ಶಾಲಾ ಮಕ್ಕಳ ದೇಗುಲ ಪ್ರವಾಸವೂ ಮೂಢನಂಬಿಕೆ.

ಉಡುಪಿ: ರಾಜ್ಯ ಸರಕಾರದ ಮುಂದಿರುವ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ 2013ರಲ್ಲಿರುವ ವಿವಿಧ ಶಿಫಾರಸುಗಳಲ್ಲಿ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಆಯೋಜಿಸುವ ಪ್ರವಾಸಕ್ಕೂ ಕತ್ತರಿ ಪ್ರಯೋಗವಿದೆ.

ಕರಡು ಪ್ರತಿಯಲ್ಲಿ ಹೇಳುವಂತೆ ಶೈಕ್ಷಣಿಕ ಸಂಸ್ಥೆಗಳು ಮೌಡ್ಯಗಳನ್ನು ಬಿತ್ತರಿಸುವ ಧಾರ್ಮಿಕ ಕೇಂದ್ರಗಳಿಗೆ ಮಕ್ಕಳನ್ನು ಕರೆದೊಯ್ಯಬಾರದು. ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಡುವ ಜನರಲ್ಲಿ ಎಷ್ಟು ಜನ ಅದನ್ನು ನಂಬಿಕೊಂಡುಬಂದವರು? ಎಷ್ಟು ಜನ ಪ್ರವಾಸಿಗರಾಗಿ ಬಂದವರು? ಎಷ್ಟು ಜನ ದಾರಿಹೋಕರಾಗಿ (ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ) ಭೇಟಿಕೊಟ್ಟವರು? ಎಂಬಿತ್ಯಾದಿ ವರ್ಗೀಕರಣಗಳನ್ನು ಆಲೋಚನಾ ಕ್ರಮದಲ್ಲಿಯಾದರೂ ಮಾಡಿದ್ದೀರಾ? ಇವರಲ್ಲಿ ಬಹುತೇಕರು 2 ಮತ್ತು 3ನೇ ದರ್ಜೆಯವರಾಗಿರುತ್ತಾರೆ ಗೊತ್ತೆ? ಇವರಿಂದ ದೇವಸ್ಥಾನಗಳಿಗೆ ಒಂದಿಷ್ಟು ಖರ್ಚು ವಿನಾ ಲಾಭವಿಲ್ಲ. ದೇವಸ್ಥಾನಗಳ ಖರ್ಚು ಹುಟ್ಟುವುದು ಬಹುತೇಕ ಭಕ್ತರಿಂದ ಮಾತ್ರ. ಶಾಲಾ ಮಕ್ಕಳ ಪ್ರವಾಸದಿಂದ ದೇವಸ್ಥಾನಗಳಿಗೇನೂ ಲಾಭವಿಲ್ಲ. ಮಕ್ಕಳ ಮನಃಸ್ಥಿತಿಯೂ ಹೆಚ್ಚೆಂದರೆ ಕೈಮುಗಿಯುವುದಕ್ಕೆ ಮತ್ತು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಮಕ್ಕಳ ಮನಸ್ಸಿನ ಪ್ರಸನ್ನತೆ, ವಿಹಾರ ದೃಷ್ಟಿಕೋನಗಳೇ ಪ್ರಮುಖವಾಗಿರುತ್ತದೆ. ಇದು ಯಾರಿಗೆ ಗೊತ್ತಿಲ್ಲ?

ಇತಿಹಾಸವೂ ಮೂಢನಂಬಿಕೆಯೆ?

