20ರಿಂದ ಅಂಗನವಾಡಿ 1.30ಕ್ಕೇ ಬಂದ್

ಉಡುಪಿ: ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿರುವ ಅಂಗನವಾಡಿ ಕೇಂದ್ರಗಳ ಕೆಲಸ ಅವಧಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ, ವಿವಿಧ ಸಂಘಟನೆಗಳ ವತಿಯಿಂದ 19ರಂದು ನಡೆಯುವ 'ವಿಧಾನ ಸೌಧ ಚಲೋ' ಕಾರ್ಯಕ್ರಮಕ್ಕೆ ಉಡುಪಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಸುಮಾರು 2 ವರ್ಷಗಳಿಂದ ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿ ಹೆಚ್ಚಿಸಲಾಗಿದೆ. ಇದರಿಂದ ಚಿಕ್ಕಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಮಕ್ಕಳು ತಾಯಂದಿರ ಪ್ರೀತಿ-ಪೋಷಣೆಯಿಂದ ವಂಚಿತರಾಗುತ್ತಾರೆ ಎಂದು ಅನೇಕ ತಜ್ಞರ, ಸಂಸ್ಥೆಗಳ ಅಧ್ಯಯನ ಹೇಳಿದೆ.  
ಆದುದರಿಂದ ಮಕ್ಕಳ ಹಿತದೃಷ್ಟಿಯಿಂದ ಮೊದಲಿದ್ದಂತೆ ಪೂರ್ವಾಹ್ನ 9.30ರಿಂದ ಅಪರಾಹ್ನ 1.30ರ ತನಕ ಮಾತ್ರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ಆದೇಶ ಮಾಡಬೇಕೆಂದೂ, ಇನ್ನಿತರ ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಆಯೋಜಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮಹಾಮಂಡಲ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ಸಂಘ, ಅಂಗನವಾಡಿ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತ ಸಂಘರ್ಷ ಸಮಿತಿಯಿಂದ 'ವಿಧಾನಸೌಧ ಚಲೋ' ನಡೆಯಲಿದೆ.
ಅಂದಿನ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಭಾನುವಾರ ಜರುಗಿದ ಉಡುಪಿ ತಾಲೂಕು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ಸಂಘದ ಅಧ್ಯಕ್ಷೆ ಯಮುನಾ ಆರ್. ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ನ.20ರಿಂದ ಯಾವ ಕಾರಣಕ್ಕೂ ಅಪರಾಹ್ನ 1.30ರ ನಂತರ ಕೇಂದ್ರ ಕಾರ್ಯನಿರ್ವಹಿಸಲೇಬಾರದು ಎಂದು ಸರ್ವಾನುಮತದ ನಿರ್ಣಯ ಮಾಡಲಾಯಿತು.
ನ.7ರಂದು ಬೆಂಗಳೂರಿನಲ್ಲಿ ಜರುಗಿದ ರಾಜ್ಯದ, ಜಿಲ್ಲೆ ತಾಲೂಕು ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ ಯಮುನಾ ಆರ್. ಕುಂದರ್, ಗೌರವ ಸಲಹೆಗಾರ ಎಸ್. ಎಸ್. ತೋನ್ಸೆ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕೋಟ ವಲಯದ ಕಾರ್ಯಕರ್ತೆ ಮರಿಯ, ಬ್ರಹ್ಮವಾರ ವಲಯದ ಹರಿಣಿ ಮಾತಾಡಿದರು. ಕಾರ್ಯದರ್ಶಿ ವೇದಾವತಿ ಸ್ವಾಗತಿಸಿದರು. ಖಜಾಂಚಿ ಬೇಬಿ ಶೆಟ್ಟಿ ವಂದಿಸಿದರು.  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com