ಹಳ್ಳಿಹೊಳೆ: 1.45ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಂಗೆ ಶಂಕುಸ್ಥಾಪನೆ

ಸಿದ್ದಾಪುರ: ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ನೀರಾವರಿಗಾಗಿ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಕ್ಷೇತ್ರದ ಪ್ರತೀ ಗ್ರಾ. ಪಂ.ಗಳಿಗೆ ಭೇಟಿ ನೀಡಿ,ಸ್ಥಳೀಯ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ. ರೂಪಿಸಿದ ಯೋಜನೆಗಳನ್ನು ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಕ್ರಿಯಾಯೋಜನೆಯಲ್ಲಿ ಸೇರಿಸಲಾಗುತ್ತದೆ ಎಂದು ಬೆಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. 
        ಅವರು ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಾರಿ ಮಠ ಎಂಬಲ್ಲಿ ಚಕ್ರಾನದಿಗೆ ಸಣ್ಣ ನೀರಾವರಿ ಇಲಾಖೆಯಿಂದ 1.45ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಂ ಹಾಗೂ ಸುವರ್ಣ ಗ್ರಾಮ ಯೋಜನೆಯಲ್ಲಿ ಗ್ರಾ.ಪಂ. ಕಟ್ಟಡಕ್ಕೆ ಶಂಕುಸ್ಥಾಪನಾ ನೇರವೇರಿಸಿ ಮಾತನಾಡಿದರು. 
       ಬೆಳಗಾವಿ ಅಧಿವೇಶನ ಮುಗಿದ ಬಳಿಕ ಸಿದ್ದಾಪುರದಲ್ಲಿ ಸಭೆ ನಡೆಸುವ ಮೂಲಕ ಈ ಭಾಗಗಳ ರೈತರಿಗೆ ನಾನಾ ಸವಲತ್ತು ಹಾಗೂ ಅಡಕೆ ಕೊಳೆರೋಗದ ಚೆಕ್ ಅನ್ನು ವಿಸ್ತರಿಸಲಾಗುತ್ತದೆ. ಅಧಿವೇಶನದಲ್ಲಿ ಆಕ್ರಮ ಸಕ್ರಮ ಸಮಿತಿಯ ಬಗ್ಗೆ ಚರ್ಚೆ ನಡೆಸಿ, ರೈತರ ಕೃಷಿ ಭೂಮಿ ಮಂಜೂರು ಮಾಡಲಾಗುವುದು. ಗ್ರಾ. ಪಂ. ವ್ಯಾಪ್ತಿಗಳಲ್ಲಿ ಖಾಲಿ ಜಾಗ ಇದ್ದಲ್ಲಿ ಬಡವರಿಗಾಗಿ ಹೌಸ್ ಸೆಟ್ ಮಾಡಲು ಕೂಡಲೆ ಜಾಗ ಮಂಜೂರು ಮಾಡಲಾಗುತ್ತದೆ. ಮುಂದೆಯೂ ಜನರ ವಿಶ್ವಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಲಾಗುತ್ತದೆ ಎಂದರು. 
    ತಾ. ಪಂ. ಉಪಾಧ್ಯಕ್ಷೆ ಹೇಮಾ ಆರ್. ಪೂಜಾರಿ ಮಾತನಾಡಿ, ಕೊರಾರಿ ಮಠ ಎಂಬಲ್ಲಿ ಚಕ್ರಾನದಿಗೆ ನಿರ್ಮಾಣಗೊಳ್ಳುತ್ತಿರುವ ವೆಂಟೆಡ್ ಡ್ಯಾಂ ಹಿಂದಿನ ಬಿಜೆಪಿ ಸರಕಾರದಲ್ಲಿ ಶಾಸಕ ಕೆ. ಲಕ್ಷ್ಮೀನಾರಾಯಣ ಅವರ ಪ್ರಯತ್ನದಿಂದ ಮಂಜೂರಾಗಿರುವುದು. ಇಂದಿನ ಶಾಸಕರು ಶಂಕುಸ್ಥಾಪನೆ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಹಳ್ಳಿಹೊಳೆ ಗ್ರಾ. ಪಂ. ವ್ಯಾಪ್ತಿಗೆ ನಕ್ಸಲ್ ಪ್ಯಾಕೇಜ್ ಹಾಗೂ ಸುವರ್ಣಗ್ರಾಮ ಯೋಜನೆಯಲ್ಲಿ ಹಲವಾರು ಕೋಟಿ ಹಣ ಮಂಜೂರಾಗಿದೆ. ಜನಪ್ರತಿನಿಧಿಗಳಲ್ಲಿ ಅಭಿಪ್ರಾಯ ಭೇದಗಳು ಇದ್ದರೂ, ಅಭಿವೃದ್ಧಿಯಲ್ಲಿ ಒಂದೇ ರೀತಿಯ ಅಭಿಪ್ರಾಯಗಳು ಇರಬೇಕು ಎಂದು ಹೇಳಿದರು. 
      ಹಳ್ಳಿಹೊಳೆ ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾ. ಪಂ. ಉಪಾಧ್ಯಕ್ಷ ಚಂದ್ರಕಾಂತ ಶೆಟ್ಟಿ, ಸದಸ್ಯರಾದ ಬಾಬ್ಬಣ್ಣ ಕನ್ನಂತ, ಪ್ರೇಮಾ, ನಿರ್ಮಿತಿ ಕೇಂದ್ರದ ಅಭಿಯಂತರ ಗಣೇಶ್, ಗುತ್ತಿಗೆದಾರರಾದ ಕಮಲಕಿಶೋರ್ ಹೆಗ್ಡೆ ಹಾಗೂ ಚೋರಾಡಿ ಅಶೋಕ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದರು. 
    ಹಳ್ಳಿಹೊಳೆ ಗ್ರಾ. ಪಂ.ಗೆ ಶಾಸಕರಾಗಿ ಪ್ರಥಮ ಬಾರಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬೆಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾ. ಪಂ. ವತಿಯಿಂದ ಸನ್ಮಾನಿಸಲಾಯಿತು. 
      ಗ್ರಾ. ಪಂ. ಸದಸ್ಯ ಶಂಕರನಾರಾಯಣ ಚಾತ್ರ ಸ್ವಾಗತಿಸಿದರು. ಮಾನಂಜೆ ಸಿ.ಎ. ಬ್ಯಾಂಕಿನ ಅಧ್ಯಕ್ಷ ಎಸ್. ವಾಸುದೇವ ಯಡಿಯಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ. ಪಂ. ಸದಸ್ಯ ರಾಮ ನಾಯ್ಕ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com