ನ.30: ನೀರು-2013 ವಿದ್ಯಾರ್ಥಿ ಸಮಾವೇಶ; ನ.21 ಪರಿಸರ ಸ್ಪರ್ಧೆಗಳು

ಕುಂದಾಪುರ: ಫ್ಲೋರಾ ಎಂಡ್ ಫೋನಾ ಕ್ಲಬ್ ಕುಂದಾಪುರ, ಡಾ.ಎನ್.ಆರ್ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಕೋಟೇಶ್ವರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿವರ್ಷ ನಡೆಯುವ ಇಕೋ ಕ್ಲಬ್ ವಿದ್ಯಾರ್ಥಿಗಳ ಸಮಾವೇಶ ನೀರು -2013 ನವಂಬರ್ 30ರಂದು ಅಕ್ಷತಾ ಸಭಾಂಗಣದಲ್ಲಿ ಜರುಗಲಿದೆ.
       30 ನವೆಂಬರ್ 2013ರಂದು ಪೂರ್ವಾಹ್ನ 9.30 ರಿಂದ ನಡೆಯಲಿರುವ ಸಮಾವೇಶದಲ್ಲಿ ನೀರಿನ ಸಂರಕ್ಷಣೆ ವಿಷಯದ ಸುತ್ತ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಪರಿಸರ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ, 2013-14ನೇ ಸಾಲಿಗಾಗಿ ಆಯ್ಕೆಯಾದ ಅತ್ಯುತ್ತಮ ಇಕೋ ಕ್ಲಬ್‍ಗೆ ಡಾ.ಎನ್.ಆರ್. ಆಚಾರ್ಯ ಮೆಮೋರಿಯಲ್ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತಿದೆ.
     ಕುಂದಾಪುರ ತಾಲೂಕಿನ ಪ್ರತಿಯೊಂದು ಪ್ರೌಢಶಾಲೆ ಮತ್ತು ಆಯ್ದ ಪ್ರಾಥಮಿಕ ಶಾಲೆಗಳ ಇಕೋ ಕ್ಲಬ್‍ಗಳಿಂದ ತಲಾ ಐವರು ವಿದ್ಯಾರ್ಥಿಗಳು ಮತ್ತು ಒಬ್ಬರು ಇಕೋಕ್ಲಬ್ ಉಸ್ತುವಾರಿ ಶಿಕ್ಷಕರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗಿದೆ.
ಸಮಾವೇಶಕ್ಕೆ ಪೂರ್ವಭಾವಿಯಾಗಿ ನವೆಂಬರ್ 21 ರಂದು ಸರಕಾರಿ ಪ.ಪೂ. ಕಾಲೇಜು ಕುಂದಾಪುರ ಇಲ್ಲಿ ಬೆಳಿಗ್ಗೆ 10ರಿಂದ ಪರಿಸರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ನೀರು-2013 ಸಮಾವೇಶದಲ್ಲಿ ಬಹುಮಾನ ನೀಡಲಾಗುವುದು.

 ಪ್ರಬಂಧ ಸ್ಪರ್ಧೆ - ನೀರೆಂಬ ಜೀವದ್ರವ :
ಜೀವಗೋಳದಲ್ಲಿ ನೀರಿನ ಮಹತ್ವ, ನೀರಿನ ಲಭ್ಯತೆ ಮತ್ತು ಸಂರಕ್ಷಣೆಗಳ ಕುರಿತು ತಿಳುವಳಿಕೆ ಮೂಡಿಸುವಂತಹ ಮೂರು ಅತ್ಯುತ್ತಮ ಪ್ರಬಂಧಗಳನ್ನು ಆಯ್ಕೆ ಮಾಡಲಾಗುವುದು. ಸಮಯಾವಕಾಶ ಒಂದು ಗಂಟೆ. ಒಂದು ಶಾಲೆಯಿಂದ ಒಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ.

