ಮರವಂತೆ ನಾಡದೋಣಿ ಬಂದರು ಪ್ರದೇಶಕ್ಕೆ ಸಚಿವ ಸೊರಕೆ ಭೇಟಿ

ಕುಂದಾಪುರ: ಕೇರಳ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊದಲ ಮರವಂತೆ ನಾಡದೋಣಿ ಬಂದರು ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಈ ಸಂದರ್ಭ ಮರವಂತೆ ಬಂದರು ಕ್ರಿಯಾ ಸಮಿತಿ ಅಧ್ಯಕ್ಷ ಪ್ರಭಾಕರ ಖಾರ್ವಿ ಮತ್ತು ಕಾರ್ಯದರ್ಶಿ ಸಂಜೀವ ಖಾರ್ವಿ ಸಚಿವರಿಗೆ ಮನವಿ ಸಲ್ಲಿಸಿ ನಾಡಾದೋಣಿ ಬಂದರು ನಿರ್ಮಾಣ ಕಾಮಗಾರಿಯಡಿ ನಡೆಯುತ್ತಿರುವ ಬ್ರೇಕ್ ವಾಟರ್ ನಿರ್ಮಾಣದ ದಿಕ್ಕು ಬದಲಿಸುವಂತೆ ಸೂಚಿಸಿದರು. ಈಗ ನಡೆಯುತ್ತಿರುವ ಕಾಮಗಾರಿಯಿಂದ ಮುಂದೆ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಅಲೆಗಳ ಹೊಡೆತ ಮತ್ತು ಮರಳು ಒಳ ಸೇರುವಿಕೆಯಿಂದ ಆಪತ್ತು ಎದುರಾಗಲಿದೆ ಎಂದು ತಿಳಿಸಿದರು. 

ಮನವಿ ಸ್ವೀಕರಿಸಿದ ಸಚಿವರು ಪರಿಶೀಲನೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಲ್ಲದೆ ಬೇಕಾದ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಭರವಸೆ ನೀಡಿದರು. ಸ್ಥಳದಲ್ಲಿದ್ದ ಬಂದರು ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ತಿಳಿಸಿದರು. 

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ತಾಪಂ ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿ, ಮರವಂತೆ ಗ್ರಾಪಂ ಸದಸ್ಯ ಎಸ್. ಜನಾರ್ದನ, ತಾಪಂ ಸದಸ್ಯರಾದ ಕೊಲ್ಲೂರು ರಮೇಶ ಗಾಣಿಗ, ಪ್ರದೀಪಕುಮಾರ ಶೆಟ್ಟಿ, ರಾಜು ಪೂಜಾರಿ, ಮುಖಂಡರಾದ ಪಿ.ಎಲ್. ಜೋಸ್, ಎಂ.ಎನ್. ಶೇಷ, ರಾಜು ದೇವಾಡಿಗ, ಬಂದರು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. 

ಮೀನು ಲಾರಿ ಕೇರಳ ನಿರ್ಬಂಧ ತೆರವು: ಕರ್ನಾಟಕ ಕರಾವಳಿಯ ಮೀನು ಮಾರಾಟ ಲಾರಿಗಳು ಕೇರಳ ಪ್ರವೇಶಕ್ಕೆ ಇರುವ ನಿರ್ಬಂಧ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ತಿಳಿಸಿದ್ದಾರೆ. ಶುಕ್ರವಾರ ಮರವಂತೆಗೆ ಭೇಟಿ ನೀಡಿದ್ದ ಅವರು ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಶನ್ ಜತೆ ಕಾರ್ಯದರ್ಶಿ ಮನ್ಸೂರ್ ಮರವಂತೆ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. 

ಈಗಾಗಲೆ ಕೇರಳ ಸರಕಾರದ ಸಂಬಂಧಿತ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ನಿರ್ಬಂಧ ತೆರವಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ಬಗ್ಗೆ ಕರ್ನಾಟಕ ಕರಾವಳಿ ಮೀನು ಮಾರಾಟ ಲಾರಿಗಳು ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com