ಸರಕಾರದಿಂದ ಕಾರ್ಮಿಕರ ಕಡೆಗಣನೆ: ಬಾಲಕಷ್ಣ ಶೆಟ್ಟಿ

ಕುಂದಾಪುರ: ರಾಜ್ಯದಲ್ಲಿ 20ಲಕ್ಷ ಕಟ್ಟಡ ಕಾರ್ಮಿಕರಿದ್ದರೂ ನೊಂದಾಯಿತ ಕಾರ್ಮಿಕರ ಸಂಖ್ಯೆ 2ಲಕ್ಷ. ಕಾರ್ಮಿಕರ ಬೆವರ ಹನಿಯಿಂದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 2066ಕೋಟಿ ರೂ. ಹಣವಿದೆ. ಆದರೆ ಸರಕಾರ ಕಾರ್ಮಿಕರಿಗೆ ನೀಡುತ್ತಿರುವುದು 14ಕೋಟಿ ರೂ. ಮಾತ್ರ. ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ಅನ್ಯ ಉದ್ದೇಶಗಳಿಗೆ ಸರಕಾರ ಬಳಸುವ ಮೂಲಕ ಕಾರ್ಮಿಕರನ್ನು ಕಡೆಗಣಿಸಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಬಾಲಕಷ್ಣ ಶೆಟ್ಟಿ ಆರೋಪಿಸಿದರು. 

ಇಲ್ಲಿನ ಹೆಂಚು ಕಾರ್ಮಿಕರ ಭವನದಲ್ಲಿ ಜರುಗಿದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. 

ಕಾರ್ಮಿಕ ಕಲ್ಯಾಣ ಮಂಡಳಿಯ 800ಕೋಟಿ ರೂ.ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲು ಸರಕಾರ ಯೋಚಿಸಿದೆ. ಇದು ಕಾರ್ಮಿಕರಿಗೆ ಬಗೆದ ದ್ರೋಹವಾಗಿದೆ. ಕಾರ್ಮಿಕರನ್ನು ಪ್ರತಿನಿಧಿಸುವ ನಾಯಕ ಶಾಸನ ಸಭೆಯಲ್ಲಿ ಇಲ್ಲದಿರುವುದರಿಂದ ಕಾರ್ಮಿಕರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು. 

ಇಡೀ ರಾಜ್ಯಕ್ಕೆ ಹೋಲಿಸಿದರೆ ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆ ಬಲಿಷ್ಠವಾಗಿದೆ. ಸಂಘಟನೆಯ ಬಲವರ್ಧನೆ ಪ್ರಖರವಾಗಬೇಕಾದರೆ ಸದಸ್ಯರು ಬೇಡಿಕೆ ಈಡೇರಿಕೆಯ ಜತೆಯಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ಈ ತನಕ ನಡೆದ ಹೋರಾಟಕ್ಕೆ ಕಾರ್ಮಿಕ ಸಚಿವರೇ ಶಹಬ್ಬಾಸ್‌ಗಿರಿ ನೀಡಿರುವುದು ಹೋರಾಟದ ಹಾದಿಗೆ ಸಂದ ಗೌರವವಾಗಿದೆ ಎಂದು ಅವರು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘಟನೆಯ ಅಧ್ಯಕ್ಷ ಯು.ದಾಸ ಭಂಡಾರಿ ಮಾತನಾಡಿ ಕಾರ್ಮಿಕರು ಬೇಡಿಕೆ ಈಡೇರಿಕೆಗೆ ನಡೆಸುವ ಹೋರಾಟದೊಂದಿಗೆ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ಕರಾವಳಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಸೌಜನ್ಯ ಕೊಲೆ ಪ್ರಕರಣದ ಹೋರಾಟ, ಪಂಕ್ತಿಭೇದ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯೆತ್ತಬೇಕಾಗಿದೆ ಎಂದರು. 

ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಉಪಾಧ್ಯಕ್ಷರಾದ ರಾಜೀವ ಪಡುಕೋಣೆ, ಶ್ರೀನಿವಾಸ ಪೂಜಾರಿ, ವೆಂಕಟೇಶ್ ಹೊಸಂಗಡಿ, ಕಾರ್ಯದರ್ಶಿಗಳಾದ ವೆಂಕಟೇಶ್ ಕೋಣಿ, ಸಂತೋಷ ಹೆಮ್ಮಾಡಿ, ಚಂದ್ರ ಅಂಪಾರು, ವಿಜೇಂದ್ರ ಕೋಣಿ, ಸುಬ್ರಹ್ಮಣ್ಯ ಆಚಾರ್, ಕೋಶಾಧಿಕಾರಿ ಜಗದೀಶ್ ಆಚಾರ್ ಉಪಸ್ಥಿತರಿದ್ದರು. ಗಣೇಶ್ ತೊಂಡೆಮಕ್ಕಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com