಸ್‌ ಕೆಡೆಟ್‌ ಎಂಬುದು ತತ್ವಶಾಸ್ತ್ರ, ಪ್ರಜಾಶಾಸ್ತ್ರ, ಸಮಾಜವಾದ ಮತ್ತು ಅರ್ಥಶಾಸ್ತÅ ಪರವಾದ ಪ್ರತಿನಿಧಿಯಾಗಿ ನಮ್ಮ ದೇಶವನ್ನು ಜಗತ್ತಿನ ದೇಶಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲಿಸಲು ಸಮರ್ಥರಾದ, ಯೋಗ್ಯ, ಅಂತ:ಶಕ್ತಿಯುಳ್ಳ, ಆತ್ಮಾಭಿಮಾನ, ದೇಶಾಭಿಮಾನವಿರುವ ಯುವಜನಾಂಗವನ್ನು ಸಿದ್ಧಪಡಿಸುವಲ್ಲಿ ಕೇರಳ ಸರಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ.

- ಕವಿತಾ ಟೀಚರ್‌, ಜಿವಿಎಚ್‌ಎಸ್‌ಎಸ್‌ ಕುಂಜತ್ತೂರು
- ಮಾಹಿತಿ : ಉಮೇಶ್‌ ಮಾಸ್ತರ್‌, ಜಿವಿಎಚ್‌ಎಸ್‌ಎಸ್‌ ಕುಂಜತ್ತೂರು

Udayavani | Oct 20, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com