ಉಗ್ರರೊಂದಿಗೆ ನಂಟು; ಇದೆಲ್ಲಾ ಗಂಡನ ಮನೆಯವರ ಸಂಚು: ಯಶೋದಾ

ಉಡುಪಿ: 'ಯಾಸಿನ್‌ ಭಟ್ಕಳ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನೊಬ್ಬ ಸಾಮಾನ್ಯ ಮಹಿಳೆ. ಜೀವನಕ್ಕೆ ಸ್ವಂತ ಉದ್ಯೋಗ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದೇನೆ. ನನ್ನ ಗಂಡ ಬದುಕಿರುವಾಗ ಆತನೊಂದಿಗೆ ನನ್ನ ತಮ್ಮ ಬಂದಿದ್ದ. ಆತನನ್ನೇ ಯಾಸಿನ್‌ ಭಟ್ಕಳ್‌ ಎಂದು ತೋರಿಸಿ ನನ್ನ ಗಂಡನ ಮನೆಯವರು ಟಿವಿ ಚಾನೆಲ್‌ ಮೂಲಕ ಅಪಪ್ರಚಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ' ಎಂದು ಯಶೋದಾ ತಿಳಿಸಿದ್ದಾರೆ.

ಒಂದು ಟಿವಿ ಚಾನೆಲ್‌ ಸಹಿತ ಮಾಧ್ಯಮ ನಡೆಸಿದ ಅಪಪ್ರಚಾರದಿಂದ ಉಪ್ಪಿನಕೋಟೆಯಲ್ಲಿ ಬ್ಯೂಟಿಪಾರ್ಲರ್‌ ನಡೆಸುತ್ತಿರುವ ನಾನು ಮತ್ತು ನನ್ನ ಪುತ್ರ ಮಾನಸಿಕ ಖನ್ನತೆಗೆ ಒಳಗಾಗಿದ್ದೇವೆ. ನಾನು ಈಗ ನ್ಯಾಯ ಸಿಗಲು ನ್ಯಾಯಾಲಯ, ಪೊಲೀಸ್‌ ಠಾಣೆಗಳ ಮೆಟ್ಟಿಲು ಹತ್ತುತ್ತಿದ್ದರೆ 8ನೆಯ ತರಗತಿ ಬಾಲಕ ಶಾಲೆಗೆ ಹೋಗಲು ಕೇಳುತ್ತಿಲ್ಲ ಎಂದು ಯಶೋದಾ ತನ್ನ ಸಂಕಷ್ಟ ತೋಡಿಕೊಂಡರು.

ಯಶೋದಾ ತಿಳಿಸುವ ಪ್ರಕಾರ ಅವರ ಜೀವನಗಾಥೆ ಹೀಗಿದೆ: ಯಶೋದಾ ಸ್ವಂತ ಊರು ಸಾಸ್ತಾನ ಸಮೀಪದ ಗುಂಡ್ಮಿ. 1999ರಲ್ಲಿ ಮದುವೆಯಾದದ್ದು ಶಿವಮೊಗ್ಗದ ಮಂಜುನಾಥರೊಂದಿಗೆ. ಅನಂತರ ಮನೆಯವರ ಕಿರಿಕಿರಿ ತಾಳಲಾರದೆ ತೀರ್ಥಹಳ್ಳಿಯಲ್ಲಿ ನೆಲೆಸಿದರು. ಮಂಜುನಾಥ ಮರದ ವ್ಯಾಪಾರ ನಡೆಸುತ್ತಿದ್ದರು. 2011ರಲ್ಲಿ ಯಶೋದಾ ತಂಗಿ ಸುರೇಖಾ ಅವರ ಮುಂಬೈ ಮನೆಗೆ ಹೋದಾಗ ತೀರ್ಥಹಳ್ಳಿಯಲ್ಲಿ ಗಂಡ ಆತ್ಮಹತ್ಯೆ ಮಾಡಿಕೊಂಡರು. ಮರಣಪತ್ರವೂ ಇದೆ. ಆಗಲೂ ಮತ್ತು ಇಂದಿನವರೆಗೂ ಗಂಡನ ಮನೆಯವರು ಇಲ್ಲದ ಕಿರಿಕಿರಿ ಕೊಡುತ್ತಿದ್ದಾರೆ. ಗಂಡನನ್ನು ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಿದರು. ತೀರ್ಥಹಳ್ಳಿ ಎಸ್‌ಐ ಆನಂದ್‌, ಸಿಪಿಐ ಲಿಂಗದಾಳ್‌, ಹೊಸನಗರ ಸಿಪಿಐ ತನಿಖೆ ಮಾಡಿದ ಅನಂತರವೂ ಸಿಐಡಿಗೆ ವಹಿಸಿಕೊಟ್ಟರು. 2012ರಲ್ಲಿ ಸಿಐಡಿ ಅಧಿಕಾರಿ ಜಿ.ಆರ್‌.ಸಂಗನಾಥ್‌ ಅವರೂ ಬಿ ರಿಪೋರ್ಟ್‌ ಸಲ್ಲಿಸಿದರು. ಆದರೂ ಗಂಡನ ಮನೆಯವರ ಕಿರಿಕಿರಿ ತಪ್ಪಿಲ್ಲ.

