ಸಾರ್ವಜನಿಕ ಪ್ರತಿಭಟನೆ: ಹಂದಿ ಸಾಕಣೆ ಕೇಂದ್ರ ತೆರವು

ಬೈಂದೂರು: ಉಪ್ಪ್ಪುಂದ ಗ್ರಾಮದ ಜನತಾ ಕಾಲೊನಿಯ ಜನನಿಬಿಡ ಪ್ರದೇಶದಲ್ಲಿ ಫಿಲೋಮಿನಾ ರೋಡ್ರಿಗಸ್ ಮತ್ತು ಥಾಮಸ್ ರೋಡ್ರಿಗಸ್ ಎಂಬವರು ನಡೆಸುತ್ತಿರುವ ಹಂದಿ ಸಾಕಣೆ ಕೇಂದ್ರವನ್ನು ಸಾರ್ವಜನಿಕರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಪಂಚಾಯಿತಿ ತೆರವುಗೊಳಿಸಿದೆ. 

ಪರಿಸರದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದ ಈ ಕೇಂದ್ರದ ತೆರವಿಗೆ ಒತ್ತಾಯಿಸಿ ಜನರು ಬುಧವಾರ ಬೈಂದೂರು ವಿಶೇಷ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸುಮಾರು 500ರಷ್ಟು ಮಂದಿ ಪಾಲ್ಗೊಂಡಿದ್ದರು. 

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋಹನ್‌ಚಂದ್ರ ಉಪ್ಪುಂದ, ಜನತಾ ಕಾಲೊನಿಯ ಜನನಿಬಿಡ ಪ್ರದೇಶದ ಹೌಸ್ ಸೈಟ್‌ನಲ್ಲಿ ಅಕ್ರಮವಾಗಿ ಹಂದಿ ಸಾಕಣಿಕೆ ನಡೆಸುತ್ತಿರುವುದರಿಂದ ತುಂಬ ತೊಂದರೆಯಾಗುತ್ತಿದೆ. ನಿತ್ಯ ಗಬ್ಬುವಾಸನೆಯಲ್ಲೇ ಬದುಕಬೇಕಾಗಿದೆ. ಕೇಂದ್ರಕ್ಕೆ ಸಮೀಪದಲ್ಲಿರುವ ಅಂಗನವಾಡಿ ಮಕ್ಕಳಿಗೆ ತೀವ್ರ ಹಿಂಸೆಯಾಗಿದೆ. ಅಲ್ಲದೇ ಈ ಹಂದಿಗಳ ಮಲಮೂತ್ರಗಳನ್ನು ರಸ್ತೆಗೆ ಎಸೆಯುವುದರಿಂದ ಕೆಟ್ಟ ವಾಸನೆ ಬರುತ್ತಿದ್ದು ಈ ಮಾರ್ಗದಲ್ಲಿನ ಸಂಚಾರ ನರಕಸದಶವಾಗಿದೆ. ರಾತ್ರಿ ಈ ಹಂದಿಗಳ ಕೂಗಿನಿಂದ ನಿದ್ದೆ ಇಲ್ಲ. ಹೀಗಾಗಿ ಜನನಿಬಿಡ ಪ್ರದೇಶದಲ್ಲಿರುವ ಹಂದಿ ಕೇಂದ್ರವನ್ನು ತೆರವುಗೊಳಿಸಬೇಕೆಂದು ಈಗಾಗಲೇ ತಹಸೀಲ್ದಾರ್, ಜಿಲ್ಲಾಕಾರಿ, ಆರೋಗ್ಯ, ಪೋಲೀಸ್ ಇಲಾಖೆ, ವೀಶೇಷ ತಹಸೀಲ್ದಾರರು ಹಾಗೂ ಸ್ಥಳೀಯ ಗ್ರಾ.ಪಂ.ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಬಾರಿ ತಕ್ಷಣ ಇದನ್ನು ತೆರವುಗೊಳಿಸಲೇಬೇಕು ಎಂದು ಆಗ್ರಹಿಸಿದರು. 

ವಿಶೇಷ ತಹಸೀಲ್ದಾರ್ ತಿಪ್ಪೆಸ್ವಾಮಿ ಹಂದಿ ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತಾಲೂಕು ಮತ್ತು ಜಿಲ್ಲಾಡಳಿತದ ಜತೆ ಚರ್ಚಿಸಿ ಕೇಂದ್ರದ ತೆರವಿಗೆ ಸೂಚಿಸಿದರು. ಕೂಡಲೇ ಗ್ರಾಪಂ ಆಡಳಿತ ಎಲ್ಲ ಹಂದಿಗಳನ್ನು ವಶಕ್ಕೆ ತೆಗೆದುಕೊಂಡಿತು. 8 ದಿನಗಳ ಕಾಲ ಅವಕಾಶ ನೀಡಬೇಕೆಂಬ ಥಾಮಸ್ ರಾಡ್ರಿಗಸ್ ಮನವಿಯನ್ನು ತಿರಸ್ಕರಿಸಲಾಯಿತು. ಎಸ್‌ಐ ಸುನಿಲ್ ಕುಮಾರ್ ಉಪಸ್ಥಿತರಿದ್ದರು. 

ಕೇಸು ದಾಖಲು: ಈ ನಡುವೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ ಥಾಮಸ್ ರಾಡ್ರಿಗಸ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com