ಕ್ರಿಕೆಟ್‌ ದೇವರಿಗೆ ಗೆಲುವಿನ ವಿದಾಯ

ಮುಂಬೈ : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿದಾಯದ ಸರಣಿಯನ್ನು ಭಾರತಕ್ಕೆ ಕಹಿಯಾಗಿಸುತ್ತೇವೆ ಎಂದು ಹೇಳಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು 2ನೇ ಕ್ರಿಕೆಟ್ ಟೆಸ್ಟ್ ಪಂದ್ಯವನ್ನೂ ಇನ್ನಿಂಗ್ಸ್ ಮತ್ತು 126 ರನ್ನುಗಳ ಅಂತರದಿಂದ ಸೋಲುವ ಮೂಲಕ ಲಿಟ್ಲ್ ಮಾಸ್ಟರ್‌ಗೆ ಭಾರತವು ಉತ್ತಮ ಕೊಡುಗೆನ್ನೇ ನೀಡಿದೆ. ಈ ಗೆಲುವಿನೊಂದಿಗೆ, ಸಚಿನ್ ಅವರು ಪಂದ್ಯ ಮುಗಿಸಿ ಕೊನೆಯ ಬಾರಿ ಆಟದ ಅಂಗಳದಿಂದ ಹೊರನಡೆದರು.
  47 ಓವರು ಆಡಿ 2ನೇ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ಗಿಂತ 5 ರನ್ ಹೆಚ್ಚು (187) ಮಾಡಿದ ವಿಂಡೀಸ್ ತಂಡವು, ಇನ್ನಿಂಗ್ಸ್ ಹಾಗೂ 126 ರನ್ನುಗಳ ಭರ್ಜರಿ ಸೋಲನುಭವಿಸಿತು. ಮೊದಲ ಇನ್ನಿಂಗ್ಸ್‌ನಂತೆಯೇ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪ್ರಬಲ ದಾಳಿ ಸಂಘಟಿಸಿದ ಸ್ಪಿನ್ನರುಗಳಾದ ಪ್ರಜ್ಞಾನ್ ಓಜಾ (18 ಓವರುಗಳಲ್ಲಿ 49/5) ಮತ್ತು ರವಿಚಂದ್ರನ್ ಅಶ್ವಿನ್ (17 ಓವರುಗಳಲ್ಲಿ 89/4) ವಿಂಡಿಗ ದಾಂಡಿಗರನ್ನು ಕೇವಲ 187 ರನ್ನುಗಳಿಗೆ ನೆಲಕ್ಕುರುಳಿಸಿ ಮೆರೆದರು. ಉಳಿದ ಒಂದು ವಿಕೆಟನ್ನು ಕೊನೆಯಲ್ಲಿ ಮೊಹಮದ್ ಶಮಿ ಪಡೆದುಕೊಂಡರು. ಮೊದಲ ಟೆಸ್ಟ್ ಮಾದರಿಯಲ್ಲೇ 2ನೇ ಟೆಸ್ಟ್ ಕೂಡ ಮೂರೇ ದಿನಗಳಲ್ಲಿ ಭಾರತದ ಕೈವಶವಾಯಿತು.

ಈ ಸ್ಪಿನ್ ಅವಳಿಗಳ ದಾಳಿಯನ್ನು ಸ್ವಲ್ಪವಾದರೂ ತಾಳಿಕೊಂಡವರು ಅನುಭವಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ (62 ಎಸೆತಗಳಲ್ಲಿ 4 ಬೌಂಡರಿ ಸಹಿತ 41 ರನ್) ಮತ್ತು ಡಿ.ರಾಮದಿನ್ (68 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 53 ರನ್). ಇದಕ್ಕೆ ಮೊದಲು ಕ್ರಿಸ್ ಗೇಯ್ಲ್ ಕೂಡ ಆರಂಭದಲ್ಲಿ ಸ್ವಲ್ಪ ಪ್ರತಿರೋಧ ತೋರಿದರು. 53 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತವಾಗಿ 35 ರನ್ ಗಳಿಸಿದರು. ಉಳಿದಂತೆ ಯಾರು ಕೂಡ ಭಾರತೀಯ ದಾಳಿಯನ್ನು ತಾಳಿಕೊಳ್ಳಲಿಲ್ಲ.

