ಯಡ್ತರೆ ಮತ್ತು ಬೈಂದೂರು ಗ್ರಾಪಂ ಮೇಲ್ದರ್ಜೆಗೆ ಅರ್ಹ; ಕುಂದಾಪುರಕ್ಕೆ ಪುರಸಭೆಗೆ ಜನಸಂಖ್ಯಾ ಬಲವಿಲ್ಲ

ಉಡುಪಿ: ಜಿಲ್ಲೆಯಲ್ಲಿ 10 ಗ್ರಾಪಂಗಳಷ್ಟೇ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರುವ ಅರ್ಹತೆ ಪಡೆದಿವೆ. ಉಡುಪಿ ನಗರಸಭೆಗೆ ಮಹಾನಗರ ಪಾಲಿಕೆಯಾಗುವ, ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಪುರಸಭೆಯಾಗುವ, ಕಾರ್ಕಳ ಮತ್ತು ಕುಂದಾಪುರ ಪುರಸಭೆಗೆ ನಗರಸಭೆಯಾಗಿ ಮೇಲ್ದರ್ಜೆಗೇರುವ ನಿಟ್ಟಿನಲ್ಲಿ ಜನಸಂಖ್ಯಾ ಬಲವಿಲ್ಲ. 

2011ರ ಜನ ಗಣತಿ ಪ್ರಕಾರ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಉದ್ದೇಶಿಸಿದೆ. ಹಲವು ಪಂಚಾಯಿತಿಗಳು ಮೇಲ್ದರ್ಜೆಗೇರುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡಿದ್ದರೆ, ಇನ್ನುಳಿದವು ಮೀನ ಮೇಷ ಎಣಿಸುತ್ತಿವೆ. 

ಸರಕಾರದಿಂದ ಯಾವುದೇ ಪ್ರಸ್ತಾಪವಿಲ್ಲದಿದ್ದರೂ ಜನರ ಬೇಡಿಕೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ, ಜನಸಂಖ್ಯಾ ಬಲವಿರುವ 9 ಗ್ರಾ. ಪಂ. ಗಳನ್ನು ಪರಸ್ಪರ ವಿಲೀನದ ಮೂಲಕ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನೂ ಸಿದ್ಧಪಡಿಸಲಾಗಿದೆ. 

ಯಡ್ತರೆ ಮತ್ತು ಬೈಂದೂರು ಪಂಚಾಯಿತಿ ಒಟ್ಟು ಸೇರಿಸಿ ( 9,624) ಬೈಂದೂರು ಪಟ್ಟಣ ಪಂಚಾಯಿತಿ, ಹೆಬ್ರಿ ಗ್ರಾ. ಪಂ. (6,006) ಚಾರ ಗ್ರಾ. ಪಂ. ಸೇರಿಸಿ ಹೆಬ್ರಿ ಪಟ್ಟಣ ಪಂಚಾಯಿತಿ ರೂಪಿಸಲು ಉದ್ದೇಶಿಸಲಾಗಿದೆ. 

ಚಾಂತಾರು(5,512), ಹಂದಾಡಿ(3,309), ವಾರಂಬಳ್ಳಿ(6,809), ಹಾರಾಡಿ(3,771) ಗ್ರಾ. ಪಂ. ಒಟ್ಟು ಸೇರಿದರೆ 19,402 ಜನಸಂಖ್ಯೆ ಹೊಂದಲಿದ್ದು ದೊಡ್ಡ ಪಟ್ಟಣ ಪಂಚಾಯಿತಿಯಾಗಿ ರೂಪುಗೊಳ್ಳಲಿದೆ. ಪಡು(5,137), ಮಲ್ಲಾರು(7,765), ಉಳಿಯಾರಗೋಳಿ(5,898) ಪಂಚಾಯಿತಿಯನ್ನು ಪ್ರಸ್ತಾಪಿತ ಕಾಪು ಪಟ್ಟಣ ಪಂಚಾಯಿತಿಯಡಿ ತರಲು ಉದ್ದೇಶಿಸಲಾಗಿದೆ. 

ಪಟ್ಟಣ ಪಂಚಾಯಿತಿ: ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಬೇಕಾದರೆ ಜನಸಂಖ್ಯೆ 10,000 ರಿಂದ 20,000 ಒಳಗಿರಬೇಕು. ಜನಸಾಂದ್ರತೆ ಒಂದು ಚದರ ಕಿ. ಮೀ. ಗೆ 400ಕ್ಕಿಂತ ಹೆಚ್ಚಿರಬೇಕು. ಕೃಷಿಯೇತರ ಚಟುವಟಿಕೆಯ ಉದ್ಯೋಗಾವಕಾಶದ ಶೇಕಡಾ ಪ್ರಮಾಣವು ಒಟ್ಟು ಉದ್ಯೋಗ ಪ್ರಮಾಣದ ಶೇ. 50 ಕ್ಕಿಂತ ಕಡಿಮೆ ಇರಬಾರದು. 

