ಸಹಜ ಆಹಾರದಿಂದ ರೋಗ ನಿಯಂತ್ರಣ: ಡಾ. ಖಾದರ್

ಕುಂದಾಪುರ: ಸ್ಥಳೀಯವಾಗಿ ಸಹಜವಾಗಿ ಬೆಳೆಯತಕ್ಕ ಸಸ್ಯಜನ್ಯ ಆಹಾರ ಸೇವನೆಯಿಂದ ರೋಗಮುಕ್ತ ಜೀವನ ನಡೆಸಬಹುದು. ಆಧುನಿಕತೆಯ ಗಾಳಿಯಿಂದಾಗಿ ಜನರು ಹೆಚ್ಚಾಗಿ ಬೇಕರಿ ತಿನಿಸುಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದ ಉಂಟಾಗುವ ತೊಂದರೆ ಅನೇಕ ರೀತಿಯದ್ದು ಎಂದು ಮೈಸೂರಿನ ಕೃಷಿ ವಿಜ್ಞಾನಿ ಡಾ. ಖಾದರ್ ಹೇಳಿದರು. 

ಇಲ್ಲಿನ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಜರುಗಿದ ಆರೋಗ್ಯಕ್ಕಾಗಿ ಆಹಾರ-ಆಹಾರಕ್ಕಾಗಿ ಕೃಷಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

ಪರಿಸರದಲ್ಲಿಯೇ ಅನೇಕ ರೀತಿಯ ಔಷಧೀಯ ಸಸ್ಯಗಳಿವೆ. ಹಿಂದಿನ ಪಾರಂಪರಿಕ ಬದುಕಿನಲ್ಲಿ ಅವರು ಹಾಸು ಹೊಕ್ಕಾಗಿದ್ದವು. ಡಯಾಬಿಟಿಸ್, ಕೊಲೆಸ್ಟರಾಲ್‌ನಂತಹ ಹೆಚ್ಚು ಕಾಡುವ ಕಾಯಿಲೆಗಳಿಗೆ ಅವುಗಳು ತಡೆಯೊಡ್ಡುತ್ತಿದ್ದವು. ನಗರೀಕರಣದ ಬದುಕಿನಿಂದಾಗಿ ಔಷಧೀಯ ಸಸ್ಯಗಳ ಬೆಳೆಸುವಿಕೆ, ಧಾನ್ಯಗಳ ಬೆಳೆಸುವಿಕೆ ಕಡಿಮೆಯಾಗುತ್ತಿವೆ. ಅವುಗಳ ಸೇವನೆಯಿಂದಲೂ ನಾವು ದೂರ ಸರಿಯುತ್ತಿದ್ದೇವೆ. ಇದರಿಂದ ವ್ಯತಿರಿಕ್ತ ಪರಿಣಾಮ ನಾವು ಎದುರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. 

ಸಂಪನ್ಮೂಲ ವ್ಯಕ್ತಿ ಕೃಷಿಕ ಅನಿಲ್ ಹೆಗ್ಡೆ ಮಾತನಾಡಿ, 1991ರಲ್ಲಿ ದೇಶಕ್ಕೆ ವಿದೇಶಿ ಆರ್ಥಿಕ ನೀತಿ ಜಾರಿಗೊಂಡ ಬಳಿಕ ನಾವು ತಿನ್ನುವ ಪ್ರತಿಯೊಂದು ಆಹಾರವೂ ರಾಸಾಯಿನಿಕದಿಂದ ಕೂಡಿವೆ. ಪ್ರಾದೇಶಿಕ ಕೃಷಿ ಪದ್ಧತಿ ಕ್ಷೀಣಿಸುತ್ತಿದೆ. ದೇಶದ ಉದ್ದಗಲಕ್ಕೂ ಈ ಪಿಡುಗು ಆವರಿಸಿದೆ. ನಮ್ಮ ರೈತರು ಸಹಜ ಕೃಷಿಗೆ ಒತ್ತು ನೀಡಬೇಕು ಎಂದರು. 

ತುಮಕೂರು ಕಾಳಿದಾಸ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಸಿ. ಯತಿರಾಜ್ ನಮ್ಮ ಬದುಕನ್ನು ಆಧರಿಸುವ ಉತ್ತಮ ಕೃಷಿ ಪದ್ಧತಿಯ ಕುರಿತು ಉದಾಹರಣೆ ಸಹಿತ ಮಾಹಿತಿ ನೀಡಿದರು. 

ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಬಸವರಾಜ್ ಮುಧೋಳ್ ವಿಚಾರ ಸಂಕಿರಣ ಉದ್ಘಾಟಿಸಿ, ಕೃಷಿಗೆ ನೀಡುವ ಸವಲತ್ತು ಕುರಿತು ಮಾಹಿತಿ ನೀಡಿದರು. ಸಿದ್ಧಾಪುರ ರುಡ್ನ್ಯಾಪ್ ಸಂಸ್ಥೆಯ ಅಧ್ಯಕ್ಷ ರಾಜಗೋಪಾಲ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಉಪಸ್ಥಿತರಿದ್ದರು. 


ಚಂದ್ರಶೇಖರ ಅಡಿಗ ಪ್ರಾರ್ಥಿಸಿದರು. ರುಡ್ನ್ಯಾಪ್ ಸಂಸ್ಥೆಯ ಕಾರ್ಯದರ್ಶಿ ಪ್ರಸನ್ನ ಅಡಿಗ ಸ್ವಾಗತಿಸಿದರು. ಶ್ರೀಧರ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಹೆಬ್ಬಾರ್ ವಂದಿಸಿದರು. ರೋಟರಿ ಕ್ಲಬ್ ಕುಂದಾಪುರ, ಭಾರತೀಯ ಕಿಸಾನ್ ಸಂಘ ಕುಂದಾಪುರ, ಸೌಭಾಗ್ಯ ಸಾವಯವ ಕೃಷಿ ಪರಿವಾರ ಕುಂದಾಪುರ ಮತ್ತು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com