ಉಪ್ಪುಂದ: ಯೋಗದಿಂದ ಸ್ವಸ್ಥ ಮನಸ್ಸು, ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಉಪ್ಪುಂದ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಐತಾಳ್ ಅವರು ಹೇಳಿದರು.
ಉಪ್ಪುಂದದ ಶ್ರೀಗುರು ವಿವೇಕ ಯೋಗ ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ , ಬೈಂದೂರು ಕ್ಷೇತ್ರ ಶಿಕ್ಷಣಾದಿಕಾರಿ ಕಚೇರಿ ಆಶ್ರಯದಲ್ಲಿ ಉಪ್ಪುಂದದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಅಕ್ಟೋಬರ್ 2ರಂದು ಆರಂಭಗೊಂಡ ಮೂರು ದಿನಗಳ ಯೋಗ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸುವ ಯೋಗ ವಿದ್ಯಾರ್ಥಿಗಳಿಗಾಗಿ ನಡೆಯುವ ಶಿಬಿರವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಯೋಗ ಕಲೆಯಲ್ಲಿ ಪ್ರತಿಭೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ಲಭಿಸಿದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುವಂತಹ ಸಾಧನೆ ಮೂಡಿಬರಲು ಸಾಧ್ಯ ಎಂದರು.
ಮುಖ್ಯ ಅತಿಥಿ ಉಪ್ಪುಂದ ಮೂಡುಗಣಪತಿ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷ ಕೇಶವ ಪ್ರಭು, ಯೋಗ ತರಬೇತಿಯ ಸಂಪನ್ಮೂಲ ವ್ಯಕ್ತಿ ನರೇಂದ್ರ ಕಾಮತ್, ಬೈಂದೂರು ಬಿಆರ್ಪಿ ಸರ್ವೋತ್ತಮ ಭಟ್, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಯೋಗ ತರಬೇತುದಾರ ಗಣೇಶ್ ಪ್ರಭು, ಶ್ರೀಗುರು ವಿವೇಕ ಯೋಗ ಸಂಘದ ಸದಸ್ಯರಾದ ವೆಂಕಟೇಶ, ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಯೋಗಶಿಕ್ಷಕ ನಾರಾಯಣ ದೇವಾಡಿಗ ಅವರು ಸ್ವಾಗತಿಸಿದರು. ಬೈಂದೂರು ವಲಯ ಯೋಗ ಸಂಘಟಕ ಮಂಜುನಾಥ ಎಸ್. ಬಿಜೂರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಆರ್ಪಿ ಗಿರೀಶ್ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು. ಅಚ್ಯುತ ಬಿಲ್ಲವ ಅವರು ವಂದಿಸಿದರು.
0 comments:
Post a Comment