ಸಚಿನ್‌ಗೆ ಗೌರವ ಪಥ
24 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಕೊನೆಯ ಬಾರಿಗೆ ಆಟ ಮುಗಿಸಿ ಗುಡಿಗೆ ಮರಳುವ ದೇವರಂತೆ ಕಾಣುತ್ತಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಕಣ್ಣಲ್ಲಿ ತುಂಬಿಕೊಂಡ ಪ್ರೇಕ್ಷಕರು, ಭಾವುಕರಾಗಿಯೇ ಅವರಿಗೆ ಜಯಘೋಷ ಮಾಡಿದರು. ಸಚಿನ್ ಮೈದಾನದಿಂದ ತೆರಳುವ ಹಾದಿಯಲ್ಲಿ ಭಾರತ ತಂಡದ ಆಟಗಾರರು ಎರಡೂ ಬದಿಗಳಲ್ಲಿ ಸಾಲಾಗಿ ನಿಂತು, ಅವರಿಗೆ ಗೌರವ ಸಲ್ಲಿಸಿದರು. ತಲೆ ಬಗ್ಗಿಸಿಯೇ ಸಚಿನ್ ಅವರು ಮೈದಾನದಿಂದ ಹೊರನಡೆದಾಗ, ಬಹುಶಃ ಕಣ್ಣೀರಿಳಿಯುತ್ತಿದ್ದಿರಬಹುದು. ಅವರ ಮುಖಕ್ಕೆ ಹ್ಯಾಟ್ ಅಡ್ಡವಾಗಿತ್ತು.

ಮೆಟ್ಟಿಲೇರುವ ಮೊದಲು ಅವರು ಪ್ರೇಕ್ಷಕರತ್ತ, ಅಭಿಮಾನಿವರ್ಗದತ್ತ ಕೈಬೀಸಿದರು. ಪ್ರೇಕ್ಷಕ ಸಂದೋಹ ಹುಚ್ಚೆದ್ದು ಕುಣಿಯಿತು, ಘೋಷಣೆ ಮುಗಿಲುಮುಟ್ಟಿತು.

***********
4 ತಲೆಮಾರು ಬೆಸೆದ ಕ್ರಿಕೆಟ್‌ ಕೊಂಡಿ -ಎಚ್‌. ಪ್ರೇಮಾನಂದ ಕಾಮತ್‌ | Nov 15

ಈ ಸ್ವಾರಸ್ಯಕರ ಸಂಗತಿಯನ್ನೊಮ್ಮೆ ಗಮನಿಸಿ. ಅದು ಡಿಸೆಂಬರ್‌ 11, 1988. 15ರ ಹರೆಯದ ಸಚಿನ್‌ ತೆಂಡುಲ್ಕರ್‌ ಗುಜರಾತ್‌ ವಿರುದ್ಧ ರಣಜಿ ಪದಾರ್ಪಣೆಗೆ ಸಜ್ಜಾಗುತ್ತಿದ್ದಂತೆಯೇ ಅದೇ ಮುಂಬಯಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಗಂಡು ಮಗುವಿನ ಜನನವಾಗುತ್ತದೆ. ಮುಂದೆ ಅದೇ ಹುಡುಗ ಬೆಳೆದು ಕ್ರಿಕೆಟಿಗನಾಗಿ ಮುಂಬಯಿ ರಣಜಿ ತಂಡದ ಪರ ಆಡುತ್ತಾನೆ. ತೆಂಡುಲ್ಕರ್‌ ಹರಿಯಾಣ ವಿರುದ್ಧ ವಿದಾಯದ ಇನ್ನಿಂಗ್ಸ್‌ ಆಡುತ್ತಿರುವ ವೇಳೆ ಆತನೇ ಮಾಸ್ಟರ್‌ ಬ್ಲಾಸ್ಟರ್‌ನ ಕಟ್ಟಕಡೆಯ ಜತೆಗಾರನಾಗಿ ಕ್ರೀಸ್‌ನಲ್ಲಿರುತ್ತಾನೆ. ಈತನೇ ಧವಳ್‌ ಕುಲಕರ್ಣಿ!

ಕ್ರಿಕೆಟ್‌ ಬದುಕಿನ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಸಚಿನ್‌ ತೆಂಡುಲ್ಕರ್‌ ಅದೆಷ್ಟು ಕ್ರಿಕೆಟ್‌ ತಲೆಮಾರುಗಳನ್ನು ಬೆಸೆದ ಕೊಂಡಿಯಾಗಿ ಕಾಣಿಸಿಕೊಂಡರು ಎಂದುದಕ್ಕೆ ಇದಕ್ಕಿಂತ ಉತ್ತಮ ದೃಷ್ಟಾಂತ ಬಹುಶಃ ಬೇರೊಂದಿಲ್ಲ.

