ನಮೋ ಬ್ರಿಗೇಡ್ ಅತಿರೇಕದ ಪರಿಕಲ್ಪನೆ: ಪ್ರಸನ್ನ

ಉಡುಪಿ: ‘ಸಮಾಜದ ಈಗಿನ ಹಿಂಸೆ ನಿವಾರಣೆಗೆ ಗಾಂಧೀಜಿ, ಟಾಲ್‌ಸ್ಟಾಯ್‌ ಅವರ ವಿಕೇಂದ್ರೀ­ಕರಣ ವ್ಯವಸ್ಥೆಯನ್ನು ಜೀವನದಲ್ಲಿ ಅಳವಡಿಸಿ­ಕೊಳ್ಳಬೇಕು. ವೈಯಕ್ತಿಕ ಬದುಕಿನಲ್ಲಿ ಯಂತ್ರ ನಾಗರಿಕತೆಯನ್ನು ನಿಧಾನವಾಗಿ ಕಳಚಲು ಪ್ರಯತ್ನಿಸಬೇಕು’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.

ಉಡುಪಿಯ ರಥಬೀದಿ ಗೆಳೆಯರು ಸಂಘಟನೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ರಂಗ ನಿರ್ದೇಶಕ ಕೆ.ಜಿ.ನಾರಾಯಣ ನೆನಪಿನ ಚಿಂತನ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಅಹಿಂಸೆ– ವರ್ತಮಾನದ ತಲ್ಲಣ ಮತ್ತು ಸಾಧ್ಯತೆಗಳು’ ವಿಷಯ ಕುರಿತು ಅವರು ಮಾತನಾಡಿದರು.

ಅಹಿಂಸೆ ಅಥವಾ ಹಿಂಸೆಯನ್ನು ಅರ್ಥ ಮಾಡಿಕೊಳ್ಳಲು ಸ್ವತಂತ್ರ ಅಸ್ಥಿತ್ವ ಇಲ್ಲ. ನೈಸರ್ಗಿಕ ಭೇದವನ್ನು ಕಂಡು ಹಿಂಸೆಯನ್ನು ಅರ್ಥೈಸುವ ತಪ್ಪು ಕಲ್ಪನೆ ನಮ್ಮಲ್ಲಿದೆ. ಯಂತ್ರಗಳಿಂದ ನಾಗರಿ­ಕತೆ ಆರಂಭವಾದಾಗಲೇ ಹಿಂಸೆಗೆ ಕಾರಣ­ವಾಗಿದೆ. ನಾಗರಿಕ ಹಿಂಸೆ ಮತ್ತು ಪ್ರಕೃತಿದತ್ತ ಹಿಂಸೆಗೆ ಮೂಲಭೂತವಾದ ವ್ಯತ್ಯಾಸವಿದೆ ಎಂದರು.

ಜೈನ ಧರ್ಮದಲ್ಲಿ ಅಹಿಂಸೆಯನ್ನು ಪ್ರತಿ­ಪಾದಿಸಿದರೂ ಹಿಂಸೆಯಿಂದ ಹೊರಬರಲು ಸಾಧ್ಯವಾಗಿಲ್ಲ. ವೈಷ್ಣವ ಪಂಥ ಅಹಿಂಸೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಎಲ್ಲಾ ರೀತಿಯ ಸೈದ್ಧಾಂತಿಕ ಅತಿರೇಕಗಳು ಹಿಂಸಾತ್ಮಕ­ವಾದುದೇ ಆಗಿದೆ. ಪರಸ್ಪರ ಅವಲಂಬನೆ ಬಿಟ್ಟು ಮಧ್ಯಮ ಮಾರ್ಗವನ್ನು ಅನುಸರಿಸಿದಾಗ ಹಿಂಸೆ­ಕಡಿವಾಣ ಹಾಕಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ನಮೋ ಬ್ರಿಗೇಡ್‌ ಕಟೌಟ್‌ಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ಮೌಲ್ಯಕ್ಕೆ ವ್ಯತಿರಿಕ್ತ­ವಾದ ರಾಜಕೀಯ ತಳಹದಿಯನ್ನು ಮೋದಿಗೆ ನೀಡುತ್ತಿದೆ. ನಮೋ ಬ್ರಿಗೇಡ್‌ ಅತಿರೇಕದ ಕಲ್ಪನೆಯ ಮೂಲಕ ಯಂತ್ರ ನಾಗರಿಕತೆಯನ್ನು ಒಪ್ಪಿಕೊಳ್ಳುವ ಆತುರದ ಕ್ರಮವಾಗಿದೆ ಎಂದು ಅವರು ಹೇಳಿದರು.

‘ಭಾರತದಲ್ಲಿ ಅಹಿಂಸೆ ಬಗ್ಗೆ ಮಾತನಾಡಿದಷ್ಷು ಬೇರೆ ರಾಷ್ಟ್ರಗಳು ಮಾತನಾಡಲಿಲ್ಲ. ಸಮಾಜ­ದಲ್ಲಿ ನಾವೆಲ್ಲರೂ ಬದಲಾಗುತ್ತಿದ್ದೇವೆ, ಮನುಷ್ಯ­ನಿಂದಲೇ ಹುಟ್ಟಿದ ಯಂತ್ರಗಳು ಅವನನ್ನೆ ದೂರ ಮಾಡುತ್ತಿದೆ’ ಎಂದು ಡಾ.ಬಿ. ಸುರೇಂದ್ರ ರಾವ್‌ ಹೇಳಿದರು.

ರಂಗಕರ್ಮಿ ಉದ್ಯಾವರ ನಾಗೇಶ್‌ ಕುಮಾರ್‌ ಕೆ.ಜಿ.ನಾರಾಯಣ ಸಂಸ್ಮರಣೆ ಮಾಡಿದರು.

ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಲೀಧರ ಉಪಾಧ್ಯ ಹಿರಿಯಡ್ಕ ಸ್ವಾಗತಿಸಿ­ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಷಿ ವಂದಿಸಿದರು. ಎಸ್‌.ಅಭಿಲಾಷ ಕಾರ್ಯ­ಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com