ಮರವಂತೆಯಲ್ಲಿ 'ಹಿರಿಯರೆಡೆಗೆ ಸಾಹಿತ್ಯದ ನಡಿಗೆ', ಎಸ್. ಜನಾರ್ದನ ಅವರಿಗೆ ಸನ್ಮಾನ

ಕುಂದಾಪುರ:  ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ, ಉಡುಪಿ ರೋಟರಿ ಕ್ಲಬ್ ಮತ್ತು ರೋಟರಿ ಜಿಲ್ಲೆ 3180ರ ವಲಯ 2ರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಕನ್ನಡ ರಾಜ್ಯೋತ್ಸವ ಮಾಸದ ಸಾಹಿತ್ಯಿಕ, ಸಾಂಸ್ಕøತಿಕ ಸರಣಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಮರವಂತೆಯ ನಿವೃತ್ತ ಉಪನ್ಯಾಸಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಾಧಕ ಎಸ್. ಜನಾರ್ದನ ಅವರ ಮನೆಯಲ್ಲಿ 'ಹಿರಿಯರೆಡೆಗೆ ಸಾಹಿತ್ಯದ ನಡಿಗೆ' ನಡೆಯಿತು. 
    ಪರಿಷತ್ತಿನ ಕುಂದಾಪುರ ಘಟಕದ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಜಿಲ್ಲಾ ಘಟಕ ಕಳೆದ ಒಂದೂವರೆ ವರ್ಷಾವಧಿಯಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಿದರು. ನಗರ ಮತ್ತು ಗ್ರಾಮಾಂತರದ ಶಿಕ್ಷಣ ಸಂಸ್ಥೆಗಳ, ಸಂಘಟನೆಗಳ ಆಶ್ರಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದ ನೂರಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ವಿಶೇಷ ಸಾಧನೆಗೈದ ಹಿರಿಯರೆಡೆಗೆ ತೆರಳಿ ಅವರ ಸಾಧನೆಗಳನ್ನು ಗುರುತಿಸುವ, ಅದಕ್ಕೆ ಪ್ರಚಾರ ನೀಡುವ ಕಾರ್ಯ ನಡೆದಿದೆ. ಮುಂದೆ ಅವರ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. 
     ಉಡುಪಿ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳಂತೆಯೇ ಅನ್ಯ ಕ್ಷೇತ್ರದ ಸಾಧಕರೂ ಮುಖ್ಯರಾಗುತ್ತಾರೆ. ಸಮಾಜಕ್ಕೆ ಅವರು ನೀಡಿದ ಕೊಡುಗೆಗಳಿಂದ ನಾಡಿನ ಜನರ ಬದುಕು ಶ್ರೀಮಂತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕ ನಡೆಸುತ್ತಿರುವ 'ಹಿರಿಯರೆಡೆಗೆ ಸಾಹಿತ್ಯದ ನಡಿಗೆ' ವನೂತನ ಮತ್ತು ಪ್ರಸ್ತುತ ಎಂದು ನುಡಿದರು. 
    ಜನಾರ್ದನ ಅವರನ್ನು ಶಾಲು ಹೊದೆಸಿ, ಹಾರ ತೊಡಿಸಿ, ಸನ್ಮಾನ ಪತ್ರ, ಸ್ಮರಣಿಕೆ, ಹೂಹಣ್ಣು ನೀಡಿ ಸನ್ಮಾನಿಸಲಾಯಿತು. ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಜನಾರ್ದನ ಅವರನ್ನು ಅಭಿನಂದಿಸಿದರು. ಆಕಾಶವಾಣಿ ಕಲಾವಿದ ಎಚ್. ಚಂದ್ರಶೇಖರ ಕೆದಿಲಾಯ ಮೊಗೇರಿ ಗೋಪಾಲಕೃಷ್ಣ ಅಡಿಗರ 'ಆಗು ನೀನು ಇಬ್ಬನಿ ನೆಲಸುವ ಹೂ...' ಕವನವನ್ನು ಹಾಡಿ ಇದು ಜನಾರ್ದನರ ಬದುಕಿಗೆ ಅನ್ವಯಿಸುತ್ತದೆ ಎಂದರು. ಜನಾರ್ದನ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ ತಮ್ಮ ಕೆಲಸಗಳಿಗೆ ನೆರವಾದವರನ್ನು ಸ್ಮರಿಸಿಕೊಂಡರು. 
   ಆರಂಭದಲ್ಲಿ ಜನಾರ್ದನರ ಮೊಮ್ಮಗ ಕೇದಾರ ನಾಡಗೀತೆ ಹಾಡಿದ. ಜನಾರ್ದನರ ಪತ್ನಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ ವಂದಿಸಿದರು. ಜನಾರ್ದನರು ಸ್ಥಾಪಿಸಿ, ಈಗ ಮೂರು ದಶಕಗಳನ್ನು ದಾಟಿ ಮುನ್ನಡೆಯುತ್ತಿರುವ ಸೇವಾ ಸಾಂಸ್ಕøತಿಕ ವೇದಿಕೆ 'ಸಾಧನಾ'ದ ಅಧ್ಯಕ್ಷ ಅಂತೋನಿ ಡಿ'ಸೋಜ ಮತ್ತು ಸದಸ್ಯರು, ಹಾಗೂ ಮರವಂತೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ  ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಸುಗುಣಾ ಕೆ. ಎ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ ಮತ್ತು ಸಿಬಂದಿ ಉಪಸ್ಥಿತರಿದ್ದರು. ಜತೀಂದ್ರ ಮರವಂತೆ ಮತ್ತು ಡಾ. ರೂಪಶ್ರೀ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com