ಅಧಿಕ ಬೋಟುಗಳಿಂದ ಸಮಸ್ಯೆ: ಕೇಶವ ಕುಂದರ್

ಬೈಂದೂರು: ಇಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೈಸ್ಪೀಡ್ ಬೋಟುಗಳು ನಡೆಸುತ್ತಿರುವ ಬುಲ್‌ಟ್ರಾಲ್ ಮೀನುಗಾರಿಕೆ ಜಟಿಲ ಸಮಸ್ಯೆಯಾಗಿದೆ. ಇತ್ತೀಚೆಗೆ ಅಧಿಕಾರಿಗಳು ವಿವೇಚನಾ ರಹಿತರಾಗಿ ನೂತನ ಬೋಟ್ ಅಳವಡಿಸಲು ಅರ್ಹತಾ ಪತ್ರ ವಿತರಿಸುತ್ತಿರುವ ಹಿನ್ನೆಲೆಯಲ್ಲಿ ಬೋಟ್‌ಗಳ ಸಂಖ್ಯೆ ಸಹಜವಾಗಿಯೇ ಅಧಿಕವಾಗಿದ್ದು, ಇಂದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅಖಿಲ ಕರ್ನಾಟಕ ಕರಾವಳಿ ಸಾಂಪ್ರದಾಯಿಕ ಮೀನುಗಾರ ಕ್ರಿಯಾ ಸಮಿತಿ ಅಧ್ಯಕ್ಷ ಕೇಶವ ಕುಂದರ್ ಹೇಳಿದ್ದಾರೆ. 

ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಗಂಗೊಳ್ಳಿ ಪರ್ಶಿಯನ್ ಬೋಟ್ ಮೀನುಗಾರ ಸ್ವಸಹಾಯ ಸಂಘ, ಗಂಗೊಳ್ಳಿ ಮೀನುಗಾರ ಕಾರ್ಮಿಕ ಸಂಘ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ, ಗಂಗೊಳ್ಳಿ ನಾಡದೋಣೆ ಸಂಘ, ಶಿರೂರು ನಾಡದೋಣಿ ಮೀನುಗಾರರ ಸಂಘ, ಶಿರೂರು ಅಲ್ಪಸಂಖ್ಯಾತರ ಮೀನುಗಾರ ಸಂಘ ಸೇರಿದಂತೆ ಕುಂದಾಪುರ ತಾಲೂಕು ವ್ಯಾಪ್ತಿಯ ನಾನಾ ಮೀನುಗಾರಿಕೆ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. 

ಸರಕಾರ ಮೀನುಗಾರರಿಗಾಗಿ ಹಲವು ಮೀನುಗಾರಿಕೆ ನೀತಿಗಳನ್ನು ರೂಪಿಸಿದರೂ ಮೀನುಗಾರರೇ ಆ ನೀತಿಗಳನ್ನು ಉಲ್ಲಂಘಿಸುತ್ತಿರುವುದು ವಿಪರ್ಯಾಸ. ಈ ಬಗ್ಗೆ ನಿರ್ಬಂಧ ಅಳವಡಿಸಿಕೊಳ್ಳಬೇಕಾಗಿದೆ ಎಂದ ಅವರು, ಇಂದಿನ ಎಲ್ಲ ಸಮಸ್ಯೆಗಳ ಬಗ್ಗೆ ಮೀನುಗಾರ ಸಂಘಟನೆಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕೆ ಕಾಲಾವಕಾಶದ ಅಗತ್ಯತೆಯಿದ್ದು, ಅಲ್ಲಿಯ ತನಕ ಮೀನುಗಾರರು ಶಾಂತಿಯುತರಾಗಬೇಕು. ಯಾರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು. 

ಅಖಿಲ ಕರ್ನಾಟಕ ಕರಾವಳಿ ಸಾಂಪ್ರದಾಯಿಕ ಮೀನುಗಾರ ಕ್ರಿಯಾ ಸಮಿತಿ ಕಾರ್ಯಾಧ್ಯಕ್ಷ ಲೋಕನಾಥ ಬೋಳಾರ್ ಮಾತನಾಡಿ, ಮೀನು ಸಂತತಿ ನಿರ್ನಾಮವಾಗುತ್ತಿದ್ದು, ಅದರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಮೀನುಗಾರಿಕೆ ನೀತಿ ರೂಪಿಸಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಮೀನು ಸಂತತಿ ನಾಶವಾದರೂ ಅಚ್ಚರಿಪಡಬೇಕಿಲ್ಲ ಎಂದರು. 

ಇಂದಿನ ಎಲ್ಲ ಸಮಸ್ಯೆಯ ಸಾಧಕ ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಎಲ್ಲ ಮೀನುಗಾರಿಕೆ ಸಂಘಟನೆಗಳ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸಮಗ್ರ ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಇದನ್ನು ಕಾನೂನಾಗಿ ಮಾರ್ಪಾಡು ಮಾಡುವ ಹೊಣೆ ಸರಕಾರದ ಮೇಲಿದ್ದು, ಸರಕಾರ ಸಾಂಪ್ರದಾಯಿಕ ಮೀನುಗಾರರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ನೀತಿ ರೂಪಿಸುವ ಬಗ್ಗೆ ಚಿಂತನೆ ಮಾಡಬೇಕು ಎಂದರು. 

ಬೈಂದೂರು ವಲಯ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ರಾಮಚಂದ್ರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರ ಮುಖಂಡರಾದ ಮದನ ಕುಮಾರ, ಅಣ್ಣಪ್ಪ ಖಾರ್ವಿ, ಗಂಗೊಳ್ಳಿ ನಾಡದೋಣಿ ಮೀನುಗಾರ ಸಂಘದ ಕಾರ್ಯದರ್ಶಿ ನಾಗಪ್ಪಯ್ಯ, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿ ಉಪಾಧ್ಯಕ್ಷ ಆನಂದ ಕುಂದರ್, ಕಾರ್ಯದರ್ಶಿ ವಾಸುದೇವ ಬೋಳಾರ್, ನಾಗಪ್ಪಯ್ಯ ಮೊಗವೀರ, ಶಿರೂರು ಅಲ್ಪಾಸಂಖ್ಯಾತರ ಮೀನುಗಾರ ಸಂಘದ ಇಸೂಬ್ ಸಾಹೇಬ್ ಉಪಸ್ಥಿತರಿದ್ದರು. ಮಂಜುನಾಥ ಜಿ. ಪ್ರಾಸ್ತಾವಿಕ ಮಾತನಾಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com