ಗಿರಿಜನ ಅಭಿವೃದ್ಧಿ ಯೋಜನೆಯಡಿ ಆರೋಗ್ಯ ಭಾಗ್ಯ

ಮರವಂತೆ: ಸರಕಾರದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಇದೀಗ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆ ಸಮುದಾಯದ ಸದಸ್ಯರ ಸಮಗ್ರ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಇನ್ನು ಮುಂದೆ ಅವರಿಗೆ ಎಲ್ಲ ವಿಧದ ವೈದ್ಯಕೀಯ ಸೌಲಭ್ಯಗಳು ಉಚಿತವಾಗಿ ದೊರೆಯಲಿವೆ. 
    ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವೈದ್ಯಾಧಿಕಾರಿ ಡಾ. ಗಿರೀಶ ಗೌಡರ ನೇತೃತ್ವದಲ್ಲಿ ಕೇಂದ್ರ ವ್ಯಾಪ್ತಿಯ ಕೊರಗ ಕುಟುಂಬಗಳ ಸದಸ್ಯರ ಆರೋಗ್ಯ ತಪಾಸಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯಿರಿ ಭೇಟಿ ನೀಡಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ ಕೂಡ ಕೆಲಕಾಲ ಹಾಜರಿದ್ದರು. 
    ಉಡುಪಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೊಜನಾ ಸಮನ್ವಯಾಧಿಕಾರಿ ಡಾ. ಉದಯ ಶೆಟ್ಟಿ ಸರಕಾರದ ಮಹತ್ವದ ಈ ಯೋಜನೆಯ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ 2518 ಕೊರಗ ಕುಟುಂಬಗಳ 11,300 ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಆರೋಗ್ಯ ಚೀಟಿ ನೀಡಲಾಗುವುದು. ಅವರಿಗೆ ಯಾವುದೇ ವಿಧದ ಅನಾರೋಗ್ಯ ಉಂಟಾದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶವಿರುತ್ತದೆ. ಅದು ಎಷ್ಟೇ ದೊಡ್ಡ ಮೊತ್ತವಾದರೂ ಅದನ್ನು ಇಲಾಖೆ ಭರಿಸುತ್ತದೆ. ಈಗ ಕೊರಗ ಕುಟುಂಬಗಳ ಸಮೀಕ್ಷೆ ನಡೆಸುತ್ತಿದ್ದು ಅದಾದ ಬಳಿಕ ಪ್ರತೀ ಕುಟುಂಬಕ್ಕೂ ಸಮಗ್ರ ಮಾಹಿತಿ ಇರುವ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಮುಂದೆ ಅzನ್ನು ಆನ್‍ಲೈನ್ ಮೂಲಕ ನಿರ್ವಹಿಸಲಾಗುವುದು ಎಂದು ಅವರು ವಿವರಿಸಿದರು. ಎಲ್ಲ ಗಿರಿಜನ ಕುಟುಂಬಗಳು ಇದರಲಾಭ ಪಡೆಯಲು ಮುಂದಾಗಬೇಕೆಂದು ಅವರು ವಿನಂತಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com