ಯಾಂತ್ರಿಕತೆಯ ನಡುವೆಯೂ ಸಾಂಪ್ರದಾಯಿಕ ಭತ್ತದ ಕಟಾವು

ಕುಂದಾಪುರ: ಕೃಷಿ ಕೂಲಿಯಾಳುಗಳ ಅಭಾವದಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಕರಾವಳಿಯಲ್ಲಿಯೂ ಕೃಷಿಯಲ್ಲಿ ಯಾಂತ್ರಿಕತೆ ಬಳಕೆ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಿಂದ ತಮಿಳುನಾಡು ಮೂಲದ ಅಸಂಖ್ಯ ಭತ್ತದ ಕಟಾವು ಯಂತ್ರಗಳು ಕರಾವಳಿಯ ಭತ್ತದ ಬಯಲು ಗಳಲ್ಲಿ ಶರವೇಗದಲ್ಲಿ ಕಟಾವು ಕಾರ್ಯ ನಡೆಸಿಕೊಟ್ಟಿದ್ದವು. ಈ ಬಾರಿಯೂ ಯಂತ್ರಗಳು ಬಂದಿವೆ. 

ಆದರೆ ತೆಕ್ಕಟ್ಟೆ ಗ್ರಾಮದ ಕೊರವಡಿಯ ಕೃಷಿಕರು ಸಾಂಪ್ರದಾಯಿಕ ಭತ್ತದ ಕಟಾವು ಕಾರ್ಯದಲ್ಲಿ ನಿರತರಾಗಿರುವುದು ಶನಿವಾರ ಕಂಡು ಬಂತು. ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರವಡಿ ಪ್ರದೇಶದ ಕೃಷಿಕರು ಬೆಳೆದು ನಿಂತ ಪೈರು ಹಾನಿಗೀಡಾಗಬಹುದೆಂಬ ನೆಲೆಯಲ್ಲಿ ಭತ್ತದ ಕಟಾವಿಗೆ ಇಳಿದಿದ್ದಾರೆ. 

ಸಾಂಪ್ರದಾಯಿಕ ಕಟಾವು ಕಾರ್ಯವೈಖರಿ: ಇಲ್ಲಿನ ಸೀತಾರಾಮ ಹೆಬ್ಬಾರ್ ಮತ್ತು ನಾರಾಯಣ ಹೆಬ್ಬಾರ್ ಅವರ ಕೃಷಿ ಭೂಮಿಯಲ್ಲಿ ಸಂಪೂರ್ಣ ಸಾಂಪ್ರದಾಯಿಕ ಶೈಲಿಯ ಭತ್ತದ ಕಟಾವು ಕಾರ್ಯ ನಡೆಯಿತು. ಮಹಿಳೆಯರು ಮುಂಜಾನೆ ಬೇಗ ಗದ್ದೆಗಿಳಿದು ಭತ್ತದ ಕಟಾವು ಕಾರ್ಯ ಪೂರ್ಣಗೊಳಿಸಿದ ಬಳಿಕ ಗದ್ದೆಯಲ್ಲಿ ಒಂದಿಷ್ಟು ಹೊತ್ತು ಒಣಗಿಸಿ ನಂತರ ತಲೆ ಹೊರೆ ಮೂಲಕ ಮನೆಯಂಗಳಕ್ಕೆ ತರಲಾಯಿತು. 

ಭತ್ತದ ಹೊರೆಯ ಕಟ್ಟು ಬಿಡಿಸಿ ಅದನ್ನು ಸೂಡಿಯಾಗಿ ಮಾಡಲಾ ಯಿತು. ಬಳಿಕ ಕೃಷಿಕ ಮಹಿಳೆಯರು ಸಾಂಪ್ರದಾಯಿಕ ಹಡಿ ಮಂಚಕ್ಕೆ ಬಡಿಯುವ ಮೂಲಕ ಭತ್ತ ಬೇರ್ಪಡಿಸಿದರು. ಪುರುಷ ಕೃಷಿಕರು ಒಂದೆಡೆ ಭತ್ತ ಬೇರ್ಪಡಿಸಲ್ಪಟ್ಟ ಹುಲ್ಲನ್ನು ಜೋಡಿಸುವ ಕಾಯಕ ನಡೆಸಿದರು. ಇನ್ನೊಂದೆಡೆ ಮಹಿಳೆಯರು ಸಂಗ್ರಹಿತ ಭತ್ತವನ್ನು ಮನೆಯ ಕೋಣೆಗೆ ಸಾಗಿಸಿದರು. 

ಬಹು ವರ್ಷಗಳಿಂದ ನಡೆಯುತ್ತಿದ್ದ ಸಾಂಪ್ರದಾಯಿಕ ಕಟಾವು ಕಾರ್ಯ ಇತ್ತೀಚೆಗೆ ವಿರಳವಾಗಿದೆ. ಕೃಷಿಯಾಳುಗಳ ಕೊರತೆಯಿಂದಾಗಿ ಎಲ್ಲದ್ದಕ್ಕೂ ಯಂತ್ರವನ್ನೇ ಅವಲಂಬಿಸಬೇಕಾಗಿತ್ತು. 

*ಯಂತ್ರ ಬಳಕೆ ಸುಲಭವಾದರೂ ಹೈನುಗಾರಿಕೆಗೆ ಆಸರೆಯಾಗುವ ಹುಲ್ಲು ಉತ್ತಮ ಸ್ಥಿತಿಯಲ್ಲಿ ಸಿಗದು. ಈ ನೆಲೆಯಲ್ಲಿ ಬಹಳ ವರ್ಷಗಳಿಂದ ನಾವು ಸಾಂಪ್ರದಾಯಿಕ ಪದ್ಧತಿಯಲ್ಲಿಯೇ ಕಟಾವು ಕಾರ್ಯ ನಡೆಸಿ ಭತ್ತ ಮತ್ತು ಹುಲ್ಲು ಸಂಗ್ರಹಿಸುತ್ತಿದ್ದೇವೆ. ಇಷ್ಟರ ತನಕ ನಡೆದುಕೊಂಡು ಬಂದಿದೆ. ಮುಂದೆ ಗೊತ್ತಿಲ್ಲ. - ನಾರಾಯಣ ಹೆಬ್ಬಾರ್ ಕೃಷಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com