ಪುರಸಭೆ: ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಬೇಕಾದರೆ 20,000 ದಿಂದ 50,000 ಜನಸಂಖ್ಯೆ ಇರಬೇಕು. ಪ್ರತಿ ಚದರ ಕಿ. ಮೀ. ಗೆ 1,500 ಜನಸಂಖ್ಯೆ ಹಾಗೂ ರಾಜಸ್ವ ಸಂಗ್ರಹ 9ಲಕ್ಷ ರೂ. ಅಥವಾ ತಲಾವಾರು ಆದಾಯ 45 ರೂ. ಇದರದಲ್ಲಿ ಯಾವುದು ಅತಿ ಹೆಚ್ಚೋ ಇದಕ್ಕಿಂತ ಕಡಿಮೆ ಇರಬಾರದು, ಕೃಷಿಯೇತರ ಚಟುವಟಿಕೆಯ ಉದ್ಯೋಗಾವಕಾಶದ ಶೇಕಡಾ ಪ್ರಮಾಣ ಒಟ್ಟು ಉದ್ಯೋಗ ಪ್ರಮಾಣದ ಶೇ. 50ಕ್ಕಿಂತ ಕಡಿಮೆ ಇರಬಾರದು. 

ನಗರಸಭೆ: ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಬೇಕಾದರೆ 50,000ದಿಂದ 3ಲಕ್ಷದೊಳಗೆ ಜನಸಂಖ್ಯೆ ಇರಬೇಕು. ಉಡುಪಿ ನಗರಸಭೆಯ ತೆಕ್ಕೆಯಲ್ಲಿರುವ ನಾಲ್ಕು ಪಂಚಾಯಿತಿಗಳ ವಿಲೀನದ ಮೂಲಕ ಮಹಾನಗರ ಪಾಲಿಕೆಯಾಗಿ ರೂಪಿಸುವ ಪ್ರಸ್ತಾವಕ್ಕೆ ಉದ್ಯಾವರ ಗ್ರಾ. ಪಂ. ನಿರ್ಣಯ ಕೈಗೊಂಡಿದ್ದರೂ ಉಡುಪಿ ನಗರಸಭೆ ನಿರ್ಣಯ ಕೈಗೊಂಡಿಲ್ಲ, ಜನಸಂಖ್ಯಾ ಬಲವೂ ಇಲ್ಲ. 

*ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ಘೋಷಣೆಯಾದರೆ ಜತೆಯಾಗಿಯೇ 10 ಗ್ರಾ ಪಂಗಳು ಮೇಲ್ದರ್ಜೆಗೇರಲಿವೆ. ಪಂಚಾಯಿತಿಗಳ ವಿಲೀನದ ಮೂಲಕ ಪಟ್ಟಣ ಪಂಚಾಯಿತಿ ನಿರ್ಮಾಣದ ಅರ್ಹತೆಗೆ ಪಂಚಾಯಿತಿಗಳು ನಿರ್ಣಯ ಕೈಗೊಂಡು ಕಳುಹಿಸಿದರೆ, ಸರಕಾರಕ್ಕೆ ಶಿಫಾರಸು ಮಾಡಲಾಗುವುದು.
 -ವಿ. ಪ್ರಸನ್ನ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಉಡುಪಿ 

*1935ರಿಂದ 1968ರ ತನಕ ಮದ್ರಾಸ್ ಕಾಯಿದೆಯಡಿ ಉಡುಪಿ ನಗರಸಭೆಯಾಗಿತ್ತು. 1968ರಲ್ಲಿ ಕರ್ನಾಟಕ ಪುರಸಭೆ ಕಾಯಿದೆ ಜಾರಿ ಬಳಿಕ ತಾಂತ್ರಿಕವಾಗಿ ಪುರಸಭೆಯಾಯಿತು. 1995 ರಲ್ಲಿ 5 ಗ್ರಾಮಗಳನ್ನು ಸೇರಿಸಿ ನಗರಸಭೆಯಾಗಿ ರೂಪಿಸಲಾಯಿತು. ಹೀಗಾಗಿ ಆಡಳಿತ ವರ್ಗೀಕರಣಕ್ಕೆ ಜನಸಂಖ್ಯಾ ಮಿತಿಯನ್ನು (20,000 ಜನಸಂಖ್ಯೆ ತನಕ ಗ್ರಾ.ಪಂ., 20ರಿಂದ 50ಸಾವಿರ: ಪುರಸಭೆ, 1.50 ಲಕ್ಷದಿಂದ 3 ಲಕ್ಷ: ನಗರಸಭೆ, 3ಲಕ್ಷದಿಂದ ಮೇಲೆ ಮಹಾನಗರಪಾಲಿಕೆ) ಪರಿಷ್ಕರಿಸಬೇಕು. 
-ಗುಜ್ಜಾಡಿ ಪ್ರಭಾಕರ ನಾಯಕ್, ಮಾಜಿ ಅಧ್ಯಕ್ಷರು, ಉಡುಪಿ ನಗರಸಭೆ

ಎಸ್.ಜಿ. ಕುರ್ಯ ಉಡುಪಿ, ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com