ಮುಖ್ಯವಾಗಿ ಪ್ರವಾಸದಲ್ಲಿ ಒಂದು ನಿಗದಿತ ಜಾಗದಿಂದ ಇನ್ನೊಂದು ನಿಗದಿತ ಜಾಗಕ್ಕೆ ನಿರ್ಧಾರ ಮಾಡಿರುತ್ತಾರೆ. ಅಲ್ಲಿ ಹೋಗುವಾಗ ಒಂದಿಷ್ಟು ತಾಣಗಳಿಗೆ ಭೇಟಿ ಕೊಡುವುದು ಮನಃಪ್ರಸನ್ನತೆ ಕಾರಣಕ್ಕಾಗಿಯಷ್ಟೆ. ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. ಐತಿಹಾಸಿಕ ಸ್ಥಳಗಳೂ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳಿಗೆ ಅವಿನಾಭಾವ ಸಂಬಂಧ ಹೊಂದಿವೆ ಎನ್ನುವುದು ಗೊತ್ತಿಲ್ಲವೆ? ಐತಿಹಾಸಿಕ ವ್ಯಕ್ತಿಗಳು ಯಾವುದೋ ಒಂದು ಧರ್ಮಕ್ಕೆ ನಿಷ್ಠರಾಗಿರುತ್ತಾರಾದರೆ ಅಂತಹ ಐತಿಹಾಸಿಕ ವ್ಯಕ್ತಿಗಳ ವಿಚಾರಗಳಿಂದ ಮಕ್ಕಳು ಪ್ರಭಾವಿತರಾಗುವ ಕಾರಣ ಅವರ ಹೆಸರು ಕೇಳುವುದೂ, ಹೇಳುವುದೂ, ಅಧ್ಯಯನ ನಡೆಸುವುದೂ ಮೂಢನಂಬಿಕೆಯನ್ನು ಬೆಳೆಸಿದಂತೆ ಆಗುವುದಿಲ್ಲವೆ?

ದೇವಳದಲ್ಲಿಯೂ ಅಧ್ಯಯನ

ಶಾಲಾ ಕಾಲೇಜುಗಳಲ್ಲಿಯೂ ಪ್ರಬಂಧ, ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳಲ್ಲಿ ದೇವಸ್ಥಾನ, ಚರ್ಚ್‌, ಮಸೀದಿ ಕುರಿತಾದ ಇತಿಹಾಸದ ಕುರಿತು ಬರೆಯುತ್ತಾರೆ, ಉತ್ತರಿಸುತ್ತಾರೆ. ಪ್ರವಾಸದ ವೇಳೆಯೂ ದೇವಸ್ಥಾನಗಳ ಭೇಟಿಯಲ್ಲಿ ಪೂಜೆ ಪುನಸ್ಕಾರಕ್ಕೆ ಮಹತ್ವ ಕಡಿಮೆ. ಅಲ್ಲಿ ಐತಿಹಾಸಿಕ, ವಾಸ್ತುಶಿಲ್ಪ, ಶಿಲ್ಪಸೌಂದರ್ಯ ಇತ್ಯಾದಿ ವಿಚಾರಗಳ ಕುರಿತು ಮಕ್ಕಳು ಕಣ್ಣುಹಾಯಿಸುತ್ತಾರೆ. ಇದೂ ಒಂದು ಅಧ್ಯಯನವೆ ಆಗಿದೆ.

'ಪಿಕ್‌ನಿಕ್‌' ಪ್ರವಾಸ ಸಕ್ರಮವೆ?

ಮಾಧ್ಯಮಗಳಲ್ಲಿ ತೋರುತ್ತಿರುವ ಅಪರಾಧ ವಿಭಾಗಗಳನ್ನು ಗಮನಿಸಿದರೆ 'ಪಿಕ್‌ನಿಕ್‌' ಅವಾಂತರಗಳು ಎಷ್ಟು ಎನ್ನುವುದು ಅರಿವಿಗೆ ಬರುತ್ತದೆ. ಇಂತಹ ಪ್ರವಾಸಗಳನ್ನು ನಿಷೇಧಿಸಲು ಸಮಿತಿ ಶಿಫಾರಸು ಮಾಡಿಲ್ಲವೆನ್ನುವುದನ್ನೂ ಗಮನಿಸಿ. ಅಂದರೆ ಇಂತಹ ಪ್ರವಾಸ ಸಕ್ರಮವೆಂದರ್ಥವೆ? ಒಟ್ಟಾರೆಯಾಗಿ ಸಮಾಜ 'ದುರ್ಭರ', 'ಅಶಾಂತಿ', 'ಅಸಹನೆ'ಯಿಂದ ಕೂಡಿರಬೇಕು, ಆಗ ಚಿಂತಕರು ಸೇರಿ 'ಇವುಗಳಿಗೆ ಇವು ಕಾರಣ' ಎಂದು ಬೆಟ್ಟುಮಾಡಿ ಅಥವಾ ಆರೋಪ ಮಾಡಿ ಇದಕ್ಕೆ ಪರಿಹಾರ ಕೊಡುವ ಫೋಸು ಕೊಡಬೇಕೆಂಬ ಇರಾದೆ ಇರಬಹುದೆ?

