ಸಚಿನ್‌: ನಿವೃತ್ತಿ ಇಲ್ಲದ ದಂತಕತೆ...

ಜಾಗತಿಕ ಕ್ರಿಕೆಟಿಗೆ ಅನನ್ಯ ಭಾಷ್ಯವೊಂದನ್ನು ಬರೆದ, ವಿಶ್ವ ಹಾಗೂ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಧೀಮಂತ ಆಟಗಾರ ಸಚಿನ್‌ ತೆಂಡುಲ್ಕರ್‌ ಅವರಿಗೆ ಕ್ರಿಕೆಟ್‌ ಜಗತ್ತು ವಿದಾಯದ ಕಂಬನಿ ಮಿಡಿದಿದೆ.

24 ವರ್ಷಗಳ ಕಾಲ ಬ್ಯಾಟ್‌ ಎಂಬ ಮಂತ್ರದಂಡದಿಂದ ಕ್ರಿಕೆಟಿನ ಹರವನ್ನು ವಿಸ್ತಾರಗೊಳಿಸುತ್ತಲೇ ಸಾಗಿದ, ದಾಖಲೆಗಳನ್ನು ಅಗೆದಗೆದು ತನ್ನ ಹೆಸರಿಗೆ ಪೋಣಿಸುತ್ತ ಹೋದ ಚಾಂಪಿಯನ್‌ ಬ್ಯಾಟ್ಸ್‌ಮನ್‌ ಶನಿವಾರ ಕೊನೆಯ ಸಲ ಕಣ್ಣೀರು ಸುರಿಸುತ್ತ ಮೈದಾನದಿಂದ ಅದೃಶ್ಯವಾಗುತ್ತಿದ್ದಂತೆಯೇ ಕ್ರಿಕೆಟ್‌ ಲೋಕವೂ ಭಾವುಕಗೊಂಡಿತು. ಕ್ರಿಕೆಟ್‌ ದೇವರು ಇನ್ನೆಂದೂ ಬ್ಯಾಟ್‌ ಹಿಡಿದು ಬರುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ, ಆದರೆ ಇದು ಅನಿವಾರ್ಯವಾಗಿತ್ತು.

ಕ್ರಿಕೆಟ್‌ ರತ್ನಕ್ಕೆ ಭಾರತ ರತ್ನ

ವಿದಾಯದ ಬೆನ್ನಲ್ಲೇ ಸಚಿನ್‌ ತೆಂಡುಲ್ಕರ್‌ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಒಲಿದ ಸುದ್ದಿ ಹೊರಬಿತ್ತು. ಸಚಿನ್‌ ಆರಾಧಕರು, ಕ್ರೀಡಾಪ್ರೇಮಿಗಳು ಅಷ್ಟರ ಮಟ್ಟಿಗೆ ಸಮಾಧಾನಗೊಂಡರು. ಅಳುವಿನ ಕಡಲಲ್ಲಿ ನಗುವಿನ ಹಾಯಿದೋಣಿಯೊಂದು ಕಾಣಿಸಿಕೊಂಡಂತಾಗಿತ್ತು.

ಸಚಿನ್‌ ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಕ್ರೀಡಾಪಟು ಹಾಗೂ ಈ ಗೌರವ ಪಡೆದ ಅತೀ ಕಿರಿಯ ವ್ಯಕ್ತಿಯಾಗಿಯೂ ದಾಖಲೆ ಬರೆದರೆಂಬುದು ವಿಶೇಷ.

