ಜಾದೂಗಾರರ ಮನೆಗೆ ಕಳ್ಳನತನಕ್ಕೆ ನುಗ್ಗಿ ಬರಿಗೈಯಲ್ಲಿ ವಾಪಾಸ್

ಉಡುಪಿ: ಇಲ್ಲಿನ ಜಾದೂಗಾರರೊಬ್ಬರ ಮನೆಯಲ್ಲೇ ಕೈ ಚಳಕ ತೋರಿದ ಕಳ್ಳನೊಬ್ಬ ಬರಿಗೈಯಲ್ಲಿ ತೆರಳುವ ಮೊದಲು ಮನೆಮಂದಿಗೆ ಬನಿಯಾನ್ ಗಿಫ್ಟ್ ಬಿಟ್ಟು ಹೋಗಿದ್ದಾನೆ! ಅಜ್ಜರಕಾಡಿನಲ್ಲಿ ರುವ ಗಿಲಿಗಿಲಿ ಮ್ಯಾಜಿಕ್‌ನ ಪ್ರೊ.ಶಂಕರ್ ಮನೆಮಂದಿ ಇತ್ತೀಚೆಗೆ ನಾಲ್ಕು ದಿನಗಳ ವರೆಗೆ ಪರ ಊರಿಗೆ ತೆರಳಿದ್ದ ಸಂದರ್ಭವನ್ನು ಕಳ್ಳ ಬಳಸಿಕೊಂಡರೂ ಏನೂ ಸಿಕ್ಕಿಲ್ಲ, ಒಯ್ದಿಲ್ಲ. 

ಕಳ್ಳ ಮನೆಯ ಕಿಟಕಿ ಸರಳು ಬಗ್ಗಿಸಿ ಒಳ ನುಗ್ಗಿದ್ದಾನೆ. ಆಭರಣದಂಗಡಿಯ ದೊಡ್ಡ ಪೆಟ್ಟಿಗೆ ಸಿಕ್ಕಾಗ ಖುಷಿಯಾದ ಕಳ್ಳ ಮಂಚದಲ್ಲಿ ಕೂತು ತೆರೆದು ನೋಡಿದರೆ ಅದರಲ್ಲಿದ್ದದ್ದೇನು ಗೊತ್ತಾ? 

ಮ್ಯಾಜಿಕ್ಕಿಗೆ ಬಳಸುವ ಇಸ್ಪೀಟ್ ಕಾರ್ಡ್, ಬೆಂಕಿ ಪೆಟ್ಟಿಗೆ, ಹಗ್ಗ, ರಿಂಗು. ಕಪಾಟು ತೆರೆದು ವಸ್ತ್ರವನ್ನೆಲ್ಲ ಎಳೆದು ಹಾಕಿದ ಕಳ್ಳ, 60 ರೂ. ನಗದನ್ನು ಕಣ್ಣೆತ್ತಿಯೂ ನೋಡಿಲ್ಲ. ಒಂದು ಗ್ರಾಂ ಚಿನ್ನದ 2 ಬಳೆ, ಸ್ಟೇಜ್‌ನಲ್ಲಿ ಯಕ್ಷ ಹೆಣ್ಮಕ್ಕಳು ಬಳಸುವ ಆಭರಣವನ್ನೂ ಡೋಂಟ್ ಕೇರ್. ಐದು ಬ್ರೀಫ್‌ಕೇಸ್‌ಗಳಿಗೆ ಸ್ಟಿಕ್ಕರ್ ಹಾಕಿ( ಆದಾಯ ತೆರಿಗೆ, ಆರ್‌ಟಿಸಿ ಸಹಿತ ದಾಖಲೆ)ಇಟ್ಟಿದ್ದನ್ನು ಓದಿ ಹಾಗೇ ಬಿಟ್ಟಿದ್ದಾನೆ (ಕಳ್ಳನೂ ಇಂಗ್ಲಿಷ್ ಬಲ್ಲ!) 

ಕೊನೆಗೆ ರಾಡ್ ಸುತ್ತಿ ತಂದಿದ್ದ ಬನಿಯಾನನ್ನೇ(44 ಸೈಝ್) ಮನೆಮಂದಿಗೆ ತನ್ನ ಕೊಡುಗೆಯಾಗಿ ಬಿಟ್ಟು ಹೋದ ಕಳ್ಳ ಹಿಂದಿನ ಬಾಗಿಲು ತೆರೆದು ಮುಚ್ಚಿ ಪರಾರಿಯಾಗಿದ್ದಾನೆ. ಮನೆಯಲ್ಲಿದ್ದ ಯಾವುದೇ ವಸ್ತುಗಳು ಕಳವಾಗದ ಹಿನ್ನೆಲೆಯಲ್ಲಿ ಠಾಣೆಗೆ ದೂರು ಕೊಟ್ಟಿಲ್ಲ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com