ಚಿತ್ರಕಲೆ ಸ್ಪರ್ಧೆ : ಸಮುದ್ರ, ನದಿ ಅಥವಾ ಜಲಪಾತ ದೃಶ್ಯಗಳು (ಯಾವುದಾದರೂ ಒಂದು ದೃಶ್ಯ) ಬಣ್ಣ, ಕಲ್ಪನೆ ಮತ್ತು ಕೌಶಲಗಳ ಮೂಲಕ ದೃಶ್ಯಗಳಿಗೆ ಜೀವತುಂಬಿದಂತಿರುವ ಮೂರು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಂ4 ಅಳತೆಯ ಡ್ರಾಯಿಂಗ್ ಕಾಗದ ನೀಡಲಾಗುವುದು. ಬಣ್ಣ, ಬ್ರಶ್ ಮತ್ತಿತರ ಚಿತ್ರಕಲೆಗೆ ಸಂಬಂಧಿಸಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಒಬ್ಬ ವಿದ್ಯಾರ್ಥಿ ಪ್ರಬಂಧ ಅಥವಾ ಚಿತ್ರಕಲೆ ಸ್ಪರ್ಧೆಗಳಲ್ಲಿ ಯಾವುದಾದರೂ ಒಂದು ಸ್ಪರ್ಧೆಗೆ ಭಾಗವಹಿಸಬಹುದು.
ನ.30ರ ನೀರು-2013 ಸಮಾವೇಶದಂದು ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆಯುವ ಸ್ಪರ್ಧೆಗಳು ಬೆಳಿಗ್ಗೆ 9.30ರಿಂದ ಆರಂಭಗೊಳ್ಳಲಿದ್ದು, ಪರಿಸರ ರಸಪಶ್ನೆ ಸ್ಪರ್ಧೆಯಲ್ಲಿ ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೂ ಭಾಗವಹಿಸುವ ಅವಕಾಶವಿದೆ. ಮಧ್ಯಾಹ್ನ 2 ರಿಂದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸ್ಕಿಟ್‍ಗಳಿಗೆ ಅವಕಾಶವಿದ್ದು, ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವಿದೆ. ಸ್ಕಿಟ್ ಅವಧಿ ಕೇವಲ 3 ನಿಮಿಷಗಳಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮುಂಚಿತವಾಗಿ ಹೆಸರನ್ನು ನೊಂದಾಯಿಸಿ ಕೊಳ್ಳಬೇಕಿದೆ.

ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿಗೆ ಆಹ್ವಾನ :
ತಾಲೂಕಿನ ಒಂದು ಇಕೋಕ್ಲಬ್ ಸಮಾವೇಶದಂದು ಡಾ.ಎನ್.ಆರ್.. ಆಚಾರ್ಯ ಮೆಮೋರಿಯಲ್ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಪಡೆಯಲಿದೆ. 2013-14ನೇ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಚಿತ್ರ ಸಹಿತ ವರದಿಯನ್ನು ದಿನಾಂಕವಾರು ಜೋಡಿಸಿ ಸ್ಕ್ರಾಪ್ ಬುಕ್ ರೂಪದಲ್ಲಿ ನವಂಬರ್ 15ರೊಳಗೆ ಕಳುಹಿಸುವ ಇಕೋಕ್ಲಬ್‍ಗಳನ್ನು ಅತ್ಯುತ್ತಮ ಇಕೋಕ್ಲಬ್ ಸ್ಪರ್ಧೆಗೆ ಪರಿಗಣಿಸಲಾಗುವುದು. ಸ್ಕ್ರಾಪ್ ಬುಕ್ ಕಳುಹಿಸಬೇಕಾದ ವಿಳಾಸ ಡಾ.ಎಚ್.ಎಸ್ ಮಲ್ಲಿ, ಯಡ್ತರೆ ಆಸ್ಪತ್ರೆ, ಡಾ ಸಲೀಂ ಅಲಿ ರಸ್ತೆ, ಕುಂದಾಪುರ. ಹೆಚ್ಚಿನ ಮಾಹಿತಿಗಾಗಿ ಡಾ.ಎಚ್.ಎಸ್.ಮಲ್ಲಿ - 0825423604, ಮೋಹನ ಆಚಾರ್ಯ - 948027028, ಉದಯ ಗಾಂವಕಾರ - 9481509699 ನ್ನು ಸಂಪರ್ಕಿಸಬಹುದಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com