ಗೆಲುವಿನ ಸಂಭ್ರಮವಿಲ್ಲ

ನಿರೀಕ್ಷೆಯಂತೆ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯವನ್ನು ಭಾರತ ಎರಡೂವರೆ ದಿನಗಳೊಳಗೆ ಇನ್ನಿಂಗ್ಸ್‌ ಅಂತರದಲ್ಲೇ ಜಯಿಸಿತು. ಆದರೆ ಈ ಗೆಲುವಿನ ಖುಷಿ, ಭಾರತದ 2-0 ಕ್ಲೀನ್‌ಸಿÌàಪ್‌ ಸಾಧನೆಯ ಸಂಭ್ರಮ ಎಲ್ಲೂ ಕಾಣಿಸಲಿಲ್ಲ. ಅಲ್ಲಿ ದಟ್ಟೈಸಿದ್ದು ತೆಂಡುಲ್ಕರ್‌ ಅವರ ವಿದಾಯ ಕ್ಷಣದ ದುಃಖ ಹಾಗೂ ಕಣ್ಣೀರು; ಜತೆಗೆ ಭಾರಗೊಂಡ ಹೃದಯಗಳು. ತಮ್ಮ ಈ ಸುದೀರ್ಘ‌ ಕ್ರಿಕೆಟ್‌ ಬಾಳ್ವೆಯಲ್ಲಿ ಸಚಿನ್‌ ಮೊದಲ ಸಲ ಅತ್ತಾಗ, ಇದಕ್ಕೆ ಸ್ಪಂದಿಸದಿರಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಸಚಿನ್‌ ತೆಂಡುಲ್ಕರ್‌ ಬ್ಯಾಟ್‌ ಎಂಬ ಶಸ್ತ್ರವನ್ನು ತ್ಯಾಗ ಮಾಡಿದ ಬಳಿಕ ಮೈಕ್‌ ಹಿಡಿದು ಮಾತನಾಡಲು ಸಜ್ಜಾದಾಗ ಅಭಿಮಾನಿಗಳು ನೋವಿನ ನಡುವೆಯೂ ಹರ್ಷೋದ್ಗಾರಗೈದರು. ಅವರ ಮಾತು ಆರಂಭವಾಗುತ್ತಿದ್ದಂತೆ ಮತ್ತೆ ನೀರವ ಮೌನ. ತಂದೆ-ತಾಯಿ, ಕೋಚ್‌, ಅಣ್ಣ, ಪತ್ನಿ, ಮಕ್ಕಳು, ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌, ಬಿಸಿಸಿಐ... ಹೀಗೆ ಎಲ್ಲರ ಸಹಕಾರವನ್ನು ಸ್ಮರಿಸಿದರು. ತನ್ನೊಂದಿಗೆ ಆಡಿದ ಸಹ ಆಟಗಾರರನ್ನೂ ಮರೆಯಲಿಲ್ಲ. ಕೊನೆಯಲ್ಲಿ, ತನ್ನನ್ನು ಇಷ್ಟು ವರ್ಷಗಳ ಕಾಲ ಬೆಂಬಲಿಸುತ್ತ ಬಂದ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.

ಕೊನೆಯಲ್ಲಿ ಏಕಾಂಗಿಯಾಗಿ ನಡು ಮೈದಾನಕ್ಕೆ ತೆರಳಿ ವಾಂಖೇಡೆ ಪಿಚ್‌ಗೆ ಬಾಗಿ ನಮಸ್ಕರಿಸಿದ ತೆಂಡುಲ್ಕರ್‌ ಪೆವಿಲಿಯನ್‌ ಕಡೆ ಭಾರವಾದ ಹೆಜ್ಜೆಗಳನ್ನಿಡತೊಡಗಿದರು. ಕ್ರಿಕೆಟ್‌ ಬಾಂದಳದಲ್ಲಿ ಪ್ರಜ್ವಲಿಸುತ್ತ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದಂತೆ ಭಾಸವಾದದ್ದು ಸುಳ್ಳಲ್ಲ.

ಸಚಿನ್‌ ತೆಂಡುಲ್ಕರ್‌ ಅವರೇನೋ ಕ್ರಿಕೆಟಿಗೆ ನಿವೃತ್ತಿ ಹೇಳಿರಬಹುದು, ಆದರೆ ಅಭಿಮಾನಿಗಳ ಹೃದಯದಿಂದ ಮಾತ್ರ ಅವರಿಗೆ ನಿವೃತ್ತಿ ಇಲ್ಲ. ಅಷ್ಟೇ ಅಲ್ಲ, ದಂತಕತೆಗೆ ನಿವೃತ್ತಿ ಎಂಬುದಿಲ್ಲ, ಅದು ನಿರಂತರ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com