ಗಂಡನ ಸಾವಿನ ಅನಂತರ ತನಿಖೆ ನಡೆಯುತ್ತಿರುವ ಹೊತ್ತಿಗೆ ಉಪ್ಪಿನಕೋಟೆಗೆ ಬಂದು ಬ್ಯೂಟಿಪಾರ್ಲರ್‌ ಆರಂಭಿಸಿದರು. ಗುಂಡ್ಮಿಯ ಮನೆಗೆ ಕಳ್ಳರನ್ನು ನುಗ್ಗಿಸಿ ಉಪದ್ರ ಕೊಟ್ಟರು. ಹೀಗಾಗಿ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿದರು.

ಈಗ ಯಾಸಿನ್‌ ಭಟ್ಕಳ ನಂಟು ಇದೆ ಎಂದು ಚಾನೆಲ್‌ ಪ್ರಚಾರ ಮಾಡಿಸಿದ್ದಾರೆ. 2011ರಲ್ಲಿ ಗಂಡ ತೀರಿಹೋಗುವ ಮುನ್ನ ತೀರ್ಥಹಳ್ಳಿ ಹಣಗೇರಿಕಟ್ಟೆಯಲ್ಲಿ ಕುರಿ ಹರಕೆ ಕೊಟ್ಟಾಗ ನನ್ನ ಚಿಕ್ಕಮ್ಮನ ಮಗ (ತಮ್ಮ) ಉಡುಪಿಯ ಸುಭಾಶ್‌ ಗಂಡನ ಜೊತೆಯಲ್ಲಿದ್ದರು. ಆತನನ್ನೇ ಯಾಸಿನ್‌ ಎಂದು ಬಿಂಬಿಸಿ ಪ್ರಚಾರ ಮಾಡುತ್ತಿದ್ದಾರೆ. ನಾನು ಆ ಚಾನೆಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಗಂಡನ ಮನೆಯವರ ವಿರುದ್ಧವೂ ಪ್ರಕರಣ ದಾಖಲಿಸುತ್ತೇನೆ. ಈಗ ಪ್ರಕರಣ ದಾಖಲಿಸಬೇಡಿ ಎಂದು ಒತ್ತಡ ತರುತ್ತಿದ್ದಾರೆ. ನನಗಾದ ಅವಮಾನಕ್ಕೆ ಇವರು ಏನು ಹೇಳುತ್ತಾರೆ? ಹಿಂದೆ ನಾನು ಮುಂಬೈಗೆ ಹೋದ ಟಿಕೆಟ್‌, ವಾಸದ ಕುರಿತು, ದೂರವಾಣಿ ವಿವರ ಇತ್ಯಾದಿ ಎಲ್ಲಾ ದಾಖಲೆಗಳನ್ನೂ ತನಿಖೆ ನಡೆಸಿಯಾಗಿದೆ. ಈಗ ಯಾವುದೇ ಪುರಾವೆಗಳಿಲ್ಲದೆ ಅಪಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ನಾನು ಕೆಲಸ ಮಾಡುವಂತೆಯೂ ಇಲ್ಲ, ಮಗನೂ ಶಾಲೆಗೆ ಹೋಗಲು ಒಪ್ಪುತ್ತಿಲ್ಲ. ನಾನು ತೀರ್ಥಹಳ್ಳಿಯಲ್ಲಿದ್ದದ್ದು ಎಂಟು ವರ್ಷ. ಅಲ್ಲಿನ ಜನರು ನನಗೆ ಬೆಂಬಲ ಕೊಡುತ್ತಿದ್ದರೆ, ನಾನು ಹುಟ್ಟಿ ಬೆಳೆದ ಊರಿನಲ್ಲಿ ಸಂಶಯದಿಂದ ನೋಡುತ್ತಿದ್ದಾರೆ. ಎಷ್ಟೇ ಕಷ್ಟವಾದರೂ ನ್ಯಾಯಕ್ಕಾಗಿ ಹೋರಾಟ ಮಾಡುವೆ ಎಂದು ಯಶೋದಾ ತಿಳಿಸಿದ್ದಾರೆ.

Udayavani | Nov 25, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com