ಮನೆಗೆ ಹೊಕ್ಕ ಎರಡು ಮಾರಿಗಳಿಂದ ಆಧ್ಯಾತ್ಮ ಚಿಂತನೆಗಳು ಮರೆಯಾಗುತ್ತಿವೆ: ಶಿರೂರು ಶ್ರೀ

ಈಶ್ವರೀಯ ಸಂದೇಶ ಮತ್ತು ಆಧ್ಯಾತ್ಮ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು.
ಕುಂದಾಪುರ: ಕೆಲವು ದಶಕಗಳ ಹಿಂದೆ ಮನೆಗೆ ಹೊಕ್ಕ ಟಿವಿ ಹಾಗೂ ಮೊಬೈಲ್‍ಗಳೆಂಬ ಎರಡು ಮಾರಿಗಳಿಂದ ಸತ್ಯನಾಶವಾಗಿದೆ. ಆಧ್ಯಾತ್ಮ ಚಿಂತನೆಗಳು ಮರೆಯಾಗುತ್ತಿವೆ. ಮನುಷ್ಯ ಮನುಷ್ಯನಾಗಬೇಕಾದರೆ ಆಧ್ಯಾತ್ಮ ಹಾಗೂ ಭಗವಂತನ ಚಿಂತನೆ ಅತ್ಯಗತ್ಯ ಎಂದು ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಹೇಳಿದರು.
   ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಈಶ್ವರೀಯ ಸಂದೇಶ ಮತ್ತು ಆಧ್ಯಾತ್ಮ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಪತ್ರಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. 
       ಹಿಂದೆ ಸಂಧ್ಯಾಕಾಲದಲ್ಲಿ ದೇವರಿಗೆ ನಮಿಸಿ ತುಳಸಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಸೂರ್ಯೋದಯದ ಸಂದರ್ಭವೂ ದೇವರ ನಾಮಸ್ಮರಣೆ ಮಾಡಲಾಗುತ್ತಿತ್ತು. ಆದರೆ ಈಗೀಗ ಆಧ್ಯಾತ್ಮ ಚಿಂತನೆಗಳು ಮೂಲೆ ಸೇರುತ್ತಿದ್ದು ಪೋಷಕರೂ ಮಕ್ಕಳಿಗೆ ಈ ಬಗ್ಗೆ ಯಾವುದೇ ರೀತಿಯ ಮಾರ್ಗದರ್ಶನ ಮಾಡುತ್ತಿಲ್ಲ. ಆದರೆ ಕರಾವಳಿಯಲ್ಲಿ ಮೊಗವೀರ ಸಮಾಜ ಭಜನೆಗೆ ಮನ್ನಣೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಗಾನ ಪರಂಪರೆ ಆಧ್ಯಾತ್ಮ ಜ್ಞಾನ ಪ್ರಚಾರದ ಮಾಧ್ಯಮವಾಗಿದ್ದರೂ ಆಧ್ಯಾತ್ಮ ರಹಸ್ಯದಂತಹಾ ಪತ್ರಿಕೆ ಸಮಾಜಕ್ಕೆ ಅಗತ್ಯವಾಘಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ರಾಘು ವಿಠಲವಾಡಿ, ಗಣೇಶ್ ಬೀಜಾಡಿ ಹಾಗೂ ಹುಸೇನ್ ಹೈಕಾಡಿಯವನ್ನು ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
      ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಯು.ಎಸ್.ಕಲಾವತಿ ವಹಿಸಿದ್ದರು. ಡಾ.ಬಿ,ಕೆ. ಕನರಾಡಿ ವಾದಿರಾಜ್ ಭಟ್ ಈಶ್ವರೀಯ ಸಂದೇಶ ನೀಡಿದರು. ಆಧ್ಯಾತ್ಮ ಪತ್ರಿಕೆಯ ಸಂಪಾದಕ ಬಿ.ಕೆ.ಎಸ್. ಸತೀಶ್ ಕುಮಾರ್ ಹಾಗೂ ಮಮತಾ ಎಸ್. ನಾಯ್ಕ್, ಸುರೇಶ್ ಹಂಗ್ಳೂರು, ಕೋಣಿ ಸಂಜೀವ ಚಂದನ್, ಬಿ.ಕೆ.ಜನಾರ್ಧನ್ ಉಪಸ್ಥಿತರಿದ್ದರು. 
      ಸಮರ್ಥ ಮತ್ತು ಸಮೃದ್ಧಿ ಕೋಟೇಶ್ವರ ಶ್ರೀ ಕೃಷ್ಣ ನೃತ್ಯ ಮಾಡಿದರು. ಬಿ.ಕೆ.ಎಸ್. ಸತೀಶ್ ಕುಮಾರ್ ಸ್ವಾಗತಿಸಿದರು. ಗಿರೀಶ್ ಹೆಬ್ಬಾರ್ ವಂದಿಸಿದರು. ಶಿಲ್ಪಾ ಕೋಟೇಶ್ವರ ಹಾಗೂ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com