ಒಂದಲ್ಲ, ಎರಡಲ್ಲ, 3-4 ತಲೆಮಾರು!

1989ರ ನ. 15ರಂದು ಕರಾಚಿಯಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ ತೆಂಡುಲ್ಕರ್‌ ತಮ್ಮ ನಿವೃತ್ತಿ ವೇಳಗೆ ಸರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟಿನ 25ನೇ ವರ್ಷಕ್ಕೆ ಕಾಲಿಟ್ಟಿರುವುದು ವಿಶೇಷ. ಇದರೊಂದಿಗೆ 4 ಕ್ರಿಕೆಟ್‌ ತಲೆಮಾರುಗಳನ್ನು ಬೆಸೆದ ಅಪರೂಪದ ಕ್ರಿಕೆಟ್‌ ಕೊಂಡಿಯಾಗಿ ಕಾಣಿಸುತ್ತಾರೆ ಈ ಸಚಿನ್‌!

ಸಚಿನ್‌ ತೆಂಡುಲ್ಕರ್‌ ಚೊಚ್ಚಲ ಟೆಸ್ಟ್‌ ಆಡಿದಾಗ ಭಾರತ ತಂಡದಲ್ಲಿದ್ದ ಆಟಗಾರರನ್ನೇ ಗಮನಿಸಿ. ನಾಯಕ ಕೆ. ಶ್ರೀಕಾಂತ್‌, ರವಿ ಶಾಸಿŒ, ಮೊಹಮ್ಮದ್‌ ಅಜರುದ್ದೀನ್‌, ಕಪಿಲ್‌ದೇವ್‌, ಸಂಜಯ್‌ ಮಾಂಜ್ರೆàಕರ್‌, ಕಿರಣ್‌ ಮೋರೆ, ಮನೋಜ್‌ ಪ್ರಭಾಕರ್‌, ನವಜೋತ್‌ ಸಿಂಗ್‌ ಸಿದ್ಧು... ಇವರನ್ನೆಲ್ಲ ಸಚಿನ್‌ ಅವರ ಮೊದಲ ತಲೆಮಾರಿನ ಆಟಗಾರರನ್ನಾಗಿ ಗುರುತಿಸಬೇಕಾಗುತ್ತದೆ. ಈ ತಂಡದಲ್ಲಿದ್ದ ರಮಣ್‌ ಲಾಂಬಾ ವಿಧಿವಶರಾಗಿದ್ದಾರೆ.

ಅನಂತರದ್ದು ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ವೀರೇಂದ್ರ ಸೆಹವಾಗ್‌, ಗೌತಮ್‌ ಗಂಭೀರ್‌ ಮೊದಲಾದವರ ಜಮಾನಾ. ಇದು ಸಚಿನ್‌ ಕಂಡ ಎರಡನೇ ತಲೆಮಾರು.

ಸಚಿನ್‌ ಇಲ್ಲಿಂದಲೂ ತಮ್ಮ ಪಯಣ ಮುಂದುವರಿಸುತ್ತ ಧೋನಿ ಯುಗಕ್ಕೆ ಕಾಲಿಡುತ್ತಾರೆ. ಇಲ್ಲಿ ಯುವರಾಜ್‌ ಸಿಂಗ್‌, ವಿರಾಟ್‌ ಕೊಹ್ಲಿ, ಜಹೀರ್‌ ಖಾನ್‌, ಶಿಖರ್‌ ಧವನ್‌, ಸುರೇಶ್‌ ರೈನಾ ಮೊದಲಾದವರ ದರ್ಶನವಾಗುತ್ತದೆ. ಇವರೆಲ್ಲ ತೆಂಡುಲ್ಕರ್‌ ಅವರ ತೃತೀಯ ತಲೆಮಾರಿನ ಕ್ರಿಕೆಟಿಗೆ ಸಾಕ್ಷಿಯಾಗುತ್ತಾರೆ.

