ಸಂಘಟನಾತ್ಮಕ ಶಕ್ತಿ ಸದ್ಬಳಕೆಯಿಂದ ಸ್ವಸ್ಥ ಸಮಾಜ: ಸೊರಕೆ

ಕೊಲ್ಲೂರು: ಸಮಾಜ ಸಂಘಟಿಸುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಸಮುದಾಯಗಳಿಂದ ಆಗುತ್ತಿದೆ. ಸಂಘಟನೆ ಶಕ್ತಿಯನ್ನು ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ದಕ್ಷಿಣ ಕನ್ನಡ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ, ಬೆಳ್ತಂಗಡಿ ಇದರ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಕುಂದಾಪುರ (ಜಡ್ಕಲ್‌) ವಲಯ ಮಟ್ಟದ ಫಲಾನುಭವಿಗಳ ಹಾಗೂ ಸಮುದಾಯ ಆಧಾರಿತ ಸಂಘಟನೆಗಳ ಬೃಹತ್‌ ಸಮಾವೇಶ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಅ. 15ರಂದು ಜಡ್ಕಲ್‌ನ ಸಂತ ಜಾರ್ಜ್‌ ಚರ್ಚ್‌ ಸಭಾಭವನದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಡಿ.ಕೆ.ಆರ್‌.ಡಿ.ಎಸ್‌.ನ ಕಾರ್ಯಸಾಧನೆ ಶ್ಲಾಘನೀಯ ಎಂದ ಅವರು, ಮುದೂರು, ಜಡ್ಕಲ್‌ ಪರಿಸರದ ಜನರ ಸಮಸ್ಯೆ ಬಗೆಹರಿಸುವಲ್ಲಿ ಶಾಸಕ ಗೋಪಾಲ ಪೂಜಾರಿ ಅವರೊಡನೆ ಸೇರಿ ಸಹಕರಿಸುವೆ ಎಂದರು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಡಿ.ಕೆ.ಆರ್‌.ಡಿ.ಎಸ್‌. ಅಧ್ಯಕ್ಷ ವಂದನೀಯ ಲಾರೆನ್ಸ್‌ ಮುಕ್ಕುಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ, ಮತ ಭೇಧವಿಲ್ಲದೇ ಪರಸ್ಪರ ಅರಿತು ಅನ್ಯೋನ್ಯವಾಗಿ ಜೀವಿಸಿದಲ್ಲಿ ಭಾತೃತ್ವದ ಸೆಳೆ ಹೆಚ್ಚುವುದು ಎಂದರು.

ಮುಖ್ಯ ಅತಿಥಿಗಳಾಗಿ ಜಿ. ಪಂ. ಸದಸ್ಯೆ ಸುಪ್ರಿತಾ ಡಿ. ಶೆಟ್ಟಿ, ತಾ. ಪಂ. ಸದಸ್ಯರಾದ ರಾಜು ಪೂಜಾರಿ, ರಮೇಶ್‌ ಗಾಣಿಗ ಕೊಲ್ಲೂರು, ಜಡ್ಕಲ್‌ ಗ್ರಾ. ಪಂ. ಅಧ್ಯಕ್ಷೆ ಗ್ರೇಸಿ ಜೋಸೆಫ್‌, ಡಿ.ಕೆ.ಆರ್‌.ಡಿ.ಎಸ್‌.ನ ನಿರ್ದೇಶಕರಾದ ಫಾ| ಜೋಸ್‌ ಆಯಾಂಕುಡಿ, ಫಾ| ವರ್ಗೀಸ್‌ ಪುದಿಯೆಡತ್‌, ಜಡ್ಕಲ್‌ ಜೀವನ್‌ಜ್ಯೋತಿ ಒಕ್ಕೂಟದ ಅಧ್ಯಕ್ಷೆ ಮಿನಿ ಜೇಕಬ್‌, ಬೈಂದೂರು ಆದಿತ್ಯ ತಾಲೂಕು ಒಕ್ಕೂಟದ ಅಧ್ಯಕ್ಷೆ ಸುಶೀಲಾ ರಾಮಚಂದ್ರ, ಬ್ರಹ್ಮಾವರ ರುಡ್‌ಸೆಟ್‌ ಸಂಸ್ಥೆ ಉಪನ್ಯಾಸಕ ಕರುಣಾಕರ ಮೊದಲಾದವರು ಉಪಸ್ಥಿತರಿದ್ದರು.

ಸಿಸಿಲಿ ಜಾನ್ಸ್‌ನ್‌ ಸ್ವಾಗತಿಸಿದರು. ಜಿ.ಜಿ. ಜೋಸ್‌ ಧನ್ಯವಾದವಿತ್ತರು. ಉದಯಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಜಡ್ಕಲ್‌, ಮುದೂರು ನಿವಾಸಿಗಳು ಸಚಿವರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ ಪರಿಹಾರ ಒದಗಿಸುವಂತೆ ಕೋರಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com