ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಕ್ಕೆ ಚಿಂತನೆ: ಸಚಿವ ಅಭಯಚಂದ್ರ

ಬೈಂದೂರು: ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿರುವ ಬುಲ್‌ಟ್ರಾಲ್ ಮೀನುಗಾರಿಕೆಯಿಂದ ಭವಿಷ್ಯದಲ್ಲಿ ಮೀನು ಸಂತತಿ ನಾಶವಾಗುವ ಭೀತಿಯಿದ್ದು, ಅದನ್ನು ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರ ಜತೆ ಚರ್ಚಿಸಿ 15 ದಿನಗಳೊಳಗೆ ನಿಷೇಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. 

ಶಿರೂರು ಅಳ್ವೆಗದ್ದೆಯಲ್ಲಿ ಮೀನುಗಾರಿಕಾ ಇಲಾಖೆ ಹಾಗೂ ಬಂದರು ಒಳನಾಡು ಜಲ ಸಾರಿಗೆ ವತಿಯಿಂದ ಸುಮಾರು 980 ಲಕ್ಷ ರೂ. ವೆಚ್ಚದ ಕಿರು ಬಂದರು ಕಾಮಗಾರಿಗೆಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮತನಾಡಿದರು. 

ಈ ಕಿರುಬಂದರು ಯೋಜನೆಗೆ ಪ್ರಥಮ ಹಂತದಲ್ಲಿ 980 ಲಕ್ಷ ರೂ. ಬಿಡುಗಡೆಯಾಗಿದೆ, ಈ ಕಾಮಗಾರಿಗೆ ಅನುದಾನ ಕಡಿಮೆಯಾದರೆ ದ್ವಿತೀಯ ಹಂತದಲ್ಲಿ ಅನುದಾನ ಬಿಡುಗಡೆ ಮಡಲು ಪ್ರಯತ್ನಿಸಲಾಗುವುದು ಎಂದ ಅವರು, ಕೇಂದ್ರ ಸರಕಾರದ ನೆರವಿನಿಂದ ಗಂಗೊಳ್ಳಿ ಬಂದರು ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆಗಾಗಿ 102 ಕೋಟಿ ರೂ. ಅನುದಾನ ಮಂಜೂರಾಗಿದೆ ಹಾಗೂ ಕೊಡೇರಿ ಬಂದರು ಬ್ರೇಕ್ ವಾಟರ್ ವಿಸ್ತರಿಸುವ ನೆಲೆಯಲ್ಲಿ ಇನ್ನೂ 33 ಕೋಟಿ ರೂ. ಅನುದಾನ ಒದಗಿಸುವ ನಿಟ್ಟಿನಲ್ಲಿ ಅದು ಈಗಾಗಲೇ ಆರ್ಥಿಕ ಇಲಾಖೆಯಿಂದ ಮಂಜೂರುಗೊಂಡಿದ್ದು, ಕ್ಯಾಬಿನೆಟ್ ಅನುಮೋದನೆ ಬಳಿಕ ಹಣ ಬಿಡುಗಡೆಯಾಗಲಿದೆ ಅಲ್ಲದೇ ಅಳ್ವೆಗದೆಯಲ್ಲಿ 25 ಲಕ್ಷ ವೆಚ್ಚದ ಬಲೆ ಶೆಡ್ ನಿರ್ಮಾಣ ಮಾಡಲಾಗುವುದು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಜೀವದ ಹಂಗು ತೊರೆದು ಸಮುದ್ರದಲ್ಲಿ ದುಡಿಯುತ್ತಿರುವ ಮೀನುಗಾರರಿಗೆ ಇಂಬು ನೀಡುವ ಕೆಲಸಮಾಡುತ್ತಿದೆ ಎಂದರು. ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. 

ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ, ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ತಾ.ಪಂ.ಸದಸ್ಯರಾದ ಸಾವಿತ್ರಿ ನಾರಾಯಣ ಅಳ್ವೆಗದೆ, ರಾಜು ಪೂಜಾರಿ, ರಮೇಶ ಗಾಣಿಗ, ಗ್ರಾ.ಪಂ. ಅಧ್ಯಕ್ಷ ರಾಮ ಮೇಸ್ತ, ಮದನ ಕುಮಾರ, ಮಾಣಿಗೋಪಾಲ, ಗಣಪತಿ ಭಟ್ ಅಂಜನಾದೇವಿ, ಬಂದರು ಎಂಜಿನಿಯರ್ ರಾಥೋಡ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com