ಈ ನಡುವೆ ಸಚಿನ್‌ ತೆಂಡುಲ್ಕರ್‌ ಐಪಿಎಲ್‌ನಲ್ಲಿ ಹೊಡಿ-ಬಡಿ ಆಟದಲ್ಲೂ ಕಾಣಿಸಿಕೊಳ್ಳುತ್ತಾರೆ. ಅಪರೂಪಕ್ಕೆ ರಣಜಿಯನ್ನೂ ಆಡುತ್ತಾರೆ. ಇಲ್ಲಿ ಬಾಲ ಆಟಗಾರರಿಗೆ ಸಚಿನ್‌ ಜತೆ ಆಡುವ ಯೋಗ ಲಭಿಸುತ್ತದೆ. ಮೇಲೆ ಹೆಸರಿಸಿದ ಧವಳ್‌ ಕುಲಕರ್ಣಿ, ಅಜಿಂಕ್ಯ ರಹಾನೆ, ಅಭಿಷೇಕ್‌ ನಾಯರ್‌, ಆದಿತ್ಯ ತಾರೆ ಮೊದಲಾದ ಯುವಕರೆಲ್ಲ ತೆಂಡುಲ್ಕರ್‌ ಅವರ 4ನೇ ತಲೆಮಾರಿನ ಆಟಗಾರರಾಗಿ ಗುರುತಿಸಲ್ಪಡುತ್ತಾರೆ.

ಬಂದಷ್ಟೇ ವೇಗದಲ್ಲಿ ಮಾಯವಾಗುವ ನೂರಾರು ಕ್ರಿಕೆಟಿಗರ ನಡುವೆ ಸಚಿನ್‌ ತೆಂಡುಲ್ಕರ್‌ ಕ್ರಿಕೆಟಿನ 4 ತಲೆಮಾರುಗಳನ್ನು ಕಂಡದ್ದು, ಆಳಿದ್ದು, ಮೆರೆದದ್ದು ಸಾಮಾನ್ಯ ಸಾಧನೆಯಲ್ಲ.

ಟೀಮ್‌-1989

ಕೆ. ಶ್ರೀಕಾಂತ್‌ (ನಾಯಕ), ರವಿ ಶಾಸಿŒ (ಉಪನಾಯಕ), ರಮಣ್‌ ಲಾಂಬಾ, ನವಜೋತ್‌ ಸಿಂಗ್‌ ಸಿದ್ಧು, ಸಂಜಯ್‌ ಮಾಂಜ್ರೆàಕರ್‌, ಮೊಹಮ್ಮದ್‌ ಅಜರುದ್ದೀನ್‌, ಸಚಿನ್‌ ತೆಂಡುಲ್ಕರ್‌, ಕಪಿಲ್‌ದೇವ್‌, ಕಿರಣ್‌ ಮೋರೆ, ಮನೋಜ್‌ ಪ್ರಭಾಕರ್‌, ಅಜಯ್‌ ಶರ್ಮ, ವಿವೇಕ್‌ ರಾಜಾªನ್‌, ಸಲೀಲ್‌ ಅಂಕೋಲ, ಅರ್ಶದ್‌ ಅಯೂಬ್‌, ಮಣಿಂದರ್‌ ಸಿಂಗ್‌, ಡಬ್ಲ್ಯು.ವಿ. ರಾಮನ್‌.

ಟೀಮ್‌-2013

ಮಹೇಂದ್ರ ಸಿಂಗ್‌ ಧೋನಿ (ನಾಯಕ), ಶಿಖರ್‌ ಧವನ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ಸಚಿನ್‌ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ, ಆರ್‌. ಅಶ್ವಿ‌ನ್‌, ಭುವನೇಶ್ವರ್‌ ಕುಮಾರ್‌, ಪ್ರಗ್ಯಾನ್‌ ಓಜಾ, ಅಮಿತ್‌ ಮಿಶ್ರಾ, ಅಜಿಂಕ್ಯ ರಹಾನೆ, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ರೋಹಿತ್‌ ಶರ್ಮ, ಇಶಾಂತ್‌ ಶರ್ಮ.

ಸಚಿನ್‌ ಆಯ್ಕೆಗೆ ನಡೆದಿತ್ತು ಮತದಾನ!

