ಪುಟ್ಟ ಮಗುವಿನ ನೋವಿಗೆ ಸ್ಪಂದಿಸಿದ ಯುವಕರ ತಂಡ

ಕುಂದಾಪುರ: ಬಾದಾಮಿಯಿಂದ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕರಾಗಿ ಕುಂದಾಪುರಕ್ಕೆ ಬಂದ ದಂಪತಿಯ ಎರಡು ವರ್ಷದ ಪುಟ್ಟ ಮಗುವಿನ ಯಾತನೆ ಆಕ್ರಂದನಕ್ಕೆ ಮನ ಮಿಡಿದ ಯುವಕರ ತಂಡ ಮಗುವಿಗೆ ಚಿಕಿತ್ಸೆ ಕೊಡಿಸಿ ನೋವಿನಿಂದ ಮುಕ್ತಗೊಳಿಸಿದ ಘಟನೆ ನಡೆದಿದೆ. 

ಬಾದಾಮಿಯ ಲಿಂಗಪ್ಪ ಮತ್ತು ರೇಖಾ ದಂಪತಿ ಕುಂದಾಪುರಕ್ಕೆ ಬಂದವರು. ಅವರ ಮಗು ವೆಷ್ಣವಿ(2)ಯ ಬಲಕಾಲು ಹುಟ್ಟಿನಿಂದಲೇ ವಕ್ರವಾಗಿತ್ತು. ಇದು ವೈಕಲ್ಯ ಎಂದು ತಿಳಿದು ಸಂತೈಸಿಕೊಂಡು ಬಂದಿದ್ದರು ಹೆತ್ತವರು. ಆದರೆ ಕೆಲದಿನಗಳಿಂದ ಮಗು ವಿಪರೀತ ಯಾತನೆಯಿಂದ ಬೊಬ್ಬಿಡುತ್ತಿತ್ತು. ಯಾವ ಔಷಧವೂ ನೋವಿಗೆ ಪರಿಹಾರ ನೀಡಲಿಲ್ಲ. ದೊಡ್ಡ ವೈದ್ಯರನ್ನು ಕಾಣುವ ಶಕ್ತಿ ಹೆತ್ತವರಲ್ಲಿ ಇರಲಿಲ್ಲ. 

ಈ ನಡುವೆ ದಂಪತಿ ತಮ್ಮ ಕಷ್ಟ ನೋವಿನ ಕಥೆಯನ್ನು ಪಕ್ಕದಲ್ಲೇ ಇರುವ ಕ್ಯಾಂಟೀನ್ ಮಾಲೀಕ ನಾರಾಯಣ ಎಂಬವರಲ್ಲಿ ಹೇಳಿಕೊಂಡಿದ್ದರು. ಅವರು ಏನಾದರೂ ಮಾಡೋಣ ಅಂತ ಧೈರ್ಯ ಹೇಳಿದರು. ತಾಲೂಕು ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ, ಸಮಾಜಸೇವಕ ಶಿವಕುಮಾರ್ ಮೆಂಡನ್ ಅವರಲ್ಲಿ ಈ ವಿಷಯ ತಿಳಿಸಿದಾಗ ತಕ್ಷಣ ಕಾರ್ಯಪ್ರವತ್ತರಾಗಿ ತಮ್ಮ ಬಳಗದೊಂದಿಗೆ ಸ್ಥಳಕ್ಕೆ ಬಂದರು. 

ಬಂದು ನೋಡಿದಾಗ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಕೂಡಲೇ ಕುಂದಾಪುರದ ವಿವೇಕ್ ಆಸ್ಪತ್ರೆಗೆ ದಾಖಲಿಸಿದರು. ವೆದ್ಯರು ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕೆಂಬ ಸಲಹೆ ನೀಡಿದರು. ಪೋಷಕರಲ್ಲಿ ಚಿಕ್ಕಾಸು ಇರಲಿಲ್ಲ. ಶಿವಕುಮಾರ ಮೆಂಡನ್ ತನ್ನ ಬಳಗದ ಚಂದ್ರ ಪೂಜಾರಿ, ಗಣೇಶ ಮೆಂಡನ್, ಗಿರೀಶ್ ಜಿ.ಕೆ., ಲಕ್ಷ್ಮಣ್ ಪೂಜಾರಿ, ಪ್ರಕಾಶ್ ಅವರ ಸಹಾಯದೊಂದಿಗೆ ಹಣ ಹೊಂದಿಸಿದರು. ಶಸ್ತ್ರಚಿಕಿತ್ಸೆ ಬಳಿಕ ಮಗು ನೋವಿನಿಂದ ಮುಕ್ತವಾಗಿದೆ. ಹೆತ್ತವರ ಮುಖದಲ್ಲಿ ಮಂದಹಾಸ ಮೂಡಿದೆ. ಶಸ್ತ್ರಚಿಕಿತ್ಸೆ, ಔಷಧ ಹಾಗೂ ಆಸ್ಪತ್ರೆಯ ಎಲ್ಲ ವೆಚ್ಚವನ್ನು ತಮ್ಮ ಕೆಯಿಂದಲೇ ಭರಿಸಿದ ಯುವಕರು ಮಗುವಿನ ನಗುಮುಖ ನೋಡಿ ಖುಷಿಪಟ್ಟರು. 

ರಿಯಾಯಿತಿ ದರದಲ್ಲಿ ಚಿಕಿತ್ಸೆ: ಈ ನಡುವೆ ಯುವಕರ ಸೇವಾ ಮನೋಭಾವ ಕಂಡ ವಿವೇಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿವೇಕ್ ಅವರು ಕಡಿಮೆ ಶುಲ್ಕ ಪಡೆದು ಶಸ್ತ್ರಕ್ರಿಯೆ ನಡೆಸಿದ್ದಾರೆ. ಮಗುವಿನ ಬಲಕಾಲು ಹುಟ್ಟುವಾಗಲೆ ವಕ್ರವಾಗಿತ್ತು. ಬೆಳವಣಿಗೆಯ ಸಂದರ್ಭ ಅದು ವಿಪರೀತ ಯಾತನೆ ನೀಡಿತ್ತು. ಆ ಯಾತನೆಗೆ ಈಗ ಮುಕ್ತಿ ದೊರಕಿದೆ. ಮಗು ಅರಾಮವಾಗಿದೆ ಎಂದಿದ್ದಾರೆ ಡಾ. ವಿವೇಕ್.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com