ತಂತ್ರಜ್ಞಾನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿ: ಡಾ.ಎಚ್‌.ಶಾಂತಾರಾಮ್

ಕುಂದಾಪುರ: ‘ವಿಜ್ಞಾನದ ಜೊತೆಯಲ್ಲಿ ಬೆಳೆಯು­ತ್ತಿರುವ ತಾಂತ್ರಿಕ ಜಗತ್ತಿನ ಅನೂಕೂಲತೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳ­ವಣಿಗೆಗೆ ಪೂರಕವಾಗಬೇಕು’ ಎಂದು ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್‌ನ ಆಡಳಿತಾಧಿಕಾರಿ ಹಾಗೂ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್‌.ಶಾಂತಾರಾಮ್ ಹೇಳಿದರು.
  ಕುಂದಾಪುರದ ಭಂಡಾರ್‌ಕಾರ್ಸ್‌ನ ರಂಗ ಅಧ್ಯಯನ ಕೇಂದ್ರದಲ್ಲಿ ಗುರುವಾರ ನಡೆದ ನಾಟಕೊತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದುಕೊಂಡಿರುವ ರಂಗ ಅಧ್ಯಯನ ಕೇಂದ್ರದಲ್ಲಿ ನಾಡಿನ ಹಲವು ಭಾಗದ ರಂಗಾಸಕ್ತರಿಗೆ ರಂಗ ತರಬೇತಿಯನ್ನು ನೀಡಿದೆ.  ನಾಟಕೋತ್ಸವಗಳನ್ನು ಮಾಡುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ರಂಗಾಸಕ್ತರಿಗೆ ರಂಗಾಭಿನಯದ ವಿವಿಧ ಆಯಾಮಗಳನ್ನು ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ. ರಂಗ ಆಧ್ಯಯನ ಕೇಂದ್ರದಲ್ಲಿ ನಾಟಕಾಭ್ಯಾಸಗಳ ಜೊತೆ ಕರಾವಳಿಯ ಪಾರಂಪರಿಕ ಕಲೆಗಳಾದ ಯಕ್ಷಗಾನ ಹಾಗೂ ತಾಳಮದ್ದಲೆಯಂತಹ ಕಲೆಗಳ ಬೆಳೆವಣಿಗೆಯ ಕುರಿತು ಆಸಕ್ತಿ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜೇಸಿಸ್ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ನಾರಾಯಣ ರಾವ್, ರಂಗಕರ್ಮಿ ಗುರುರಾಜ್ ಮಾರ್ಪಳ್ಳಿ, ಕಾಲೇಜಿನ ವಿಶ್ವಸ್ಥರಾದ ಕೆ.ದೇವದಾಸ ಕಾಮತ್‌, ಕೆ.ಶಾಂತಾರಾಮ ಪ್ರಭು ಹಾಗೂ ಸಂಚಾಲಕ ಪ್ರೊ.ವಸಂತ ಬನ್ನಾಡಿ ವೇದಿಕೆಯಲ್ಲಿದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರೊ.ವಸಂತ ಬನ್ನಾಡಿ ಅವರ ನಿರ್ದೇಶನದ  ’ಸಂಕ್ರಾಂತಿ’ ನಾಟಕ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com