'ಶಾಂತಿ!' ಬೋಧಕರ ಬೋಧನೆ

ದೇವಸ್ಥಾನಗಳತ್ತ ಟೀಕೆಗಳನ್ನು ಮಾಡುತ್ತಿರುವವರು ದೇವರ ಭಕ್ತರೇ ಆಗಿಲ್ಲದಿರುವುದು ಇನ್ನೊಂದು ವಿಚಿತ್ರ. ಇವರಿಂದ ದೇವಸ್ಥಾನಕ್ಕೆ ಯಾವುದೇ ಪ್ರಯೋಜನವಿಲ್ಲದೆ ಕೇವಲ ಟೀಕೆಗಳನ್ನು ಮಾಡುತ್ತ ಹೋಗುವುದು ಎಷ್ಟು ಸಮಂಜಸ? ಅಥವಾ ದೇವಸ್ಥಾನ, ದೈವಸ್ಥಾನಗಳನ್ನು ಕೆಡವಿ ಹಾಕಲು ಶಿಫಾರಸು ಮಾಡಬಹುದಲ್ಲವೆ? ಒಂದು ನೆನಪಿಡಿ. ಈಗ ಈ ಶಿಫಾರಸು ಮಾಡುವ ಕಾಲ ಬಂದಿಲ್ಲವೆನ್ನುವುದು ಅವರಿಗೂ ಗೊತ್ತಿದೆ. ಮುಂದೊಂದು ದಿನ ಶಿಫಾರಸು ಮಾಡುವ ಮನಃಸ್ಥಿತಿಯೂ ಇವರಿಗೆ ಇದೆ. ಇವರು ಲೋಕಕ್ಕೆ 'ಶಾಂತಿ' ಬೋಧನೆ ಮಾಡುವ ಬುದ್ಧ, ಕ್ರಿಸ್ತ, ಮಹಾವೀರ, ಬಸವಣ್ಣನ ಅ(ನ)ಧಿಕೃತ ಪ್ರತಿನಿಧಿಗಳಂತೆ ಸೋಗುಹಾಕುತ್ತಿದ್ದಾರಷ್ಟೆ. ಮಾತೆತ್ತಿದರೆ ಬುದ್ಧ, ಗಾಂಧಿ, ಬಸವಣ್ಣ, ಕ್ರಿಸ್ತನ ಜಪ ಮಾಡುತ್ತಾರೆ. ಶಿಫಾರಸು ಮಾಡಿರುವ ಸಮಿತಿ ಇಲ್ಲಿ ಮುಖ್ಯವಲ್ಲ. ನಮ್ಮ ನಿಮ್ಮ ಊರುಗಳಲ್ಲಿಯೂ ಈ ಸಮಿತಿ ಸದಸ್ಯರಿದ್ದಾರೆನ್ನುವುದನ್ನು ಎಚ್ಚರದಿಂದ ಗಮನಿಸಿ. ಕೆಲವರು ಬಹಿರಂಗವಾಗಿ ತೋರುತ್ತಾರೆ, ಕೆಲವರು ಮುಖವಾಡ ಧರಿಸಿಕೊಂಡಿರುತ್ತಾರೆ. ಇವರು ಕೇವಲ ದೇವಸ್ಥಾನಗಳಿಗೆ ಮಾತ್ರ ಟೀಕಿಸುತ್ತಾರೆನ್ನುವುದನ್ನೂ ಮೌನದಿಂದ ಗಮನಿಸಿ. ಬೇರೆಯವರ ಬಗ್ಗೆ ಮಾತನಾಡಿದರೆ ತಾವೇ ಇಲ್ಲದಂತಾಗುತ್ತೇವೆ ಎಂಬ ಭಯವೇ ಇದಕ್ಕೆ ಕಾರಣ. ಇಂತಹ ಭಯ ದೇವಸ್ಥಾನಗಳ ಮೂಲದಿಂದ ಹೊರಟರೆ ತತ್‌ಕ್ಷಣವೇ 'ಭಯ' ಉತ್ಪಾದನೆಯ ದೊಡ್ಡ ಚರ್ಚೆ ಶುರು ಮಾಡಿ ಎಲ್ಲಿ ಹೊರಟಿದ್ದೇವೆ? ಎಲ್ಲಿಗೆ ಮುಟ್ಟುತ್ತೇವೆ? ಎಂಬುದು ಅರಿವಾಗದಂತೆ ಮಾಡುವ 'ಬಾಯಿಚಳಕ' ಇವರಲ್ಲಿದೆ. ಇವರ 'ಬಾಯಿಚಳಕ'ಕ್ಕೆ ಸರಿದೂಗುವ ಪರ್ಯಾಯ 'ಬಾಯಿಚಳಕ' ಇನ್ನೊಂದು ಕಡೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿಲ್ಲ. ಆ ಜಾತಿ ಈ ಜಾತಿ ಎಂದು ಹೊಡೆದಾಡಿಕೊಂಡದ್ದು ಸಾಕು, ಭಾರತ ಈ ಸ್ಥಿತಿಗೆ ತಲುಪಲು ಆಂತರಿಕ ಕಚ್ಚಾಟವೇ ಕಾರಣ ಎಂದು ಇತಿಹಾಸವೂ ಹೇಳುತ್ತಿದೆ. ಇದರಿಂದ ಇನ್ನಾದರೂ ಪಾಠ ಕಲಿಯದಿದ್ದರೆ ಇತಿಹಾಸ ಅಧ್ಯಯನದಿಂದ ಏನು ಪ್ರಯೋಜನ? ಡಾಕ್ಟರೇಟ್‌, ಪದವಿ, ಆದಾಯ ಮಾತ್ರಕ್ಕಾಗಿ ಅಧ್ಯಯನವೆ?

