ಪೇತ್ರಿ ಮಾಧವ ನಾಯ್ಕರಿಗೆ ಸಕ್ಕಟ್ಟು ಪ್ರಶಸ್ತಿ ಪ್ರದಾನ

ಬಸ್ರೂರು: ಯಕ್ಷಗಾನ ರಂಗದ ದಂತ ಕಥೆಯಾದ ಬಣ್ಣದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಪ್ರತಿಷ್ಠಾನ ನೀಡುವ ಪ್ರಶಸ್ತಿ ಈ ಬಾರಿ ಬಡಗುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಪೇತ್ರಿ ಮಾಧವ ನಾಯ್ಕರಿಗೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ಇಂದು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಹಿರಿಯ ಬಣ್ಣದ ವೇಷಧಾರಿ ಮಾಧವ ನಾಯ್ಕ ಅವರು ಮಾತನಾಡಿ ನನ್ನ ಗುರುಗಳಾದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಪ್ರಾತ:ಸ್ಮರಣೀಯರು. ನನ್ನ ಗುರುಗಳ ಹೆಸರಿನ ಪ್ರಶಸ್ತಿ ನನಗೆ ಬಂದಿರುವುದು ಸಂತೋಷದ ವಿಚಾರ. ಸಕ್ಕಟ್ಟು ಅವರೊಡನೆ ಹಲವು ವರ್ಷಗಳ ಕಾಲ ತಿರುಗಾಟ ಮಾಡಿದ ತೃಪ್ತಿ ನನಗಿದೆೆ. ಬೇರೆ ಯಾವುದೇ ಪ್ರಶಸ್ತಿಗಿಂತ ಸಕ್ಕಟ್ಟು ಪ್ರಶಸ್ತಿ ಬಂದಿರುವುದು ಗಮನಾರ್ಹ ಎಂದರು.

ಪ್ರಥಮದರ್ಜೆ ವಿದ್ಯುತ್‌ ಗುತ್ತಿಗೆದಾರ, ನಿಕಟಪೂರ್ವ ರೋಟರಿ ಅಧ್ಯಕ್ಷ ಕೆ. ರತ್ನಾಕರ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಗಣ್ಯರ ಉಪಸ್ಥಿತಿಯಲ್ಲಿ ಪೇತ್ರಿ ಮಾಧವ ನಾಯ್ಕ ಅವರನ್ನು ಸಮ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಅವರು ಮಾತನಾಡಿ ನಾಲ್ಕನೇ ವರ್ಷದಲ್ಲಿ ಸಕ್ಕಟ್ಟು ಪ್ರಶಸ್ತಿ ನೀಡುತ್ತಿರುವುದು ಹೆಚ್ಚು ಪ್ರಸ್ತುತವಾಗಿದೆ. ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಪ್ರತಿಷ್ಠಾನ ಸ್ತುತ್ಯಾರ್ಹ ಕಾರ್ಯ ನಿರ್ವಹಿಸುತ್ತಿದೆ. ಈ ಪರಂಪರೆ ಮುಂದುವರಿಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿಮರ್ಶಕ ಎಸ್‌.ವಿ ಉದಯ ಕುಮಾರ್‌ ಶೆಟ್ಟಿ , ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ , ಐರೊಡಿ ವೈಕುಂಠ ಹೆಬ್ಟಾರ್‌, ಕೊಲ್ಲುರು ಶ್ರೀ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್‌ ಪ್ರಕಾಶ್‌ ಶೆಟ್ಟಿ ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ, ಬಾಲಕೃಷ್ಣ ಶೆಟ್ಟಿ , ಸಕ್ಕಟ್ಟು ಮನೆತನದ ಹಿರಿಯ ಸದಸ್ಯ ಸಕ್ಕಟ್ಟು ಶ್ರೀನಿವಾಸಯ್ಯ , ಸದಾನಂದ ಪಾಟೀಲ, ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನ ಸೌಕೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದು ಶುಭಕೋರಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮತ್ತು ಸಕ್ಕಟ್ಟು ಮಂಜುನಾಥಯ್ಯ ದಂಪತಿಗಳನ್ನು ಅಭಿನಂದಿಸಲಾಯಿತು. ರಾಜಶೇಖರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸುಪ್ರೀತ ಕಾರ್ಯಕ್ರಮ ನಿರೂಪಿಸಿದರು. ಬಸ್ರೂರು ರಾಮಕೃಷ್ಣ ಪಾಟಾಳಿ ಸಮ್ಮಾನ ಪತ್ರ ವಾಚಿಸಿ ವಂದಿಸಿದರು. ವೇದಿಕೆಯಲ್ಲಿ ದಿ| ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಅವರ ಭಾವ ಚಿತ್ರಕ್ಕೆ ದೀಪ ಬೆಳಗಿಸಲಾಗಿತ್ತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com