ಕನಕದಾಸರ ಬದುಕು ಅನುಕರಣೀಯ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕ ಕನಕದಾಸರಾಗಿ ಪರಿವರ್ತನೆಗೊಂಡು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು. 16ನೇ ಶತಮಾನದಲ್ಲಿ ಅವರು ಕಂಡುಕೊಂಡಿದ್ದ ಈ ಸತ್ಯ 21ನೇ ಶತಮಾನಕ್ಕೂ ಪ್ರಸ್ತುತ. ಕನಕದಾಸರ ಚಿಂತನೆ ಅನುಷ್ಠಾನವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 
      ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕ ಸಮಾನತೆಯ ಪ್ರತೀಕ. ಅವರು ಬದುಕು ಅನುಕರಣೀಯ. ಕನಕನಿಗೆ ಒಲಿದ ಶ್ರೀಕಷ್ಣ ಎಂಬ ಪರಿಭಾಷೆ ದೇವರು ಎಲ್ಲರಿಗೂ ಒಂದೇ ಎಂಬ ಉಪದೇಶಕ್ಕೆ ಅನ್ವರ್ಥ. ಕನಕರು ಹಾಗೂ ನಾರಾಯಣಗುರು ನಮಗೆ ಆದರ್ಶರಾಗಬೇಕು ಎಂದು ಅವರು ತಿಳಿಸಿದರು. 
       ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕದಾಸರ ರಾಮಧಾನ್ಯ ಕತಿ ಇಡೀ ಮಾನವ ಕುಲಕ್ಕೆ ಮಾರ್ಗದರ್ಶಿ. ಶ್ರೀಮಂತಿಕೆಯ ಬದುಕು ಕಂಡುಕೊಂಡು ಸರ್ವಸ್ವ ತ್ಯಾಗ ಮಾಡಿ ದಾಸನಾದ ಕನಕ ಮಾನವ ಪ್ರೀತಿಗೆ ಸಲ್ಲುವ ಅಪ್ರತಿಮ ಸಾಧಕ ಎಂದರು. ಕೋಟ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವೈಸ್‌ಪ್ರಿನ್ಸಿಪಾಲ್ ರಾಜೇಂದ್ರ ನಾಯಕ್ ವಿಶೇಷ ಉಪನ್ಯಾಸ ನೀಡಿ, ಮಹಾತ್ಮರ ಹುಟ್ಟು ಯಾವಾಗಲೂ ವಿಶೇಷವಾಗಿರುತ್ತದೆ. ಕನಕದಾಸರ ಹುಟ್ಟು, ಬದುಕು ಕೂಡ ವಿಶೇಷವಾದುದು. ಸರಳತೆ, ಸಮಾನತೆ, ಮಾನವತೆಯ ಪರಿಪೂರ್ಣ ಸಾಕಾರಮೂರ್ತಿಯಾಗಿದ್ದ ಅವರು, ಎಲ್ಲ ಕಾಲಕ್ಕೂ ಸಲ್ಲುವ ಮಹಾತ್ಮ ಎಂದು ತಿಳಿಸಿದರು. 
      ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೇಯಾನ್, ಕುಂದಾಪುರ ಸಹಾಯಕ ಕಮಿಶನರ್ ಯೋಗೀಶ್ವರ, ಕುಂದಾಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ ಪೂಜಾರಿ ಉಪಸ್ಥಿತರಿದ್ದರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯಕ್ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆದೂರು ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com