ಮೋದಿ ಸೋಲಿಸಿ, ಭಾರತ ಗೆಲ್ಲಿಸಿ: ಉಡುಪಿಯಲ್ಲಿ ಪ್ರಚಾರ ಸಭೆ

ಉಡುಪಿ: ಬೆಂಗಳೂರಿನಲ್ಲಿ ನ. 17ರಂದು ನಡೆಯುವ ಮೋದಿ ಗೆಲ್ಲಿಸಿ, ಭಾರತ ಗೆಲ್ಲಿಸಿ ಕಾರ್ಯಕ್ರಮದ ವಿರುದ್ಧ ಉಡುಪಿಯಲ್ಲಿ ಶುಕ್ರವಾರ ಮೋದಿ ಸೋಲಿಸಿ, ಭಾರತ ಗೆಲ್ಲಿಸಿ ಸಾರ್ವಜನಿಕ ಪ್ರಚಾರ ಸಭೆ ನಡೆಯಿತು. 

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕ ಮತ್ತು ಸಹಭಾಗಿ ಸಂಘಟನೆಗಳ ವತಿಯಿಂದ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನ ಗಾಂಧಿ ಪ್ರತಿಮೆ ಎದುರು ಮೋದಿ ವಿರುದ್ಧ ಫಲಕ ಹಿಡಿದು, ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ನರೇಂದ್ರ ಮೋದಿ, ಸಂಘ ಪರಿವಾರ ಹಾಗೂ ಬಿಜೆಪಿಗೆ 16 ಪ್ರಶ್ನೆಗಳನ್ನು ಮುಂದಿಟ್ಟರು. 

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಫ್ಯಾಸಿಸ್ಟ್ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಜತೆ ಕೈ ಜೋಡಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಿಮೋಟ್ ಕಂಟ್ರೋಲ್ ತಾಳಕ್ಕೆ ತಕ್ಕಂತೆ ಕುಣಿಯುವ ರೋಬೋಟ್ ಆಗಿದ್ದಾರೆ ಎಂದು ಪ್ರೊ. ಹಯವದನ ಉಪಾಧ್ಯ ಮೂಡುಸಗ್ರಿ ಮತ್ತು ಪ್ರೊ. ಕೆ. ಫಣಿರಾಜ್ ಆರೋಪಿಸಿದರು. 

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ. ಪಿ. ಮೊಯ್ದಿನಬ್ಬ ಮಾತನಾಡಿ, ರಾಷ್ಟ್ರವನ್ನು ಪ್ರೀತಿಸುವ ಜಾತ್ಯತೀತರ ಹೊರತು ಧರ್ಮಗಳ ನಡುವೆ ಕಂದಕ, ಭೀತಿಯ ವಾತಾವರಣ ಸೃಷ್ಟಿಸುವವರು ಈ ದೇಶವನ್ನಾಳಲು ನಾಲಾಯಕ್. ಅಭಿವೃದ್ಧಿಯಲ್ಲಿ ಗುಜರಾತ್ 13ನೇ ಸ್ಥಾನಕ್ಕೆ ಕುಸಿದಿದೆ ಎಂದರು. 

ಕೋಮು ಸೌಹಾರ್ದ ವೇದಿಕೆ ಜಿಲ್ಲಾ ಸಂಚಾಲಕ ಜಿ. ರಾಜಶೇಖರ್ ಮಾತನಾಡಿ, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ಪ್ರಜೆಗಳು ಏನನ್ನೂ ಆಡದಂತೆ, ನೋಡದಂತೆ, ಕೇಳದಂತೆ ಮಾಡುವ ಪರಿಸ್ಥಿತಿ ಬರಲಿದೆ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಯನ್ ಮಲ್ಪೆ ಮಾತನಾಡಿದರು. ಚಾರ್ಲ್ಸ್ ಅಂಬ್ಲರ್, ಸುಂದರಿ ಪುತ್ತೂರು, ನಿಸಾರ್ ಅಹ್ಮದ್, ರೆಹಮಾನ್ ಮಲ್ಪೆ, ಅನ್ವರ್ ಅಲಿ, ಗಣೇಶ್ ನೆರ್ಗಿ, ಹುಸೇನ್ ಕೋಡಿಬೆಂಗ್ರೆ, ಬಿ. ಎ. ಸಂವರ್ತ ಉಪಸ್ಥಿತರಿದ್ದರು. 

ಅಪೌಷ್ಟಿಕತೆಯ ಸಾವಿನಲ್ಲಿ ಗುಜರಾತ್ ನಂ. 1: ಗುಜರಾತ್ ಅಭಿವೃದ್ಧಿಯಲ್ಲಿ ದೇಶಕ್ಕೇ ನಂ. 1 ಎಂದು ಬೊಗಳೆ ಬಿಡಲಾಗುತ್ತಿದೆ. ಆದರೆ ಶೈಕ್ಷಣಿಕ ಪ್ರಗತಿ, ಶೌಚಾಲಯ ನಿರ್ಮಾಣದಲ್ಲಿ 10ನೇ ಸ್ಥಾನ ಹಾಗೂ ಉದ್ಯೋಗ ಹೆಚ್ಚಳದಲ್ಲಿ (ದಶಕದಲ್ಲಿ) ಗುಜರಾತ್ ಶೂನ್ಯ ಪ್ರಗತಿ ಸಾಧಿಸಿದೆ ಎಂದು ರೆ. ಫಾ. ವಿಲಿಯಂ ಮಾರ್ಟಿಸ್ ಹೇಳಿದರು. ಗಂಡು: ಹೆಣ್ಣಿನ ಅನುಪಾತದಲ್ಲಿ 21ನೇ ಸ್ಥಾನ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 12ನೇ ಸ್ಥಾನ ಹಾಗೂ ಅಪೌಷ್ಟಿಕತೆಯಿಂದ ಮಕ್ಕಳ ಸಾವಿನಲ್ಲಿ ಗುಜರಾತ್ ರಾಜ್ಯಕ್ಕೆ ದೇಶದಲ್ಲಿ ಮೊದಲನೇ ಸ್ಥಾನ ದಕ್ಕಿದೆ ಎಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com