ಸಚಿನ್‌ ತೆಂಡುಲ್ಕರ್‌ ಅವರನ್ನು 1989ರ ಪಾಕಿಸ್ಥಾನ ಪ್ರವಾಸಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಭಾರತೀಯ ಆಯ್ಕೆ ಸಮಿತಿಯಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ರಾಜ್‌ಸಿಂಗ್‌ ಡುಂಗರ್ಪುರ್‌ ನೇತೃತ್ವದ ಆಯ್ಕೆ ಸಮಿತಿ ಅಕ್ಷರಶಃ ಇಬ್ಭಾಗಗೊಂಡಿತ್ತು. ಕೆಲವರು ಸಚಿನ್‌ ಆಯ್ಕೆಯನ್ನು ಬೆಂಬಲಿಸಿದರೆ, ಅವರನ್ನು ಇಷ್ಟು ಬೇಗ ಆಯ್ಕೆ ಮಾಡಿ ಕ್ಯಾರಿಯರ್‌ ಹಾಳು ಮಾಡುವುದು ಬೇಡ ಎಂಬುದು ಇನ್ನುಳಿದವರ ವಾದವಾಗಿತ್ತು.

ಕಾರಣ ಸ್ಪಷ್ಟ. ಪಾಕಿಸ್ಥಾನ ಪ್ರವಾಸ ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಪಾಕ್‌ ನೆಲದಲ್ಲಿ ಭಾರತ ಆತನಕ ಒಂದೂ ಟೆಸ್ಟ್‌ ಪಂದ್ಯ ಗೆದ್ದಿರಲಿಲ್ಲ. ಇಮ್ರಾನ್‌ ಖಾನ್‌, ವಾಸಿಂ ಅಕ್ರಮ್‌, ಅಬ್ದುಲ್‌ ಕಾದಿರ್‌ ಅವರಂಥ ಘಾತಕ ಬೌಲರ್‌ಗಳನ್ನು ನಿಭಾಯಿಸಲು 16ರ ಹರೆಯದ ಹಾಲುಗಲ್ಲದ ಸಚಿನ್‌ ಶಕ್ತರೇ ಎಂಬ ಸಹಜ ಆತಂಕ ಆಯ್ಕೆ ಮಂಡಳಿಯನ್ನು ಕಾಡಿತ್ತು.

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆಯೂ ಸಚಿನ್‌ ಹೆಸರು ಪ್ರಸ್ತಾವಕ್ಕೆ ಬಂದಿತ್ತಾದರೂ ಆಯ್ಕೆ ಸಮಿತಿ ಒಕ್ಕೊರಲಿನಿಂದ ಕೆರಿಬಿಯನ್‌ ದೈತ್ಯರ ನಾಡಿಗೆ ಸಚಿನ್‌ನನ್ನು ಕಳುಹಿಸುವುದು ಬೇಡ ಎಂಬ ತೀರ್ಮಾನ ತೆಗೆದುಕೊಂಡಿತ್ತು.

ಪಾಕ್‌ ಪ್ರವಾಸದ ಆಯ್ಕೆ ವೇಳೆ ಸಚಿನ್‌ ಪರವಾಗಿ ಬ್ಯಾಟ್‌ ಬೀಸಲು ಆಯ್ಕೆ ಸಮಿತಿಯಲ್ಲಿ ಜನರಿದ್ದರು. ಆದರೆ ಇವರಲ್ಲಿ ಯಾರೂ ಪಟ್ಟು ಸಡಿಲಿಸಲು ತಯಾರಿರಲಿಲ್ಲ. ಕೊನೆಗೆ ಮತದಾನ ನಡೆಸುವುದೆಂದು ತೀರ್ಮಾನವಾಯಿತು. ಸಚಿನ್‌ ಪರವಾಗಿ ಅಂದು 3-2 ಮತಗಳು ಲಭಿಸಿದವು. ಇದನ್ನು ನೆನಪಿಸಿಕೊಂಡವರು ಅಂದಿನ ಆಯ್ಕೆ ಮಂಡಳಿಯ ಸದಸ್ಯ ಆಕಾಶ್‌ ಲಾಲ್‌.

ಈ ರೀತಿಯಾಗಿ ಭಾರತ ತಂಡ ಪ್ರವೇಶಿಸಿದ ತೆಂಡುಲ್ಕರ್‌ 24 ವರ್ಷಗಳ ಕಾಲ ಕ್ರಿಕೆಟ್‌ ಜಗತ್ತನ್ನು ಆಳಿದ್ದು ಈಗ ಇತಿಹಾಸ. ಅಂದು ತೆಂಡುಲ್ಕರ್‌ಗೆ ಓಟು ಹಾಕಿದವರಿಗೆ ಇಂದು ನಮ್ಮದೊಂದು ಓಟು!
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com