ಎಚ್ಚರಗೊಳ್ಳಲು ಸಕಾಲ

ಎಲ್ಲ ಜಾತಿಗಳ ದೇವಸ್ಥಾನಗಳು, ದೈವಸ್ಥಾನಗಳವರೂ ಒಕ್ಕೂಟ ರಚಿಸಿಕೊಂಡು ತಮ್ಮಲ್ಲಿರುವ ನ್ಯೂನತೆಗಳು, ವೈಯಕ್ತಿಕ ಶ್ರೇಷ್ಠತೆ, ಪ್ರತಿಷ್ಠೆ, ಆಚರಣೆಗಳನ್ನು ಮನೆಯಲ್ಲಿಯೇ ಕೂಡಿಟ್ಟು ಒಟ್ಟು ಸಮಾಜಕ್ಕೆ ಬೇಕಾಗುವ ಉದಾರ ಸಮಾನನೀತಿಗಳನ್ನು ಸ್ವೀಕರಿಸಿ ಸ್ವಸ್ಥ ಸಮಾಜ ರೂಪಿಸುವತ್ತ ಗಮನಹರಿಸುವುದು ಉತ್ತಮ. ಒಂದು ಪಕ್ಷದವರ ನ್ಯೂನತೆಯೇ ವಿರೋಧಿ ಪಕ್ಷಗಳವರಿಗೆ ಬಂಡವಾಳ. ಸಾವಿರ ವರ್ಷ ಮೊಘಲರು, 200 ವರ್ಷ ಬ್ರಿಟಿಷರು ಆಡಳಿತ ನಡೆಸಲು ಸಾಧ್ಯವಾದದ್ದು ಇದರಿಂದಲೇ. ಪ್ರಗತಿಪರರು, ನಾಸ್ತಿಕರ ಎಲ್ಲಾ ಬಗೆಯ ವಕಾಲತ್ತು ಚಿಂತನೆಗೆ ಪರ್ಯಾಯವಾಗಿ ಚಿಂತನೆ ರೂಪಿಸಲು ಇದು ಸಕಾಲ. ಪೆಟ್ಟು ಬೀಳುತ್ತದೆ ಎಂದು ಗೊತ್ತಾದ ಕೂಡಲೆಯಾದರೂ ಎಚ್ಚರಗೊಳ್ಳಿ. ಪೆಟ್ಟು ಬೀಳುವವರೆಗೆ ಕಾದರೆ ಅನಂತರದ ಘಟನೆ ಸಾವು ಮಾತ್ರ. ಆಗ ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಏನಾಗಿತ್ತೂ ಅದೇ ಆಗುತ್ತದೆ...

ಮೂಢನಂಬಿಕೆ ಬೇರೆ, ದೇವಸ್ಥಾನಗಳು ಬೇರೆ

ಮೂಢನಂಬಿಕೆ ಬೇರೆ, ದೇವಸ್ಥಾನ-ಧರ್ಮ ಬೇರೆ ಬೇರೆ. ನಮ್ಮ ಸಂಪ್ರದಾಯ, ಧರ್ಮ- ಪೂಜೆ ಪುರಸ್ಕಾರಗಳನ್ನು ಮೂಢನಂಬಿಕೆ ಎಂದು ಹೇಳಲಾಗದು. ದೇವಸ್ಥಾನಗಳಿಗೆ ಭೇಟಿ ಕೊಡುವುದು ಸರಿಯಲ್ಲ ಎನ್ನುವುದು ತಪ್ಪು. ಪ್ರತಿ ಮಗುವಿಗಾದರೂ ಒಂದು ನಂಬಿಕೆ ಬೇಕೆ ಬೇಕಲ್ಲ?

ಅಶೋಕಕುಮಾರ್‌ ಶೆಟ್ಟಿ, ಅಧ್ಯಕ್ಷರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಉಡುಪಿ ಜಿಲ್ಲೆ

ಧಾರ್ಮಿಕ ಹಕ್ಕಿಗೆ ಕೈಹಾಕುವುದು ತಪ್ಪು

ಧಾರ್ಮಿಕ ಚೌಕಟ್ಟಿನಲ್ಲಿ ಕೆಲವು ವಿಚಾರಗಳನ್ನು ಮೂಢನಂಬಿಕೆ ಎಂದು ಕರೆಯುವುದಾದರೂ ಧರ್ಮದ ವಿಚಾರದಲ್ಲಿ ಸರಕಾರ ಕೈಹಾಕುವುದು ಜನರ ಭಾವನೆಗಳಿಗೆ ಧಕ್ಕೆ ತಂದಂತೆ. ಬೇರೆ ಬೇರೆ ಧರ್ಮಗಳಲ್ಲಿಯೂ ಆಚರಣೆಗಳಿರುತ್ತವೆ. ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕುಗಳಿರುತ್ತವೆ. ಇದಕ್ಕೆ ಸರಕಾರ ಮಧ್ಯಪ್ರವೇಶಿಸಬಾರದು. ಇಂತಹ ಪ್ರಸ್ತಾವವನ್ನು ಚುನಾವಣೆಯ ದೃಷ್ಟಿಕೋನದಿಂದ ಮಾಡುತ್ತಿದ್ದಾರೆಂದು ಅನಿಸುತ್ತದೆ.

ಚಂದ್ರಶೇಖರ ಅಡಿಗ, ಅಧ್ಯಕ್ಷರು, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಉಡುಪಿ ಜಿಲ್ಲೆ

ಅಶ್ವತ್ಥ ಮರಕ್ಕೆ ಸುತ್ತು- ಮೂಢನಂಬಿಕೆಯೆ?

ಮೂಢನಂಬಿಕೆಯನ್ನು ಸಂಪ್ರದಾಯದೊಂದಿಗೆ ತರುವುದು ಸರಿಯಲ್ಲ. ಅಶ್ವತ್ಥ ಮರಕ್ಕೆ ಸುತ್ತು ಬರುತ್ತೇವೆ. 'ಅಜ್ಜ ನೆಟ್ಟ ಆಲದ ಮರ' ಎಂಬಂತೆ ಸುತ್ತು ಬರಬೇಕೋ? ಇದನ್ನು ಏಕೆ ಮಾಡಬೇಕು? ಪ್ರಯೋಜನವೇನು ಎಂದು ತಿಳಿದು ಮತ್ತು ಮೂಢನಂಬಿಕೆಯಲ್ಲ ಎಂದು ದೃಢಪಟ್ಟು ಮಾಡಿದರೆ ಅದು ಮೂಢನಂಬಿಕೆಯಾಗುತ್ತದೆಯೆ? ನಾವು ಎಷ್ಟೋ ಆಚರಣೆಗಳನ್ನು ವಿಧ್ಯುಕ್ತವಾಗಿ ಆಚರಿಸಿಕೊಂಡು ಬರುತ್ತಿರುವ ಅನಿವಾರ್ಯತೆ ಇದೆ. ಸಂಸ್ಕೃತಿ, ಸಂಪ್ರದಾಯಕ್ಕೆ ಅನುಸಾರವಾಗಿ ನಾವು ಮಾಡಬೇಕಾದ ಕೆಲಸ ಅನಿವಾರ್ಯ ಎನ್ನುವುದು ನನ್ನ ನಿವೇದನೆ.

ಶಶಿಧರ ಶೆಟ್ಟಿ ವಂಡ್ಸೆ, ಅಧ್ಯಕ್ಷರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಉಡುಪಿ ಜಿಲ್ಲೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com